Relief From Joint Pain: ಚಳಿಗಾಲದಲ್ಲಿ ಗಂಟುನೋವೇ? ಇಲ್ಲಿದೆ ಪರಿಹಾರೋಪಾಯ

ವಯಸ್ಸಾದಂತೆ ಕೈ, ಕಾಲು ಹಾಗೂ ಗಂಟುಗಳಲ್ಲಿ ನೋವು ಕಂಡು ಬರುವುದು ಸಾಮಾನ್ಯ. ಆದರೆ ಚಳಿಗಾಲದಲ್ಲಿ (Winter Session) ಬರುವ ಗಂಟುನೋವಿಗೆ ವಯಸ್ಸಿನ ಹಂಗಿರುವುದಿಲ್ಲ. ಯುವಕರಿಂದ ಹಿಡಿದು ವಯೋವೃದ್ಧರವರೆಗೆ ಅನೇಕರು ಗಂಟು ನೋವುಗಳಿಂದ ಬಳಲುತ್ತಾರೆ. ದೇಹವನ್ನು ಬೆಚ್ಚಗಿಡುವ ಮೂಲಕ ಸ್ನಾಯುಗಳಲ್ಲಿ (Muscle Catch) ಹಾಗೂ ಗಂಟುಗಳಲ್ಲಿ ಕಂಡುಬರುವ ನೋವನ್ನು ( Relief From joint Pain ) ಸ್ವಲ್ಪಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು ಎನ್ನುತ್ತಾರೆ ತಜ್ಞ ವೈದ್ಯರು.

ಚಳಿ ಹೆಚ್ಚಿರುವ ಸಂದರ್ಭಗಳಲ್ಲಿ, ವಾತಾವರಣದ ಉಷ್ಣತೆ ಗಣನೀಯವಾಗಿ ಕಡಿಮೆಯಾದಾಗ ಸ್ನಾಯುಗಳಲ್ಲಿ ಬಿಗಿತ ಉಂಟಾಗಿ ನೋವು ಕಂಡುಬರುವ ಸಾಧ್ಯತೆ ಇದೆ. ವಾತಾವರಣದಲ್ಲಿನ ಒತ್ತಡ ಕಡಿಮೆ ಆಗುವುದರಿಂದ ಕೀಲುಗಳು, ಸ್ನಾಯುಗಳು, ಸ್ನಾಯುರಜ್ಜುಗಳು ಊದಿಕೊಳ್ಳುವ ಸಾಧ್ಯತೆಯಿದೆ. ಇದು ಕೂಡ ಗಂಟು ನೋವಿಗೆ ಕಾರಣವಾಗಬಹುದು ಎಂದು ಅಧ್ಯಯನಗಳನ್ನು ಉಲ್ಲೇಖಿಸಿ ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಯೊಂದರ ತಜ್ಞ ವೈದ್ಯ ಡಾ. ಸಿದ್ಧಾರ್ಥ ಎಂ ಶಾ ಹೇಳಿದ್ದಾರೆ.

ಚಳಿಗಾಲದಲ್ಲಿ ಬಿಸಿಲಿಗೆ ಮೈಯೊಡ್ಡುವುದು ಕಡಿಮೆಯಾಗುವುದರಿಂದ ವಿಟಮಿನ್ ಡಿ ಅಂಶ ಶರೀರದಲ್ಲಿ ಕಡಿಮೆಯಾಗುತ್ತದೆ. ಇದರ ಪರಿಣಾಮದಿಂದಲೂ ಎಲುಬುಗಳಲ್ಲಿ ನೋವು ಕಂಡು ಬರುವುದು ಸಾಮಾನ್ಯ ಎಂದು ಅವರು ಹೇಳಿದ್ದಾರೆ.

ಪರಿಹಾರವೇನು?
ಚಳಿಗಾಲದಲ್ಲಿ ಗಂಟುಗಳು ಹಾಗೂ ಸ್ನಾಯುಗಳಲ್ಲಿ ಕಂಡುಬರುವ ನೋವಿಗೆ ಡಾ. ಸಿದ್ದಾರ್ಥ ಅವರು ಸೂಚಿಸಿರುವ ಸರಳ ಪರಿಹಾರಗಳು ಇಲ್ಲಿವೆ;
* ಚಳಿಗಾಲದಲ್ಲಿ ನಿಮ್ಮನ್ನು ನೀವು ಬೆಚ್ಚಗೆ ಇರುವಂತೆ ನೋಡಿಕೊಳ್ಳಿ. ದಪ್ಪದ, ಮೈ ಬೆಚ್ಚಗಿರಿಸುವಂತಹ ಬಟ್ಟೆಗಳನ್ನು ಧರಿಸಿ.
* ನಿಯಮಿತವಾಗಿ ವ್ಯಾಯಾಮ ಮಾಡಿ. ಇದರಿಂದ ಸ್ನಾಯುಗಳು ಚುರುಕಾಗಿರುವುದಿಲ್ಲದೆ ಅವುಗಳ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ರಕ್ತದ ಹರಿವು ಸುಗಮವಾಗುತ್ತದೆ. ವ್ಯಾಯಾಮ ಮಾಡುವುದಕ್ಕೂ ಮುನ್ನ ಶರೀರವನ್ನು ವಾರ್ಮ್‌ಅಪ್ ಮಾಡಿಕೊಳ್ಳುವುದನ್ನು ಮರೆಯದಿರಿ.
* ದೇಹದ ತೂಕವನ್ನು ಆರೋಗ್ಯಕರ ಮಟ್ಟದಲ್ಲಿ ಕಾಯ್ದುಕೊಳ್ಳಿ. ಚಳಿಗಾಲದಲ್ಲಿ ಅನಿಯಮಿತ ಆಹಾರ ಸೇವನೆ ಮಾಡುವುದು, ವ್ಯಾಯಾಮ ಮಾಡದೇ ಇರುವುದರಿಂದ ಶರೀರದ ತೂಕ ಹೆಚ್ಚಾಗುವ ಸಾಧ್ಯತೆ ಇದೆ. ಪರಿಣಾಮವಾಗಿ ಮೊಣಕಾಲು, ಪಾದದ ಗಂಟುಗಳಲ್ಲಿ ನೋವು ಕಾಣಿಸುವ ಸಾಧ್ಯತೆ ಇದೆ.
* ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಅಂಶ ಹೆಚ್ಚಿರುವ ಆಹಾರಗಳನ್ನು ಚಳಿಗಾಲದಲ್ಲಿ ಆದ್ಯತೆಯ ಮೇರೆಗೆ ಸೇವಿಸಬೇಕು. ಇದು ಎಲುಬಿನ ಆರೋಗ್ಯಕ್ಕೆ ತೀರಾ ಅಗತ್ಯ.
* ಗಂಟುನೋವು ಇರುವ ಜಾಗಕ್ಕೆ ಎಣ್ಣೆ ಹಚ್ಚಿ ನಯವಾಗಿ ಮಸಾಜ್ ಮಾಡುವುದು, ಬಿಸಿ ನೀರಿನ ಶಾಖ ಕೊಡುವುದು ಉತ್ತಮ. ಇದರಿಂದ ತಕ್ಕಮಟ್ಟಿಗೆ ನೋವಿನಿಂದ ಪರಿಹಾರ ಕಂಡುಕೊಳ್ಳಬಹುದು. ಇನ್ನೂ ಹೆಚ್ಚಿನ ನೋವು ಇದ್ದಲ್ಲಿ ಎಲೆಕ್ಟ್ರಿಕ್ ಹೀಟಿಂಗ್, ಐಸ್ ಪ್ಯಾಕ್ ಇತ್ಯಾದಿಗಳ ಮೊರೆ ಹೋಗಬಹುದು. ಆದರೆ ಈ ವಿಧಾನಗಳನ್ನು ಅನುಸರಿಸುವ ಮುನ್ನ ತಜ್ಞ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಇದನ್ನೂ ಓದಿ: Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ

ಇದನ್ನೂ ಓದಿ: real estate 11e sketch: ಕೃಷಿ ಭೂಮಿಯನ್ನು ಸೈಟ್ ಆಗಿ ಪರಿವರ್ತಿಸುವ, ಸೈಟ್ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳಿವು

Relief From Joint Pain : Regardless of age a lot of people complain of joint pains in the winter season Here is tips for relief from joint pain

Comments are closed.