ಶಿಕ್ಷಕರಿಗೂ ವಿಸ್ತರಿಸಿ ಕೊರೊನಾ ವಿಮೆ ಯೋಜನೆ

0

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಯುವ ಕಾರ್ಯದಲ್ಲಿ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಶಿಕ್ಷಕರಿಗೆ ಕನಿಷ್ಠ ಸೌಕರ್ಯವನ್ನೂ ಒದಗಿಸುತ್ತಿಲ್ಲ. ಇನ್ನೊಂದೆಡೆ ವಿಮಾ ಭದ್ರತೆಯೂ ಶಿಕ್ಷಕರಿಗಿಲ್ಲ. ಹೀಗಾಗಿಯೇ ಕೋವಿಡ್ ಕರ್ತವ್ಯಕ್ಕಾಗಿ ನಿಯೋಜನೆ ಗೊಂಡ ಸರಕಾರಿ ನೌಕರರಿಗೆ ನೀಡುವ ವಿಮೆ ಯೋಜನೆಯನ್ನು ಸರಕಾರಿ, ಅನುದಾನಿತ ಶಾಲಾ ಶಿಕ್ಷಕರಿಗೂ ವಿಸ್ತರಿಸುವ ಕೂಗು ಕೇಳಿಬಂದಿದೆ.

ಕೊರೊನಾ ಸೋಂಕು ಆರಂಭವಾಗುತ್ತಿದ್ದಂತೆಯೇ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿತ್ತು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರನ್ನು ಕೊರೊನಾ ಸೋಂಕಿತರ ಮಾಹಿತಿ ಸಂಗ್ರಹಿಸುವ ಹೆಲ್ತ್ ವಾಚ್, ಚೆಕ್ ಪೋಸ್ಟ್ ಡ್ಯೂಟಿ, ಕ್ವಾರಂಟೈನ್ ಕೇಂದ್ರಗಳ ಮೇಲ್ವಿಚಾರಣೆ ಸೇರಿದಂತೆ ಹಲವು ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಆದರೆ ಕೊರೊನಾ ಸೋಂಕಿನಿಂದ ಸುರಕ್ಷತೆಗಾಗಿ ಯಾವುದೇ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ.

ಅದ್ರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದಲೇ ರಾಜ್ಯ ಸರಕಾರ ವಾರ್ಡ್ ಹಂತದಲ್ಲಿ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಪ್ರಯತ್ನಗಳನ್ನು ಹೆಚ್ಚಿಸುವ ಸಲುವಾಗಿ ಶಿಕ್ಷಕರನ್ನು ನಿಯೋಜನೆ ಮಾಡಿದೆ.

ಕಣ್ಗಾವಲು ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಬೆಂಗಳೂರಿನ ಡಿ.ಜೆ.ಹಳ್ಳಿಯ ಸರಕಾರಿ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕಿ ದಿಲ್ ನಾಜ್ ಬೇಗಂ ಅವರು ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಆದರೆ ಇದುವರೆಗೂ ರಾಜ್ಯ ಸರಕಾರ ಯಾವುದೇ ಪರಿಹಾರವನ್ನೂ ಘೋಷಣೆ ಮಾಡಿಲ್ಲ.

ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೋವಿಡ್ ಕರ್ತವ್ಯದಲ್ಲಿದ್ದಾಗ ನಿಧನರಾಗುವ ಸರಕಾರಿ ನೌಕರರಿಗೆ ನೀಡುವ ವಿಮಾ ಸೌಲಭ್ಯವನ್ನು ನೀಡಬೇಕೆಂಬ ಒತ್ತಡ ಶಿಕ್ಷಕರ ವಲಯದಿಂದ ಕೇಳಿಬಂದಿದೆ. ಅಷ್ಟೇ ಅಲ್ಲಾ ಸರಕಾರಿ ನೌಕರರು ಕೋವಿಡ್ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಿಧನ ಹೊಂದಿದರೆ ಲಭ್ಯವಾಗುವ ವಿಮಾ ಸೌಲಭ್ಯವನ್ನು ಮೃತರ ಕುಟುಂಬಕ್ಕೆ ಮಂಜೂರು ಮಾಡುವಂತೆ ರಾಜ್ಯ ಸರಕಾರಕ್ಕೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.

ಎಸ್ಎಸ್ಎಲ್ ಸಿ ಮೌಲ್ಯಮಾಪನ, ವಿದ್ಯಾರ್ಥಿಗಳಿಗೆ ರೇಷನ್ ಹಂಚಿಕೆ, ಪುಸ್ತಕ ಹಂಚಿಕೆಯ ಜೊತೆ ಜೊತೆಗೆ ಕೊರೊನಾ ವಾರಿಯರ್ಸ್ ಆಗಿಯೂ ದುಡಿಸಿಕೊಳ್ಳಲಾಗುತ್ತಿದೆ. ಪ್ರಾಣದ ಹಂಗನ್ನ ತೊರೆದು ಜನರ ಸೇವೆಗಾಗಿ ತಮ್ಮನ್ನ ಮುಡಿಪಾಗಿಟ್ಟಿರುವ ಶಿಕ್ಷಕರಿಗೆ ಸುರಕ್ಷತೆಯ ಜೊತೆಗೆ ಭದ್ರತೆಯನ್ನು ಒದಗಿಸುವ ಕಾರ್ಯವನ್ನು ಸರಕಾರ ಮಾಡಬೇಕೆಂದು ಶಿಕ್ಷಕರು ಸರಕಾರವನ್ನು ಒತ್ತಾಯಿಸಿದ್ದಾರೆ.

Leave A Reply

Your email address will not be published.