ಕೊರೊನಾ ಆಯ್ತು ಇದೀಗ ಮಂಗನಕಾಯಿಲೆ ಭೀತಿ : ಮೂವರಿಗೆ ತಗುಲಿದೆ ಸೋಂಕು

0

ಚಿಕ್ಕಮಗಳೂರು : ಮಲೆನಾಡಿನ ಭಾಗಗಳಲ್ಲಿ ಹಲವರನ್ನು ಬಲಿ ಪಡೆದಿದ್ದ ಮಂಗನಕಾಯಿಲೆ ಇದೀಗ ಕಾಫಿನಾಡು ಚಿಕ್ಕಮಗಳೂರಿಗೂ ಕಾಲಿಟ್ಟಿದೆ. ಅಸ್ಸಾಂ ಮೂಲದ ಮೂವರು ಕಾರ್ಮಿಕರು ಮಂಗನಕಾಯಿಲೆಗೆ ತುತ್ತಾಗಿರೋ ದೃಢಪಟ್ಟಿದೆ. ಹೀಗಾಗಿ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡಿನಲ್ಲಿ ಕಳೆದ ಬಾರಿ ಮರಣ ಮೃದಂಗ ಬಾರಿಸಿದ್ದ ಕೆಎಫ್ ಡಿ (ಮಂಗನಕಾಯಿಲೆ) ಮಲೆನಾಡಿನ ಭಾಗಗಳಲ್ಲಿ ಬಾರೀ ಆತಂಕವನ್ನು ಸೃಷ್ಟಿಸಿತ್ತು. ಇದೀಗ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರದ ಮಡಬೂರಿನಲ್ಲಿ ಮಂಗನಕಾಯಿಲೆ ಪತ್ತೆಯಾಗಿದೆ.

ಕಾರ್ಮಿಕರಿಗೆ ಮಂಗನಕಾಯಿಲೆಯ ಸೋಂಕು ಇರುವುದನ್ನು ಜಿಲ್ಲಾ ಆರೋಗ್ಯ ಇಲಾಖೆ ದೃಢಪಡಿಸಿದ್ದು, ಸೋಂಕು ಪೀಡಿತರನ್ನು ಈಗಾಗಲೇ ಶಿವಮೊಗ್ಗದ ಮೆಗ್ಗಾನೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಸೋಂಕು ಹರಡದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ

ಗ್ರಾಮಕ್ಕೆ ವಿಚಕ್ಷಣ ವೈದ್ಯ ಸುಭಾಷ್ ನೇತೃತ್ವದ ತಂಡ ಭೇಟಿಯನ್ನು ನೀಡಿದ್ದು, ಹಲವರನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಮಂಗನ ಕಾಯಿಲೆ ಕಾಣಿಸಿಕೊಂಡಿರುವ ಮಡಬೂರು ಗ್ರಾಮದ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ ನಿರೋಧಕ ಲಸಿಕೆಯನ್ನು ಹಾಕಲಾಗುತ್ತಿದೆ.

6 ರಿಂದ 65 ವರ್ಷ ವಯೋಮಾನದವರಿಗೆ ಲಸಿಕೆಯನ್ನು ನೀಡಲಾಗುತ್ತಿದ್ದು, ಗ್ರಾಮದಾದ್ಯಂತ ಕಟ್ಟೆಚ್ಚರವಹಿಸಲಾಗಿದೆ. ಕೊರೊನಾ ಸೋಂಕಿನ ಭೀತಿ ಜನರನ್ನು ಕಾಡುತ್ತಿರೋ ಬೆನ್ನಲ್ಲೇ ಮಂಗನ ಕಾಯಿಲೆ ಕಾಣಿಸಿಕೊಂಡಿರುವುದು ಜನರಲ್ಲಿ ಆತಂಕವನ್ನು ಮೂಡಿಸಿದೆ.

Leave A Reply

Your email address will not be published.