ಆ ಹಳ್ಳಿಯಲ್ಲಿ ಮಕ್ಕಳಿಗೆ ಲೌಡ್ ಸ್ಪೀಕರ್ ಎಜುಕೇಷನ್ !

0
  • ಪಂಜು ಗಂಗೊಳ್ಳಿ

ಲಾಕ್ ಡೌನ್ ಕಾರಣದಿಂದಾಗಿ ಕಾರಣ ಶಾಲೆಗಳು ಮುಚ್ಚಿದ್ದು ದೇಶದಾದ್ಯಂತ ಆನ್ ಲೈನ್ ಕಲಿಕೆ ಶುರುವಾಗಿದೆ. ನಗರ, ಪೇಟೆ ಮಕ್ಕಳು, ಉಳ್ಳವರ ಮಕ್ಕಳು ಬಹುಸುಲಭದಲ್ಲಿ ಆನ್ ಲೈನ್ ಶಿಕ್ಷಣ ಪಡೆಯಬಹುದು.

ಆದರೆ ದುಬಾರಿ ಸ್ಮಾರ್ಟ್ ಫೋನ್, ವಿದ್ಯುತ್ ಸಂಪರ್ಕ, ಗುಣಮುಟ್ಟವಿಲ್ಲದ ದುರ್ಬಲ ಸಿಗ್ನಲ್.. ಹೀಗೆ ಹತ್ತು ಹಲವು ಕಾರಣಗಳಿಂದಾಗಿ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಇದು ದುಬಾರಿ ಮಾತ್ರವಲ್ಲ ದುರ್ಲಭವೂ ಆಗಿದೆ. ಆದರೆ ಇಲ್ಲೊಂದು ಹಳ್ಳಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಲೌಡ್ ಸ್ಪೀಕರ್ ಎಜುಕೇಶನ್ ಮೊರೆ ಹೋಗಿದ್ದಾರೆ.

ಹೌದು, ಛತ್ತೀಸ್ ಗಢ ರಾಜ್ಯದ ಬಸ್ತಾರ್ ಜಿಲ್ಲೆಯಲ್ಲಿರುವ ಭಟ್ಪಾಲ್ ಅನ್ನೋ ಪುಟ್ಟ ಹಳ್ಳಿ. ಆ ಹಳ್ಳಿಯಲ್ಲಿ ಸರಿಯಾದ ಮೂಲ ಸೌಕರ್ಯಗಳಿಲ್ಲ. ಹೀಗಾಗಿಯೇ ಭಟ್ಟಾಲ್ ನ ಗ್ರಾಮ ಪಂಚಾಯತ್ ತನ್ನ ವ್ಯಾಪ್ತಿಯಲ್ಲಿನ 300 ಮನೆಗಳ ಸುತ್ತಲೂ ಎತ್ತರದ ಆರು ಕಂಬಗಳಲ್ಲಿ ಲೌಡ್ ಸ್ಪೀಕರ್ ಕಟ್ಟಿದೆ. ಮೈಕ್ ಮೂಲಕವಾಗಿ ಮಕ್ಕಳಿಗೆ ಪಾಠ ಕಲಿಸುವ ವ್ಯವಸ್ಥೆ ಮಾಡಿದೆ. ಪಂಚಾಯತ್ ಕಟ್ಟಡದಿಂದಲೇ ಈ ಲೌಡ್ ಸ್ಪೀಕರುಗಳನ್ನು ನಿಯಂತ್ರಿಸಲಾಗುತ್ತದೆ. ನಿತ್ಯವೂ ಮಕ್ಕಳಿಗೆ ನಿಗದಿತ ಅವಧಿಯಲ್ಲಿಯೇ ಪಾಠವನ್ನು ಬೋಧಿಸಲಾಗುತ್ತಿದೆ. ಮಕ್ಕಳನ್ನು ಲೌಡ್ ಸ್ಪೀಕರ್ ಅಳವಡಿಸಿರುವ ಜಾಗದಲ್ಲಿ ಕುಳ್ಳಿರಿಸಿ ಶಿಕ್ಷಕರು ಮೊದಲೇ ರೆಕಾರ್ಡ್ ಮಾಡಿರುವ ಪಾಠವನ್ನು ಕೇಳಿಸುತ್ತಿದ್ದಾರೆ.

ಕೇವಲ ಈ ವ್ಯವಸ್ಥೆ ಭಟ್ಪಾಲ್ ಹಳ್ಳಿಗೆ ಮಾತ್ರವೇ ಸೀಮಿತವಾಗಿಲ್ಲ. ಹರ್ಯಾಣದ ಗುರುಗಾಂವ್ ನ ಶಿಕ್ಷಣ ಇಲಾಖೆ ನೂಹ್ ಗ್ರಾಮದಲ್ಲಿ ಮಸೀದಿಗಳಲ್ಲಿ ಈಗಾಗಲೇ ಇರುವ ಲೌಡ್ ಸ್ಪೀಕರ್ ಗಳನ್ನು ಶಿಕ್ಷಣದ ಉದ್ದೇಶಕ್ಕೆ ಬಳಸಿಕೊಳ್ಳಲು ಅಲ್ಲಿನ ಮೌಲಿಗಳನ್ನು ಸಂಪರ್ಕಿಸಿದೆ. ಲೌಡ್ ಸ್ಪೀಕರ್ ಶಿಕ್ಷಣದ ಮೂಲಕ ಶಾಲಾ ಮಕ್ಕಳು ಮಾತ್ರವಲ್ಲದೆ ಹಳ್ಳಿಯ ಇತರ ಅನಕ್ಷರಸ್ಥರು, ವಯಸ್ಕರೂ ಕೂಡ ಚೂರು ಪಾರು ಇಂಗ್ಲೀಷ್, ಗಣಿತ, ಸಮಾಜ, ಚರಿತ್ರೆ ಮುಂತಾದವುಗಳನ್ನು ಅರಿಯಲು ಸಾಧ್ಯವಾಗುತ್ತಿದೆ.

ಕೊರೊನಾ ಅನ್ನೋ ಹೆಮ್ಮಾರಿ ಶಿಕ್ಷಣ ವ್ಯವಸ್ಥೆಯಲ್ಲಿಯೇ ಬದಲಾವಣೆಯನ್ನು ತಂದಿದೆ. ಆನ್ ಲೈನ್, ಆಫ್ ಲೈನ್ ಶಿಕ್ಷಣದ ಜೊತೆಗೆ ಹಳ್ಳಿಯ ಜನರ ಲೌಡ್ ಸ್ಪೀಕರ್ ಶಿಕ್ಷಣ ನಿಜಕ್ಕೂ ಕುತೂಹಲವನ್ನು ಮೂಡಿಸುತ್ತಿದೆ. ಒಟ್ಟಿನಲ್ಲಿ ಹಳ್ಳಿಗರು ಮಕ್ಕಳಿಗೆ ಶಿಕ್ಷಣ ದೊರಕಿಸುವ ಮೂಲಕ ಕಂಡುಕೊಂಡ ಮಾರ್ಗ ಮಾತ್ರ ಇತರರಿಗೆ ಮಾದರಿ.

Leave A Reply

Your email address will not be published.