ಶಿಕ್ಷಕರು ಮನೆಯಿಂದಲೇ ಕೆಲಸ ನಿರ್ವಹಿಸಿ : ಶಿಕ್ಷಕರ ಗೊಂದಲಕ್ಕೆ ತೆರೆ ಎಳೆದ ಸಿ.ಎಸ್.ಷಡಕ್ಷರಿ

0

ಬೆಂಗಳೂರು : ಕೊರೊನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಅಗಸ್ಟ್ 31ರ ವರೆಗೆ ಶಿಕ್ಷಕರು ಮನೆಯಿಂದಲೇ ಕರ್ತವ್ಯವನ್ನು ನಿರ್ವಹಿಸಬೇಕು. ಈ ವೇಳೆಯಲ್ಲಿ ರಾಜ್ಯ ಸರಕಾರ ವಿದ್ಯಾಗಮ ಯೋಜನೆಯನ್ನು ಜಾರಿ ಮಾಡಿದ್ದು, ಶಿಕ್ಷಕರ ಕಾರ್ಯನಿರ್ವಹಣೆಯ ಬಗ್ಗೆ ಇನ್ನೆರಡು ದಿನಗಳಲ್ಲಿ ಸ್ಪಷ್ಟ ಮಾರ್ಗಸೂಚಿ ಹೊರಬೀಳಲಿದೆ.

ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಅನ್ ಲಾಕ್ 3.0 ಮಾರ್ಗೂಚಿಯ ಅನ್ವಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಶಾಲೆಗಳನ್ನು ಅಗಸ್ಟ್ 31ರ ವರಗೆ ತೆರೆಯದಂತೆ ಆದೇಶ ಹೊರಡಿಸಿದೆ. ಶೈಕ್ಷಣಿಕ ಸಂಸ್ಥೆಗಳನ್ನು ಯಾವುದೇ ಕಾರಣಕ್ಕೆ ಆರಂಭಿಸದಂತೆ ಸೂಚನೆಯನ್ನು ನೀಡಲಾಗಿತ್ತು. ಈ ಆದೇಶದ ಬೆನ್ನಲ್ಲೇ ಕೆಲ ಶಿಕ್ಷಕರು ಶಾಲೆಗೆ ಹೋಗಬೇಕೇ, ಇಲ್ಲಾ ಮನೆಯಿಂದಲೇ ಕರ್ತವ್ಯ ನಿರ್ವಹಿಸಬೇಕೆ ಅನ್ನುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸಿದ್ದರು. ಶಿಕ್ಷಕರಲ್ಲಿ ಉಂಟಾದ ಗೊಂದಲಕ್ಕೆ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರು ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.

ಕೊರೊನಾ ಸೋಂಕು ಹರಡದಂತೆ ರಾಜ್ಯ ಸರಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಅದರ ಭಾಗವಾಗಿಯೇ ಮಕ್ಕಳು ಶಾಲೆಗೆ ಬರಬಾರದು ಎಂಬ ನಿಟ್ಟಿನಲ್ಲಿ ವಿದ್ಯಾಗಮ ಯೋಜನೆಯನ್ನು ಜಾರಿಗೊಳಿಸಲಾಗಿದೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸುವುದು, ಮನೆ ಮನೆಗೆ ತೆರಳಿ ಶಿಕ್ಷಣ ನೀಡುವುದು, ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ನಿವಾರಿಸುವ ಕಾರ್ಯವನ್ನು ಮಾಡಬೇಕಿದೆ.

ಅಗಸ್ಟ್ ತಿಂಗಳಿನಲ್ಲಿ ಶಿಕ್ಷಕರು ವರ್ಕ್ ಫ್ರಂ ಹೋಮ್ ಅಡಿಯಲ್ಲಿ ಯಾವೆಲ್ಲಾ ಕ್ರಮಗಳನ್ನುಕೈಗೊಳ್ಳಬೇಕು ಎಂಬ ಕುರಿತು ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಚಿವ ಸುರೇಶ್ ಕುಮಾರ್ ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜೊತೆಗೆ ಚರ್ಚಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಇಂದು ಸ್ಪಷ್ಟ ಮಾರ್ಗಸೂಚಿಯನ್ನು ಹೊರಡಿಸಲಿದ್ದಾರೆ ಎಂದು ಷಡಕ್ಷರಿ ಅವರು ತಿಳಿಸಿದ್ದಾರೆ.

Leave A Reply

Your email address will not be published.