ಹೆಚ್ಚುತ್ತಿದೆ ಬಿಸಿಲಝಳ, ಇನ್ನೊಂದೆಡೆ ಕೊರೊನಾ ಭೀತಿ : ಮಾಸ್ಕ್ ನಿಂದ ಹೈರಾಣಾದ್ರು ಶಿಕ್ಷಕರು, ವಿದ್ಯಾರ್ಥಿಗಳು ..!!

ಬೆಂಗಳೂರು : ರಾಜ್ಯದಲ್ಲಿ ಒಂದೆಡೆ ಕೊರೊನಾ ಭೀತಿ, ಇನ್ನೊಂದೆಡೆ ಹೆಚ್ಚುತ್ತಿರುವ ಬಿಸಿಲ ಝಲ. ನಡುವಲ್ಲೇ ದಿನವಿಡೀ ಮಾಸ್ಕ್ ಧರಿಸಿಯೇ ಶಾಲೆಗೆ ಹಾಜರಾಗಬೇಕಾದ ಸ್ಥಿತಿಯಿಂದ ಶಿಕ್ಷಕರು, ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

ಹೌದು, ಕೊರೊನಾ ವೈರಸ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಲೇ ಶಿಕ್ಷಣ ಇಲಾಖೆ ರಾಜ್ಯದಲ್ಲಿ ಶಾಲೆಗಳನ್ನು ಪುನರಾರಂಭಿಸಿದೆ. ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಲ್ಲ ಅಂತಾ ಶಿಕ್ಷಣ ಸಚಿವರು ಹೇಳುತ್ತಿದ್ದರೂ ಕೂಡ, ಶಾಲೆಗಳು ಮಾತ್ರ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಹಾಜರಾಗಲೇ ಬೇಕೆಂದು ಪರ್ಮಾನು ಹೊರಡಿಸುತ್ತಿವೆ. ಹೀಗಾಗಿ ವಿದ್ಯಾರ್ಥಿಗಳು ಮನಸ್ಸಿಲ್ಲದ ಮನಸ್ಸಿನಿಂದ ಶಾಲೆಗೆ ಹಾಜರಾಗುತ್ತಿದ್ದಾರೆ.

ಆದರೆ ದಿನ ಕಳೆಯುತ್ತಿದ್ದಂತೆಯೇ ರಾಜ್ಯದಲ್ಲಿ ತಾಪಮಾನ ಹೆಚ್ಚುತ್ತಿದೆ. ಕರಾವಳಿ, ಮಲೆನಾಡು, ಬಯಲು ಸೀಮೆಯ ಭಾಗಗಳಲ್ಲಿ ತಾಪಮಾನ ವಿಪರೀತವಾಗಿ ಏರಿಕೆಯಾಗಿದೆ. ಅದ್ರಲ್ಲೂ ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಸೆಖೆಯನ್ನು ತಾಳೋದಕ್ಕೆ ಸಾಧ್ಯವಾಗುತ್ತಿಲ್ಲ. ಮಾರ್ಚ್ ಆರಂಭದಲ್ಲಿಯೇ 39 ಡಿಗ್ರಿಯಷ್ಟು ತಾಪಮಾನ ಕರಾವಳಿ ಭಾಗದಲ್ಲಿ ದಾಖಲಾಗುತ್ತಿದೆ. ಅಲ್ಲದೇ ರಾಜ್ಯದ ಬಹುತೇಕ ಕಡೆಗಳಲ್ಲಿನ ತಾಪಮಾನ 35 ಡಿಗ್ರಿ ಸೆಲಿಯಸ್ಸ್ ಗಿಂತಲೂ ಹೆಚ್ಚಿದೆ.

ಕೊರೊನಾ ವೈರಸ್ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗು ಶಿಕ್ಷಕರು ದಿನವಿಡೀ ಮಾಸ್ಕ್ ಧರಿಸಿಯೇ ಇರಬೇಕಾದ ಪರಿಸ್ಥಿತಿ ಬಂದೊದಗಿದೆ. ಆದರೆ ಸೆಖೆ, ಹೆಚ್ಚುತ್ತಿರುವ ತಾಪಮಾನದಿಂದಾಗಿ ಶಾಲೆಗಳಲ್ಲಿ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಿದೆ. ದಿನವೀಡಿ ಮಾಸ್ಕ್ ಧರಿಸಿಯೇ ಇರಬೇಕಾಗಿರೋದ್ರಿಂದಾಗಿ ಉಸಿರಾಟದ ಸಮಸ್ಯೆಗಳು ಎದುರಾಗುತ್ತಿದೆ. ಇನ್ನು ಹಲವು ಕಡೆಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದ್ದು, ಮುಂದಿನ ಎರಡು ತಿಂಗಳು ಭಯಾನಕವಾಗಿರಲಿದೆ ಅನ್ನೋ ಆತಂಕ ಜನರನ್ನು ಕಾಡುತ್ತಿದೆ.

ಸಾಮಾನ್ಯವಾಗಿ ಬೇಸಿಗೆಯ ಕಾರಣದಿಂದಲೇ ಶಾಲೆ, ಕಾಲೇಜುಗಳಿಗೆ ಎಪ್ರೀಲ್, ಮೇ ತಿಂಗಳಲ್ಲಿ ಬೇಸಿಗೆ ರಜೆ ನೀಡುವ ಪರಿಪಾಠ ಹಲವು ದಶಕಗಳಿಂದಲೂ ನಡೆದುಕೊಂಡು ಬಂದಿದೆ. ಆದರೆ ಶಿಕ್ಷಣ ಇಲಾಖೆಯ ಎಡವಟ್ಟು ನಿರ್ಧಾರದಿಂದಾಗಿ ಈ ಬಾರಿ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ವಿದ್ಯಾರ್ಥಿಗಳು ಶಾಲೆಗೆ ತೆರಳಬೇಕಾದ ದುಸ್ಥಿತಿ ಬಂದೊದಗಿದೆ. ಮುಂದಿನ ಎರಡು ತಿಂಗಳು ಮಕ್ಕಳನ್ನು ಶಾಲೆಗೆ ಕಳುಹಿಸೋದು ಹೇಗೆ ಅನ್ನೋ ಚಿಂತೆ ಪೋಷಕರನ್ನು ಕಾಡುತ್ತಿದೆ. ಶಿಕ್ಷಣ ತಜ್ಞರೆನಿಸಿಕೊಂಡವರಿಗೆ ಬೇಸಿಗೆ ಬಿಸಿಲ ಝಳ ಅರ್ಥವಾಗದೇ ಹೋಯಿತೇ..? ಕೊರೊನಾ ಸಂಕಷ್ಟದ ಕಾಲದಲ್ಲಿಯೂ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿದ್ಯಾಗಮ, ಚಂದನವಾಹಿನಿ ಮೂಲಕ ಪಾಠ ಬೋಧನೆಯನ್ನು ಮಾಡಿದ್ದಾರೆ. ಎಲ್ಲಾ ಪಾಠಗಳನ್ನು ಬೋಧಿಸಿದ್ದರು. ಆದರೆ ಶಾಲೆಗಳು ಆರಂಭವಾದ ನಂತರದಲ್ಲಿ ಆರಂಭದಿಂದಲೂ ಪಾಠ ಬೋಧಿಸೋದಕ್ಕೆ ಶಿಕ್ಷಣ ಇಲಾಖೆ ಸೂಚನೆಯನ್ನು ನೀಡಿದೆ. ಈ ಬಾರಿ ಕೊರೊನಾ ಕಾರಣದಿಂದ ಮಾರ್ಚ್ ಅಂತ್ಯದಲ್ಲಿಯೇ ಎಸ್ಎಸ್ಎಲ್ ಸಿ ಸೇರಿದಂತೆ ಎಲ್ಲಾ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಬಹುದಿತ್ತು. ಕೊರೊನಾ ಹಿನ್ನೆಲೆಯಲ್ಲಿ ಸುಲಭ ಪರೀಕ್ಷೆಯನ್ನೂ ನಡೆಸಲು ಅವಕಾಶವಿತ್ತು. ಅಷ್ಟೇ ಯಾಕೆ ಪಠ್ಯಕ್ರಮದಲ್ಲಿಯೂ ಕಡಿತ ಮಾಡಬಹುದಿತ್ತು. ಹೀಗೆ ಮಾಡಿದ್ರೆ ಜೂನ್ ತಿಂಗಳಿನಿಂದಲೇ ಮುಂದಿನ ಶೈಕ್ಷಣಿಕ ವರ್ಷವನ್ನು ಆರಂಭಿಸಬಹುದಿತ್ತು ಅನ್ನೋ ಮಾತುಗಳು ಕೇಳಿಬರುತ್ತಿದೆ.

https://kannada.newsnext.live/good-news-for-teachers-appointment/

ಬಹುತೇಕ ರಾಜ್ಯಗಳು ಕಳೆದ ಬಾರಿ ಎಸ್ಎಸ್ಎಲ್ ಸಿ ಪರೀಕ್ಷೆಯನ್ನೇ ರದ್ದುಗೊಳಿಸಿ, ಹಿಂದಿನ ವರ್ಷದ ಅಂಕದ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಿತ್ತು. ಈ ಬಾರಿಯೂ ಬಹುತೇಕ ರಾಜ್ಯಗಳು ಆನ್ ಲೈನ್ ಮೂಲಕ ಪಾಠ ಬೋಧನೆಯನ್ನು ಮಾಡಿ ನಿಗದಿತ ಅವಧಿಯಲ್ಲಿಯೇ ಪರೀಕ್ಷೆ ನಡೆಸಲು ಸಜ್ಜಾಗಿವೆ. ಆದರೆ ರಾಜ್ಯದ ಶಿಕ್ಷಣ ಇಲಾಖೆ ಸಾಧಕ ಬಾಧಕಗಳನ್ನು ಯೋಚಿಸಿದೆ ಕೈಗೊಂಡ ನಿರ್ಧಾರದಿಂದಾಗಿ ಶಿಕ್ಷಕರು, ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇನ್ನೊಂದೆಡೆ ರಾಜ್ಯದಲ್ಲೀಗ ಕೊರೊನಾ ಎರಡನೇ ಅಲೆಯ ಭೀತಿ ಎದುರಾಗಿದೆ. ಬಹುತೇಕ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳೂ ಕೂಡ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಈ ನಡುವಲ್ಲೇ ಸೋಂಕಿತರ ಪ್ರಮಾಣ ಹೆಚ್ಚಳವಾಗುತ್ತಿರೋದು ಶಿಕ್ಷಕರನ್ನು ಇಕ್ಕಟ್ಟಿಗೆ ಸಿಲುಕಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾರ್ಚ್ 17ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಭೆಯ ಬಳಿಕ ಶಾಲೆ, ಕಾಲೇಜು ಸೇರಿದಂತೆ ಇನ್ನಷ್ಟು ಕಠಿಣ ನಿರ್ಧಾರ ಕೈಗೊಳ್ಳುವುದಾಗಿಯೂ ತಿಳಿಸಿದ್ದಾರೆ. ಒಟ್ಟಿನಲ್ಲಿ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಮಾತುಗಳು ಕೇಳಿ ಬರುತ್ತಿದೆ.

https://kannada.newsnext.live/lady-escape-highschool-student-diffrent-love/

Comments are closed.