ಮಂಗಳೂರು ಏರ್ ಪೋರ್ಟ್ ಗೆ ಹುಸಿ ಬಾಂಬ್ ಕರೆ ಪ್ರಕರಣ: ಆರೋಪಿ ಬಂಧನ

0

ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿಬಾಂಬ್ ಕರೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುರಾಡಿಯ ವಸಂತ (33ವರ್ಷ) ಎಂಬಾತನನ್ನು ಬಜಪೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಮಧ್ಯಾಹ್ನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕರಿಗೆ ಕರೆ ಮಾಡಿ ಮತ್ತು ಮೆಸೇಜ್ ಮೂಲಕ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದಾಗಿ ಬೆದರಿಕೆಯನ್ನು ಹಾಕಿದ್ದ.

ಬೆದರಿಕೆ ಕರೆ ಬರುತ್ತಿದ್ದಂತೆಯೇ ಅಲರ್ಟ್ ಆದ ಬಜಪೆ ಠಾಣೆಯ ಪೊಲೀಸರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂಧಿಗಳ ಜೊತೆ ಸೇರಿ ವಿಮಾನ ನಿಲ್ದಾಣದಲ್ಲಿ ತಪಾಸಣೆಯನ್ನು ನಡೆಸಿದ್ದಾರೆ. ಆದರೆ ಈ ವೇಳೆಯಲ್ಲಿ ಯಾವುದೇ ಬಾಂಬ್ ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ವಿಕಾಸ್ ಕುಮಾರ್ ಅವರು ಇದೊಂದು ಹುಸಿ ಕರೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ನಂತರ ಕರೆಯ ಜಾಡು ಹಿಡಿದು ಹೊರಟ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಹುಸಿಬಾಂಬ್ ಕರೆ ಮಾಡಿರುವ ಕುರಿತು ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಆರೋಪಿ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಕಳೆದ ಕೆಲವೇ ತಿಂಗಳ ಹಿಂದೆಯಷ್ಟೇ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆದಿತ್ಯರಾವ್ ಎಂಬಾತ ಬಾಂಬ್ ಇರಿಸಿ ಬೆದರಿಕೆಯೊಡ್ಡಿದ್ದ. ನಂತರ ಬಾಂಬ್ ನಿಷ್ಕ್ರೀಯ ಮಾಡುವುದರ ಜೊತೆಗೆ ಆರೋಪಿಯನ್ನು ನಗರ ಪೊಲೀಸರು ಬಂಧಿಸಿದ್ದರು. ಇದೀಗ ಮತ್ತೊಂದು ಬಾಂಬ್ ಕರೆ ಬಂದಿದ್ದು, ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಯಾವ ಉದ್ದೇಶಕ್ಕೆ ಈತ ಕರೆ ಮಾಡಿದ್ದ ಅನ್ನುವ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ.

Leave A Reply

Your email address will not be published.