2011ಕ್ಕೂ ಮೊದಲು ನೇಮಕಗೊಂಡ ಶಿಕ್ಷಕರಿಗೆ ಹೊಸ ನಿಯಮ : ಬಡ್ತಿ ಬೇಕೆಂದರೆ ಈ ಅರ್ಹತೆ ಇರುವುದು ಕಡ್ಡಾಯ
TET For Teachers: ಬಡ್ತಿ ಪಡೆಯಬೇಕು ಎಂಬ ಅಭಿಲಾಷೆ ಹೊಂದಿರುವ ಶಿಕ್ಷಕರು ಕಡ್ಡಾಯವಾಗಿ ಟಿಇಟಿ ಉತ್ತೀರ್ಣರಾಗಿರಬೇಕು ಎಂದು ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ಸ್ಪಷ್ಟನೆ ನೀಡಿದೆ. 2011ಕ್ಕಿಂತ ಮೊದಲು ನೇಮಕಗೊಂಡಿರುವ ಶಿಕ್ಷಕರಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ.
1 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿರುವ ಶಿಕ್ಷಕರಿಗೆ ಟಿ.ಇ.ಟಿ ಕಡ್ಡಾಯ ಅರ್ಹತೆ ಆಗಿರಲಿದೆ. ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ ಕಾಯ್ದೆ, 2009) ಮತ್ತು ಎನ್ಸಿಟಿಇಯ 2010 ರ ಮಾರ್ಗಸೂಚಿಗಳನ್ನು ಉಲ್ಲೇಖಿಸಿದ ಕೇಂದ್ರ ಶಿಕ್ಷಣ ಸಚಿವಾಲಯವು ಶಿಕ್ಷಕ ಸ್ಥಾನ ಉಳಿಸಿಕೊಳ್ಳಲು ಇದು ಕಡ್ಡಾಯ ಅರ್ಹತೆ ಆಗಿರಲಿದೆ ಎಂದು ಹೇಳಿದೆ.
ನಿವೃತ್ತಿಗೆ 5 ವರ್ಷಗಳಿಗಿಂತ ಹೆಚ್ಚಿನ ಸಮಯ ಇರುವ ಶಿಕ್ಷಕರು ಮುಂದಿನ 2 ವರ್ಷದ ಒಳಗಾಗಿ ಕಡ್ಡಾಯವಾಗಿ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಒಂದು ವೇಳೆ ಟಿ.ಇ.ಟಿ ಪರೀಕ್ಷೆ ಉತ್ತೀರ್ಣರಾಗದೇ ಹೋದಲ್ಲಿ ಅವರ ಉದ್ಯೋಗಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಆದರೆ ನಿವೃತ್ತಿಗೆ ಐದು ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿ ಹೊಂದಿರುವ ಶಿಕ್ಷಕರು ಈ ನಿಯಮಾವಳಿಯಿಂದ ವಿನಾಯಿತಿ ಪಡೆದಿದ್ದಾರೆ.
ಇದನ್ನೂ ಓದಿ: ವಿದ್ಯಾಸಿರಿ ವಿದ್ಯಾರ್ಥಿ ವೇತನ ಯೋಜನೆ: ಪ್ರತಿ ತಿಂಗಳು 1,500 ರೂಪಾಯಿ ಪಡೆಯಲು ಹೀಗೆ ಮಾಡಿ
ಎಷ್ಟೇ ಅನುಭವ ಇದ್ದರೂ ಟಿಇಟಿ ಉತ್ತೀರ್ಣರಾಗದೇ ಹೋದಲ್ಲಿ ಬಡ್ತಿ ನೀಡಲು ಸಾಧ್ಯವೇ ಇಲ್ಲ ಎಂದು ಸುಪ್ರೀಂ ಹೇಳಿದೆ. ಹೀಗಾಗಿ ತಮ್ಮ ಉದ್ಯೋಗವನ್ನು ಉಳಿಸಿಕೊಳ್ಳಲು ಶಿಕ್ಷಕರು ಕಡ್ಡಾಯವಾಗಿ ಟಿ.ಇ.ಟಿ ಪರೀಕ್ಷೆ ಎದುರಿಸಲೇಬೇಕಿದೆ.



