ಮುಂದುವರಿದ ಎಸ್​ಎಸ್​ಎಲ್​ಸಿ ದ್ವಿಭಾಷಾ ನೀತಿ ಗೊಂದಲ: ಹೈಕೋರ್ಟ್​ ಮೆಟ್ಟಿಲೇರಿದ ತೃತೀಯ ಭಾಷೆ ವಿವಾದ

ರಾಜ್ಯ ಸರ್ಕಾರದ ನಡೆಗೆ ಪರ - ವಿರೋಧದ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಈ ಎಲ್ಲದರ ನಡುವೆ ಇದೀಗ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ರಾಜ್ಯ ಹೈಕೋರ್ಟ್​ಗೆ ಸಲ್ಲಿಕೆಯಾಗಿದೆ.

ಎಸ್​.ಎಸ್​.ಎಲ್​.ಸಿ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಆರಂಭಗೊಂಡ ಈ ದ್ವಿಭಾಷಾ ನೀತಿ ಗೊಂದಲ (SSLC bilingual policy controversy) ಇದೀಗ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದೆ. ರಾಜ್ಯದಲ್ಲಿ ಎಸ್​.ಎಸ್​.ಎಲ್​.ಸಿ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯ ಪರೀಕ್ಷೆಗೆ ಅಂಕಗಳ ಬದಲು ಗ್ರೇಡ್​ನ್ನು ನೀಡಿ ಅವರ ಪರೀಕ್ಷಾ ಹೊರೆಯನ್ನು ಕಡಿಮೆ ಮಾಡಬೇಕು ಎಂದುಕೊಂಡಿರುವ ರಾಜ್ಯ ಸರ್ಕಾರದ ನಡೆಗೆ ಪರ – ವಿರೋಧದ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಈ ಎಲ್ಲದರ ನಡುವೆ ಇದೀಗ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ರಾಜ್ಯ ಹೈಕೋರ್ಟ್​ಗೆ ಸಲ್ಲಿಕೆಯಾಗಿದೆ.

ಬೆಂಗಳೂರಿನ ಎಚ್​.ಎನ್​ ಚಂದನಾ ಹಾಗೂ ಎಸ್​. ವೆಂಕಟೇಶ್​ ಎಂಬವರು ಶಾಲಾ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಆಯುಕ್ತರು, ಶಿಕ್ಷಣ ಸಚಿವ ಮಧು ಬಂಗಾರಪ್ಪರನ್ನು ಪ್ರತಿವಾದಿಗಳನ್ನಾಗಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಎಸ್​.ಎಸ್​.ಎಲ್​.ಸಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಸಚಿವ ಮಧು ಬಂಗಾರಪ್ಪ ದ್ವಿಭಾಷಾ ನೀತಿಯ ಹೇಳಿಕೆ ನೀಡಿದ್ದರು. ಸಾರ್ವಜನಿಕರ ಅಭಿಪ್ರಾಯ ಕೇಳದೇ, ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸದೇ,ಅಷ್ಟೇ ಏಕೆ ಭಾಷಾ ತಜ್ಞರ ಅಭಿಪ್ರಾಯವನ್ನೂ ಕೇಳದೇ ಈ ನಿರ್ಧಾರವನ್ನು ಸಚಿವ ಮಧು ಬಂಗಾರಪ್ಪ ಘೋಷಿಸಿದ್ದರು.

ರಾಜ್ಯ ಸರ್ಕಾರದಿಂದ ದ್ವಿಭಾಷಾ ನೀತಿ ಕುರಿತಂತೆ ಅಧಿಕೃತ ಆದೇಶ ಹೊರಬಿದ್ದಿಲ್ಲ. ಆದರೆ ಎಸ್​.ಎಸ್​.ಎಲ್​.ಸಿ ವಿದ್ಯಾರ್ಥಿಗಳ ತೃತೀಯ ಭಾಷಾ ಪರೀಕ್ಷೆಗೂ ಮುನ್ನವೇ ಈ ರೀತಿಯ ಹೇಳಿಕೆಯನ್ನು ಸಚಿವ ಮಧು ಬಂಗಾರಪ್ಪ ನೀಡಿರುವುದಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಇದು ಅವರ ಪರೀಕ್ಷೆಯ ಮೇಲೆ ಪರಿಣಾಮ ಬೀರಬಹುದು. ಪರಿಚ್ಛೇದ 14ರ ಅಡಿಯಲ್ಲಿ ಸಚಿವರು ಸಮಾನತೆಯ ಹಕ್ಕನ್ನು ಉಲ್ಲಂಘಿಸಿದ್ದಾರೆ ಎಂದೆಲ್ಲ ಆರೋಪಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಲಾಗಿದೆ.

ಇದನ್ನೂ ಓದಿ: ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ : ರಿಸಲ್ಟ್​ ನೋಡಲು ಹೀಗೆ ಮಾಡಿ

ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಹೀಗೆ ಪರೀಕ್ಷೆಯ ಸಂದರ್ಭದಲ್ಲಿ ನೀಡಿರುವ ಹೇಳಿಕೆಯಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಸರ್ಕಾರದ ಅಧಿಕೃತ ಆದೇಶದ ವಿನಃ ಯಾವುದೇ ನೀತಿಯನ್ನು ಸಚಿವರೊಬ್ಬರಿಗೇ ಜಾರಿಗೆ ತರಲು ಸಾಧ್ಯವಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ನ್ಯಾಯಾಂಗದ ಮಧ್ಯಪ್ರವೇಶದ ಅಗತ್ಯವಿದೆ. ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವರಿಂದ ಸ್ಪಷ್ಟನೆ ಕೇಳಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆಗ್ರಹಿಸಲಾಗಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »