Education Department Important Order : 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

ಬೆಂಗಳೂರು : ಮಕ್ಕಳಲ್ಲಿನ ಕಲಿಕಾ ಕೊರತೆಯನ್ನು ನೀಗಿಸುವುದರ ಜೊತೆಗೆ ಕಲಿಕೆಯ ಮೌಲ್ಯಮಾಪನಕ್ಕಾಗಿ ಶಿಕ್ಷಣ ಇಲಾಖೆ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ 2022-23 ಶೈಕ್ಷಣಿಕ ವರ್ಷದಿಂದಲೇ ಪಬ್ಲಿಕ್ ಪರೀಕ್ಷೆ ನಡೆಸಲು (Education Department Important Order) ಮುಂದಾಗಿದೆ. ಪರೀಕ್ಷೆಯ ರೂಪುರೇಷೆ, ಪ್ರಶ್ನೆ ಪತ್ರಿಕೆಯ ಮಾದರಿ, ಪರೀಕ್ಷಾ ಕೇಂದ್ರ, ಪರೀಕ್ಷಾ ದಿನಾಂಕ ಸೇರಿದಂತೆ ಸಮಗ್ರ ಮಾರ್ಗಸೂಚಿಯನ್ನು ಒಳಗೊಂಡಂತೆ ಶಿಕ್ಷಣ ಇಲಾಖೆ ಪರಿಷ್ಕೃತ ಆದೇಶವನ್ನು ಹೊರಡಿಸಿದೆ.

ಕರ್ನಾಟಕದಲ್ಲಿ ಪ್ರಸ್ತುತ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿಯೇ ಪರೀಕ್ಷೆಯನ್ನು ನಡೆಸಿ, ಉತ್ತೀರ್ಣಗೊಳಿಸಲಾಗುತ್ತಿದೆ. ಇದರಿಂದಾಗಿ ಮಕ್ಕಳಿಗೆ ಕಲಿಕೆಯ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆ. ಅದ್ರಲ್ಲೂ ಕೊರೊನಾ ಕಾರಣದಿಂದಾಗಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದೆ ಉಳಿದಿದ್ದಾರೆ. ರಾಜ್ಯದಲ್ಲಿನ ಶಾಲೆಗಳ ಕಲಿಕೆ ಮೌಲ್ಯ ಮಾಪನವನ್ನು ಮಾಡುವ ಸಲುವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಈ ನಿರ್ಧಾರವನ್ನು ಕೈಗೊಂಡಿದೆ. ಎಸ್ಎಸ್ಎಲ್ ಸಿ , ಪಿಯುಸಿ ಮಾತ್ರವಲ್ಲದೇ ವೃತ್ತಿಪರ ಕೋರ್ಸ್ ಗಳ ಪ್ರವೇಶ ಪರೀಕ್ಷೆಯನ್ನು ಎದುರಿಸುವುದು ಕಷ್ಟಕರವಾಗುತ್ತಿದೆ. ಈ ಹಿನ್ನೆಲೆಯಲ್ಲಿ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆಗೆ ಶಿಕ್ಷಣ ಇಲಾಖೆ ಮುಂದಾಗಿದೆ.

ಪ್ರಸ್ತುತ ವರ್ಷದ ಶೈಕ್ಷಣಿಕ ವರ್ಷವು ಎಪ್ರಿಲ್ 10ರಂದು ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮಾರ್ಚ್ 9ರಿಂದ 17ರ ವರೆಗೆ ಪರೀಕ್ಷೆ ನಡೆಸಬೇಕು. ಅಲ್ಲದೇ ಮಾರ್ಚ್ 21ರಿಂದ 28ರ ವರೆಗೆ ಮೌಲ್ಯಮಾಪನ, ಮಾರ್ಚ್ 31ರಿಂದ ಎಪ್ರಿಲ್ 5ರ ವರೆಗೆ ಫಲಿತಾಂಶವನ್ನು ಸಿದ್ದಪಡಿಸಿ, ಎಪ್ರಿಲ್ 8ರಿಂದ 10ರ ಒಳಗಾಗಿ ಫಲಿತಾಂಶವನ್ನು ಪ್ರಕಟಿಸುವಂತೆ ಸೂಚಿಸಲಾಗಿದೆ. ಶಾಲೆಯ ಮುಖ್ಯೋಪಾಧ್ಯಾಯರು ಆನ್ ಲೈನ್ ಮೂಲಕ ಪ್ರವೇಶ ಪತ್ರವನ್ನು ಪಡೆದು, ಮುದ್ರಿಸಿ ವಿದ್ಯಾರ್ಥಿಗಳಿಗೆ ವಿತರಣೆಯನ್ನು ಮಾಡಬೇಕಾಗಿದೆ. ಈ ಕುರಿತು ಪ್ರವೇಶ ಪತ್ರವನ್ನು ಸಿದ್ದಪಡಿಸುವುದು ಹಾಗೂ ವಿತರಣೆ ಮಾಡುವುದು ಆಯಾಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

2022-23ನೇ ಸಾಲಿನಲ್ಲಿ ಪರೀಕ್ಷೆ ಹಾಗೂ ನಿರ್ವಹಣಾ ವೆಚ್ಚವನ್ನು ವಿದ್ಯಾರ್ಥಿಗಳಿಂದ ಪಡೆಯದೇ ಸಂಪೂರ್ಣವಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಭರಿಸಲು ಸರಕಾರ ಆದೇಶ ಹೊರಡಿಸಿದೆ. ಪರೀಕ್ಷೆಯನ್ನು ನಡೆಸಲು ಅವಶ್ಯಕ ಮೂಲ ಸೌಕರ್ಯಗಳನ್ನು ಪರೀಕ್ಷಾ ಕೇಂದ್ರದ ಶಾಲೆಯವರು ನಿರ್ವಹಿಸಬೇಕು. ಪರೀಕ್ಷಾ ಕೇಂದ್ರದ ಮುಖ್ಯಸ್ಥರನ್ನಾಗಿ ಸಂಬಂಧಿಸಿದ ಶಾಲಾ ಮುಖ್ಯೋಪಾಧ್ಯಾಯರನ್ನು ಹಾಗೂ ಕೊಠಡಿಯ ಮೇಲ್ವಿಚಾರಕರನ್ನಾಗಿ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಶಿಕ್ಷಕರನ್ನು ಬದಲಾಯಿಸಿ ನಿಯೋಜನೆ ಮಾಡುವಂತೆ ತಿಳಿಸಲಾಗಿದೆ.

ಇದನ್ನೂ ಓದಿ : ಮಾಂಡೌಸ್ ಚಂಡಮಾರುತ ನಿರಂತರ ಮಳೆ : ಶಾಲೆಗಳಿಗೆ ರಜೆ ಘೋಷಣೆ

ಇದನ್ನೂ ಓದಿ : ಶಿಕ್ಷಣ ಇಲಾಖೆ ಹೊಸ ಆದೇಶ : ಶಾಲೆಯ ಊಟದ ಸಮಯ ಬದಲಾವಣೆ

ಇದನ್ನೂ ಓದಿ : 10th 12th practical exams 2023: CBSE 10, 12ನೇ ತರಗತಿ ಪ್ರಾಯೋಗಿಕ ಪರೀಕ್ಷೆಗಳ 2023ರ ಮಾರ್ಗಸೂಚಿ ಬಿಡುಗಡೆ

Public examination for 5th and 8th class students: Important order from Education Department

Comments are closed.