Summer Holiday extend : ಬಿಸಿಲ ಝಳ, ಕೊರೊನಾ ಭೀತಿ : ಮೇ ಅಲ್ಲಾ ಜೂನ್‌ ನಲ್ಲೇ ಶಾಲಾರಂಭ !

ಬೆಂಗಳೂರು : ದಿನ ಕಳೆದಂತೆ ಬೇಸಿಗೆಯ ಬಿಸಿಲ ಝಳ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ತಾಪಮಾನ ದಾಖಲಾಗುತ್ತಿದೆ. ಈ ನಡುವಲ್ಲೇ ಕೊರೊನಾ ನಾಲ್ಕನೇ ಅಲೆಯ ಭೀತಿ ಮಕ್ಕಳನ್ನು ಕಾಡುತ್ತಿದೆ. ಈ ಬಾರಿಯೂ ಶೈಕ್ಷಣಿಕ ಚಟುವಟಿಕೆಗೆ ಬಿಸಿಲ ಝಳ (Heatwave fear), ಕೊರೊನಾ ಭೀತಿ ತೊಡಕಾಗುವ ಸಾಧ್ಯತೆಯಿದೆ. ಪೋಷಕರು ಮಕ್ಕಳನ್ನು ಶಾಲೆಗೆ ದಾಖಲಿಸಲು ಹಿಂದೇಟು ಹಾಕುತ್ತಿದ್ರೆ, ಇನ್ನೊಂದೆಡೆಯಲ್ಲಿ ಬೇಸಿಗೆ ರಜೆ ಕಡಿತಕ್ಕೆ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಜೂನ್‌ ವರೆಗೂ ಬೇಸಿಗೆ ರಜೆ (Summer Holiday extend) ಮುಂದುವರಿಕೆಯಾಗುವ ಸಾಧ್ಯತೆಯಿದೆ.

ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕ ಕೊರೊನಾ ವೈರಸ್‌ ಸೋಂಕಿನ ಮೂರು ಅಲೆಗಳನ್ನು ಕಂಡಿದೆ. ಶೈಕ್ಷಣಿಕ ಚಟುವಟಿಕೆಯ ಮೇಲೆ ಕೊರೊನಾ ಹೆಮ್ಮಾರಿ ಗಂಭೀರ ಪರಿಣಾಮವನ್ನು ಬೀರಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಉಂಟಾಗಿರುವ ಶೈಕ್ಷಣಿಕ ಚಟುವಟಿಕೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಕೈಗೊಂಡಿದೆ. ಇದೇ ಕಾರಣಕ್ಕೆ ಮೇ ತಿಂಗಳಲ್ಲಿ ನೀಡಲಾಗುತ್ತಿದ್ದ ಬೇಸಿಗೆ ರಜೆಯಲ್ಲಿ ಹದಿನೈದು ದಿನಗಳ ಕಾಲ ಕಡಿತವನ್ನು ಮಾಡಲಾಗಿತ್ತು. ಆದರೆ ಬೇಸಿಗೆ ರಜೆ ಕಡಿತ ಮಾಡಿರುವುದು ಪೋಷಕರು ಹಾಗೂ ಶಿಕ್ಷಕರ ಅಪಸ್ವರ ಎತ್ತಿದ್ದಾರೆ.

ಎಪ್ರಿಲ್ ತಿಂಗಳ ಆರಂಭದಿಂದಲೇ ಕರ್ನಾಟಕದಲ್ಲಿ ಬಿಸಿಲ ತಾಪ ಹೆಚ್ಚಳವಾಗಲು ಆರಂಭಿಸಿದೆ. ರಾಜ್ಯದ ಕರಾವಳಿ ಸೇರಿದಂತೆ ಮಲೆನಾಡು ಭಾಗದಲ್ಲೂ ಈ ಭಾರಿ ಬಿಸಿಗಾಳಿ ಎಫೆಕ್ಟ್ ನಿಂದ ತಾಪಮಾನ ಹೆಚ್ಚಿದೆ. ರಾಜ್ಯದಲ್ಲಿಯೇ ಕಲಬುರಗಿಯಲ್ಲಿ ಅತೀ ಹೆಚ್ಚು ತಾಪಮಾನ ದಾಖಲಾಗಿದೆ. ಕಲಬುರಗಿಯಲ್ಲಿ ತಾಪಮಾನ 41.6 ಡಿಗ್ರಿಯಷ್ಟಿದೆ . ಇನ್ನೂ ಕಳೆದ ಒಂದು ವಾರದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ದಾಖಲಾದ ತಾಪಮಾನವನ್ನು ಗಮನಿಸೋದಾದರೇ, ರಾಯಚೂರು 39.4, ವಿಜಯಪುರ 37.9, ಗದಗ 38.4, ಬೆಂಗಳೂರು 35.0, ಬೆಳಗಾವಿ 36.5, ಬಳ್ಳಾರಿ 39.4 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಕೋಲಾರ, ಚಾಮರಾಜನಗರ, ಹಾಸನದಲ್ಲೂ 35 ರಿಂದ 38 ಡಿಗ್ರಿ ಉಷ್ಣಾಂಶ ದಾಖಲಾಗುತ್ತಿದೆ. ಇನ್ನು ರಾಜ್ಯದ ಕರಾವಳಿ ಭಾಗದಲ್ಲಿ ಉಷ್ಣಾಂಶದ ಹಿನ್ನೆಲೆಯಲ್ಲಿ ಉಸಿರಾಡುವುದಕ್ಕೂ ಕಷ್ಟದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ತಾಪಮಾನ ಏರಿಕೆಯ ಕಾರಣದಿಂದಲೇ ಮಕ್ಕಳನ್ನು ಮನೆಯಿಂದ ಹೊರ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಇದೀಗ ತರಬೇತಿಯ ನೆಪದಲ್ಲಿ ಬೇಸಿಗೆ ರಜೆಯನ್ನು ಕಡಿತ ಮಾಡಿ, ಮಕ್ಕಳನ್ನು ಶಾಲೆಗೆ ಕರೆಯುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಬಹುತೇಕ ಶಾಲೆಗಳಲ್ಲಿ ಬೇಸಿಗೆ ಆರಂಭದಲ್ಲಿಯೇ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಇನ್ನೊಂದೆಡೆಯಲ್ಲಿ ಸೂರ್ಯನ ಪ್ರಕರತೆ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡುವ ಆತಂಕವೂ ಕಾಡುತ್ತಿದೆ. ಹೀಗಾಗಿ ಬೇಸಿಗೆ ರಜೆಯನ್ನು ಜೂನ್‌ ಆರಂಭದವರೆಗೂ ಮುಂದೂಡಿಕೆ ಮಾಡಬೇಕೆಂಬ ಆಗ್ರಹ ಕೇಳಿಬರುತ್ತಿದೆ.

ಇನ್ನು ಬೇಸಿಗೆ ರಜೆ ಕಡಿತ ಮಾಡಿರುವುದು ಶಿಕ್ಷಕರ ಬೇಸರಕ್ಕೆ ಕಾರಣವಾಗಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಶಾಲೆ ಬಂದ್‌ ಆಗಿದ್ದರೂ ಕೂಡ ಶಿಕ್ಷಕರನ್ನು ಕೊರೊನಾ ಕರ್ತವ್ಯಕ್ಕೆ ಬಳಸಿಕೊಳ್ಳಲಾಗಿದೆ. ಅದ್ರಲ್ಲೂ ಹಲವು ಶಿಕ್ಷಕರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ. ಎರಡು ವರ್ಷಗಳ ಕಾಲ ಮಕ್ಕಳಿಗೆ ಶಿಕ್ಷಣ ಕೊರತೆ ಉಂಟಾಗಿದೆ ಅನ್ನೋ ಕಾರಣಕ್ಕೆ ವಿಶೇಷ ತರಗತಿಗಳ ಮೂಲಕ ಶೈಕ್ಷಣಿಕ ಚಟುವಟಿಕೆಯಲ್ಲಿ ಆಗಿರುವ ಕೊರತೆಯನ್ನು ಸರಿದೂಗಿಸುವ ಕಾರ್ಯವನ್ನೂ ಮಾಡಿದ್ದಾರೆ. ಆದರೂ ಶಿಕ್ಷಕರಿಗೆ ಸಿಗುತ್ತಿದ್ದ ಹಕ್ಕಿನ ರಜೆಯ ಸೌಲಭ್ಯದಲ್ಲಿ ಕಡಿತ ಮಾಡಲಾಗಿದೆ ಎಂದು ಕೆಲ ಶಿಕ್ಷಕರು ಅಳಲನ್ನು ತೋಡಿಕೊಂಡಿದ್ದಾರೆ.

ಇತರ ನೌಕರರಿಗೆ ಹೋಲಿಕೆ ಮಾಡಿದ್ರೆ ಶಿಕ್ಷಕರಿಗೆ ಬೇಸಿಗೆ ರಜೆ, ದಸರಾ ರಜೆ ಸಿಗುತ್ತೆ ಅನ್ನೋ ಕಾರಣಕ್ಕೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ. ಈ ಹಿಂದೆ ಒಂದು ತಿಂಗಳ ಕಾಲ ದಸರಾ ರಜೆ, ಎರಡು ತಿಂಗಳು ಬೇಸಿಗೆ ರಜೆ ನೀಡಲಾಗುತ್ತಿತ್ತು. ಆದ್ರೆ ದಸರಾ ರಜೆ ಒಂದು ವಾರಕ್ಕೆ ಇಳಿದಿದ್ರೆ, ಬೇಸಿಗೆ ರಜೆ ತಿಂಗಳಿಗೆ ಸೀಮಿತವಾಗಿದೆ. ಆದ್ರೆ ಈ ಬಾರಿ ಹೈಸ್ಕೂಲು ಶಿಕ್ಷಕರಿಗೆ ಕೇವಲ ಹದಿನೈದು ದಿನಗಳ ಕಾಲವಷ್ಟೇ ಬೇಸಿಗೆ ರಜೆ ಸಿಗುತ್ತಿದೆ. ಅದ್ರಲ್ಲೂ ಹಲವು ಶಿಕ್ಷಕರನ್ನು ಉಳಿದ ರಜೆಯ ಅವಧಿಯಲ್ಲೇ ತರಬೇತಿಗೆ ನಿಯೋಜನೆ ಮಾಡಲಾಗಿದೆ. ಹೀಗಾಗಿ ಶಿಕ್ಷಕರು ಬೇಸಿಗೆ ರಜೆ ಕಡಿತವನ್ನು ವಾಪಾಸ್‌ ಪಡೆದು, ಜೂನ್‌ ಆರಂಭದಿಂದಲೇ ಶಾಲೆ ಆರಂಭಿಸುವಂತೆ ಶಿಕ್ಷಕರು ಒತ್ತಾಯಿಸುತ್ತಿದ್ದಾರೆ.

ರಾಜ್ಯ ಸರಕಾರ ಹಾಗೂ ಆರೋಗ್ಯ ಇಲಾಖೆ ಜೂನ್‌ ಆರಂಭದಲ್ಲಿಯೇ ಕೊರೊನಾ ನಾಲ್ಕನೇ ಅಲೆ ಬಾಧಿಸುವ ಕುರಿತು ಎಚ್ಚರಿಕೆಯನ್ನು ನೀಡಿದ್ದಾರೆ. ರಾಜ್ಯ ಸರಕಾರ ಕೂಡ ಈ ಕುರಿತು ಮಾರ್ಗಸೂಚಿಯನ್ನೂ ಹೊರಡಿಸಿದೆ. ಅಗಸ್ಟ್‌ ಅಂತ್ಯದ ವರೆಗೂ ಕೊರೊನಾ ಸೋಂಕು ಹೆಚ್ಚಳವಾಗಿ ಬಾಧಿಸಲಿದೆ ಎನ್ನಲಾಗುತ್ತಿದೆ. ಓಮಿಕ್ರಾನ್‌ ರೂಪಾಂತರ ತಳಿ ಹೆಚ್ಚು ಅಪಾಯಕಾರಿ ಅನ್ನೋ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಕರ್ನಾಟಕದಲ್ಲಿ ಕೊರೊನಾ ವೈರಸ್‌ ಸೋಂಕು ಹೆಚ್ಚಳವಾಗುತ್ತಿದೆ. ಪಾಸಿಟಿವಿಟಿ ರೇಟ್‌ ಕೂಡ ದಿನೇ ದಿನೇ ಏರಿಕೆಯಾಗುತ್ತಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಬೇಸಿಗೆ ರಜೆಯನ್ನು ಕಡಿತ ಮಾಡಿ ಶಾಲಾರಂಭ ಮಾಡುವುದು ಬೇಡ. ಮೇ ಅಂತ್ಯದ ವರೆಗೆ ಆದ್ರೂ ಕಾದು ನೋಡೋಣಾ ಅನ್ನೋ ಅಭಿಪ್ರಾಯವನ್ನು ಬಹುತೇಕ ಪೋಷಕರು ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ಈ ಬಾರಿ ಬೇಸಿಗೆಯ ಬಿಸಿಲು, ಕೊರೊನಾ ಕಾರಣಕ್ಕೆ ಬೇಸಿಗೆ ರಜೆಯ ಅವಧಿ ಹೆಚ್ಚಳವಾಗುವ ಸಾಧ್ಯತೆಯಿದೆ. ಈ ಕುರಿತು ಹಲವು ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇನ್ನೊಂದೆಡೆಯಲ್ಲಿ ಶಿಕ್ಷಕರು ಕೂಡ ಸರಕಾರಕ್ಕೆ ಮನವಿ ಸಲ್ಲಿಸಲು ಸಿದ್ದತೆ ನಡೆಸಿದ್ದಾರೆ. ಬೇಸಿಗೆಯ ಬಿಸಿಲಿನಿಂದ ಮಕ್ಕಳಿಗೆ ಸಮಸ್ಯೆ ಎದುರಾಗುವ ಮುನ್ನ ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳಲೇ ಬೇಕಾದ ಅನಿವಾರ್ಯತೆಯಿದೆ.

ಇದನ್ನೂ ಓದಿ : ಕೊರೊನಾ ನಾಲ್ಕನೇ ಅಲೆ : ಕರ್ನಾಟಕ ಸರಕಾರದಿಂದ ಜಾರಿಯಾಯ್ತು ಮಾರ್ಗಸೂಚಿ

ಇದನ್ನೂ ಓದಿ : corona 4th wave : ಕರ್ನಾಟಕಕ್ಕೆ ಬೇಸಿಗೆ ಬಿಸಿಲು, ಕೊರೊನಾ ಭೀತಿ

Summer Holiday extend Karnataka Corona And Heatwave fear

Comments are closed.