“ವಿದ್ಯಾಗಮ” ಹೆಸರಲ್ಲಿ ಶಿಕ್ಷಣ ಇಲಾಖೆಯ ಮಹಾಎಡವಟ್ಟು : ಮಕ್ಕಳಿಗೆ ಕೊರೊನಾ ಹರಡಿಸುತ್ತಿದ್ಯಾ ಶಿಕ್ಷಣ ಇಲಾಖೆ ?

0

ಬೆಂಗಳೂರು : ಕೊರೊನಾ ಸಂಕಷ್ಟದ ಕಾಲದಲ್ಲಿಯೂ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ವಿದ್ಯಾಗಮ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ವಿದ್ಯಾಗಮ ಯೋಜನೆಯ ಅನುಷ್ಟಾನದ ವೇಳೆಯಲ್ಲಿ ಕೇಂದ್ರ ಸರಕಾರದ ಅನ್ ಲಾಕ್ ಮಾರ್ಗಸೂಚಿಯನ್ನು ಗಾಳಿಗೆ ತೂರಲಾಗುತ್ತಿದ್ದು, ಶಿಕ್ಷಣ ಇಲಾಖೆ ಮಕ್ಕಳಿಗೆ ಕೊರೊನಾ ಸೋಂಕು ಹರಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸುವುದಕ್ಕೆ ಕೇಂದ್ರ ಸರಕಾರ ಅನುಮತಿಯನ್ನು ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಮಕ್ಕಳು ಇರುವಲ್ಲಿಗೆ ತೆರಳಿ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಪ್ರಾಯೋಗಿಕವಾಗಿ ವಿದ್ಯಾಗಮ ಯೋಜನೆಯನ್ನು ಜಾರಿಗೆ ತಂದಿತ್ತು. ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.

ಸರಕಾರಿ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳೇ ವಿದ್ಯಾಭ್ಯಾಸವನ್ನು ಮಾಡುತ್ತಿರುವುದರಿಂದಾಗಿ ಮಕ್ಕಳಿಗೆ ಆನ್ ಲೈನ್ ಪಾಠ ಅಸಾಧ್ಯವಾಗಿದ್ದು, ಹಲವು ಮಕ್ಕಳ ಬಳಿ ಸ್ಮಾರ್ಟ್ ಪೋನ್, ಟಿವಿ ಇಲ್ಲ. ಅಂತಹ ಮಕ್ಕಳ ಮನೆಗೆ ಶಿಕ್ಷಕರು ತೆರಳಿ ಕೇಂದ್ರದ ಮಾರ್ಗಸೂಚಿಯಂತೆಯೇ ಶಿಕ್ಷಣವನ್ನು ಬೋಧಿಸಬೇಕು. ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ. 4 ಕ್ಕಿಂತ ಹೆಚ್ಚು ಮಕ್ಕಳನ್ನ ಒಂದೆಡೆ ಸೇರಿಸುವಂತಿಲ್ಲ ಎಂದು ಸ್ಪಷ್ಟವಾಗಿ ವಿದ್ಯಾಗಮ ಆದೇಶದಲ್ಲಿ ಹೇಳಲಾಗಿತ್ತು.

ಆದ್ರೀಗ ಶಿಕ್ಷಕರು ವಿದ್ಯಾಗಮ ಯೋಜನೆಯ ಅನುಷ್ಟಾನದ ವೇಳೆಯಲ್ಲಿ ಶಿಕ್ಷಕರು ಮಕ್ಕಳನ್ನು ಶಾಲೆಗೆ ಕರೆಯಿಸಿ ಪಾಠ ಮಾಡುತ್ತಿದ್ದಾರೆ. ಮಾತ್ರವಲ್ಲ ವಿದ್ಯಾರ್ಥಿಗಳನ್ನು ಗುಂಪುಗುಂಪಾಗಿ ಕೂರಿಸಿ ಪಾಠ ಮಾಡುತ್ತಿರುವುದರಿಂದಾಗಿ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ. ಇನ್ನೊಂದೆಡೆ ಹಲವು ಶಿಕ್ಷಕರು, ವಿದ್ಯಾರ್ಥಿಗಳು ಮಾಸ್ಕ್ ಬಳಕೆಯನ್ನು ಮಾಡುತ್ತಿಲ್ಲ. ಅದ್ರಲ್ಲೂ ಶಿಕ್ಷಕರನ್ನು ಕೊರೊನಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದ್ದು, ಅದೇ ಶಿಕ್ಷಕರು ವಿದ್ಯಾಗಮ ಕಾರ್ಯಕ್ಕೂ ಹಾಜರಾಗುತ್ತಿದ್ದಾರೆ. ಇದರಿಂದಾಗಿ ಶಿಕ್ಷಕರಿಂದಲೇ ವಿದ್ಯಾರ್ಥಿ ಗಳಿಗೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ.

ಇನ್ನು ವಿದ್ಯಾಗಮ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ 5ಕ್ಕೂ ಅಧಿಕ ಶಿಕ್ಷಕರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಅದ್ರಲ್ಲೂ ರೆಡ್ ಝೋನ್ ಜಿಲ್ಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಪದೇ ಪದೇ ಭೇಟಿಯಾಗಿ ಮಾರ್ಗಸೂಚಿಯನ್ನು ಪಾಲನೆ ಮಾಡದಿರುವುದು ಪೋಷಕರಲ್ಲಿ ಆತಂಕವನ್ನು ತಂದೊಡ್ಡಿದೆ.

ಎಸ್ಎಸ್ಎಲ್ ಸಿ ಪರೀಕ್ಷೆ ಯಶಸ್ವಿಯಾಗಿ ಮುಗಿಸಿದ ಬೆನ್ನಲ್ಲೇ ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಸಚಿವರು ಅತೀಯಾದ ಆತ್ಮವಿಶ್ವಾಸ ದೊಂದಿಗೆ ಯೋಜನೆಯನ್ನು ಜಾರಿಗೆ ತಂದು ಇದೀಗ ಎಡವಟ್ಟು ಮಾಡಿಕೊಂಡಿದ್ದಾರೆ. ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿಯೇ ಮಕ್ಕಳ ಆರೋಗ್ಯಕ್ಕಿಂತ ಶಿಕ್ಷಣದ ಪ್ರಯೋಗಕ್ಕೆ ಮುಂದಾಗಿರುವುದು ಎಷ್ಟು ಸರಿಯೆಂಬ ಪ್ರಶ್ನೆ ಎದ್ದಿದೆ.

ಜೊತೆಗೆ ಶಿಕ್ಷಣ ಇಲಾಖೆ ಕೇಂದ್ರ ಸರಕಾರ ಜಾರಿಗೆ ತಂದಿರುವ ರಾಷ್ಟ್ರೀಯ ವಿಪತ್ತು ಕಾಯ್ದೆಯನ್ನು ಉಲ್ಲಂಘನೆ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಶಿಕ್ಷಕರು ಮಾರ್ಗಸೂಚಿನಗಳನ್ನು ಪಾಲನೆ ಮಾಡದೇ ವಿದ್ಯಾಗಮ ಯೋಜನೆಯಲ್ಲಿ ತಮ್ಮನ್ನ ತೊಡಗಿಸಿ ಕೊಳ್ಳುತ್ತಿರುವುದು ತಮ್ಮ ಜೀವದ ಜೊತೆಗೆ ಮಕ್ಕಳ ಭವಿಷ್ಯದ ಜೊತೆಗೂ ಚೆಲ್ಲಾಟವಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.

ಖಾಸಗಿ ಶಾಲೆಗಳನ್ನು ಆರಂಭಿಸಿ : ಶಶಿಕುಮಾರ್ ಆಗ್ರಹ
ವಿದ್ಯಾಗಮ ಯೋಜನೆ ಹೆಸರಲ್ಲಿ ಸರಕಾರಿ ಶಾಲೆಗಳ ಒಳಗೆ ಮಕ್ಕಳಿಗೆ ಪಾಠ ಮಾಡುವ ಕಾರ್ಯವನ್ನು ಶಿಕ್ಷಕರು ಮಾಡುತ್ತಿದ್ದಾರೆ. ಇದಕ್ಕೆ ಶಿಕ್ಷಣ ಇಲಾಖೆಯೇ ನೇರ ಹೊಣೆ. ಶಾಲೆಗಳನ್ನು ಆರಂಭ ಮಾಡದಂತೆ ಆದೇಶವಿದೆ. ಆದರೂ ಶಾಲೆಗಳನ್ನು ಆರಂಭಿಸಿ ಪಾಠ ಮಾಡಲಾಗುತ್ತಿದೆ. ಖಾಸಗಿ ಶಾಲೆಗಳು ಶುಲ್ಕವನ್ನು ತೆಗೆದುಕೊಳ್ಳ ಬಾರದೆಂದು ಹೇಳುವ ಮೂಲಕ ಪೋಷಕರು ಅಡ್ಮಿಷನ್ ಮಾಡುತ್ತಿಲ್ಲ. ಈ ಮೂಲಕ ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳನ್ನು ತುಳಿಯುವ ಕಾರ್ಯವನ್ನು ಮಾಡುತ್ತಿದ್ದಾರೆ.

ಅಲ್ಲದೇ ಶಿಕ್ಷಕರು ಕೂಡ ಖಾಸಗಿ ಶಾಲೆಗಳು ಆರಂಭವಾಗುವುದಿಲ್ಲವೆಂಬ ಹೇಳಿಕೆಯನ್ನು ನೀಡುತ್ತಿದ್ದಾರೆ. ಸರಕಾರಿ ಶಾಲೆಗಳಲ್ಲಿ ಪಾಠ ಮಾಡಬಹುದಾದ್ರೆ ಖಾಸಗಿ ಶಾಲೆಗಳನ್ನು ಆರಂಭಿಸಲು ಅವಕಾಶ ನೀಡಿ. ಇನ್ನೊಂದೆಡೆ ಶಿಕ್ಷಣ ಸಚಿವರು ಕೂಡ ಕೊಟ್ಟ ಭರವಸೆಯನ್ನು ಈಡೇರಿಸದೇ ವಂಚಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುಬೇಕೆಂದು ಕೆಎಎಂಎಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಆಗ್ರಹಿಸಿದ್ದಾರೆ.

Leave A Reply

Your email address will not be published.