ಪ್ರೌಢ, ಪ್ರಾಥಮಿಕ ಶಾಲೆಗಳಿಗೆ ಮಾರ್ಚ್ 23ರಿಂದ ವಾರ್ಷಿಕ ರಜೆ !

0

ಬೆಂಗಳೂರು : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ರಾಜ್ಯದ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳಿಗೆ ಮಾರ್ಚ್ 23ರ ಒಳಗೆ ಪರೀಕ್ಷೆಗಳನ್ನು ಮುಗಿಸಿ ವಾರ್ಷಿಕ ರಜೆ ನೀಡುವಂತೆ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

1 ರಿಂದ 6ನೇ ತರಗತಿ ವರೆಗಿನ ವಾರ್ಷಿಕ / ಸೆಮಿಸ್ಟರ್ ಪರೀಕ್ಷೆಯನ್ನು ಮಾರ್ಚ್ 16ರ ಒಳಗೆ ಹಾಗೂ 8 ಮತ್ತು 9ನೇ ತರಗತಿಯ ಪರೀಕ್ಷೆಗಳನ್ನು ಮಾರ್ಚ್ 23ರ ಒಳಗಾಗಿ ಕಡ್ಡಾಯವಾಗಿ ಮುಗಿಸುವಂತೆ ಡಿಡಿಪಿಐ ಗಳಿಗೆ ಸೂಚಿಸಲಾಗಿದೆ.

ಪರೀಕ್ಷೆ ಮುಗಿಯುತ್ತಿದ್ದಂತೆಯೇ ರಜೆ ನೀಡಲು ಆಯುಕ್ತರು ಇಂದು ನಡೆಸಿದ ವಿಡಿಯೋ ಕಾನ್ಪರೆನ್ಸ್ ನಲ್ಲಿ ಮೌಖಿಕ ಆದೇಶ ಹೊರಡಿಸಿದ್ದರು. ಆದರೆ ನಂತರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಪೂರ್ವ ಪ್ರಾಥಮಿಕ ಶಾಲೆಗಳಿಗೆ ಈಗಾಗಲೇ ರಜೆಯನ್ನು ನೀಡಲಾಗಿದ್ದು, ಉಳಿದ ತರಗತಿಗಳಿಗೆ ಆದಷ್ಟು ಶೀಘ್ರದಲ್ಲಿ ಪರೀಕ್ಷೆಯನ್ನು ನಡೆಸಲು ಶಿಕ್ಷಣ ಇಲಾಖೆ ಇದೀಗ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ಪ್ರತೀ ಶಾಲೆಗಳಲ್ಲಿಯೂ ಮಕ್ಕಳಿಗೆ ಕೊರೊನಾ ವೈರಸ್ ಕುರಿತು ಮುನ್ನೆಚ್ಚರಿಕೆಯನ್ನು ನೀಡುವಂತೆಯೂ ಆದೇಶದಲ್ಲಿ ಸೂಚಿಸಲಾಗಿದ್ದು, ರಾಜ್ಯದ ಬಹುತೇಕ ಶಾಲೆಗಳಲ್ಲಿ ಪರೀಕ್ಷೆಗಳು ಮಂಗಳವಾರದಿಂದ ಆರಂಭಗೊಳ್ಳಲಿದೆ.

ರಾಜ್ಯದಲ್ಲಿಯೂ ಕೊರೊನಾ ಸೋಂಕು ಪತ್ತೆಯಾಗುತ್ತಲೇ ಶಿಕ್ಷಣ ಇಲಾಖೆ ಕೂಡ ಇದೀಗ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ತರಗತಿಗಳಿಗೆ ಪರೀಕ್ಷೆಗಳನ್ನು ಮುಂದಿನ 12 ದಿನಗಳ ಒಳಗಾಗಿ ಮುಗಿಸಲು ಇಲಾಖೆ ಸೂಚಿಸಿದೆ.

ಹೀಗಾಗಿ ಈ ಬಾರಿಯ ವಾರ್ಷಿಕ ರಜೆ ಮಾರ್ಚ್ 23 ರಿಂದ ಆರಂಭವಾಗುವ ಸಾಧ್ಯತೆಯಿದೆ. ಇನ್ನು ಎಸ್ಎಸ್ಎಲ್ ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಸದ್ಯಕ್ಕೆ ಯಾವುದೇ ಬದಲಾವಣೆಗಳನ್ನು ಮಾಡಿಕೊಂಡಿಲ್ಲ.

Leave A Reply

Your email address will not be published.