ಅಕ್ರಮ ಗಣಿಗಾರಿಕೆ ವಿರೋಧಿಸಿ ದಲಿತ ಯುವಕನ ಮೇಲೆ ಮೂತ್ರ ವಿಸರ್ಜನೆ : ಮಾನವೀಯತೆ ಮರೆತ ಪಾಪಿಗಳು

Madhya Pradesh : ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ನಾಲ್ವರು ದಲಿತ ಯುವಕನನ್ನು ಮನಬಂದಂತೆ ಥಳಿಸಿದ ಅಮಾನವೀಯ ಘಟನೆ ವರದಿಯಾಗಿದೆ.
ಥಳಿಸಿದ ನಂತರ ಮಾತ್ರವಲ್ಲದೇ ಆತನ ಮೈಮೇಲೆ ಮೂತ್ರ ವಿಸರ್ಜನೆ ಮಾಡುವ ಮೂಲಕ ಚಿತ್ರಹಿಂಸೆ ನೀಡಿದ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿರುವ ಬಹೋರಿ ಬಂದ್ ಪೊಲೀಸ್ ಠಾಣಾ ವ್ಯಾಪ್ತಿಯ ಮತ್ವಾರಾ ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ಮುಖ್ಯಸ್ಥನ ಪುತ್ರ ಪವನ್ ಪಾಂಡೆ ಎಂಬಾತ ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ, ಜಾತಿ ನಿಂದನೆ ಮಾಡಿದ್ದು ಮಾತ್ರವಲ್ಲದೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಲ್ಲಿ ನಿನ್ನನ್ನು ಕೊಂದು ಹಾಕುತ್ತೇವೆ ಎಂದು ಪ್ರಾಣಾಪಾಯದ ಬೆದರಿಕೆ ಹಾಕಿದ್ದರು ಎಂದು ದಲಿತ ಯುವಕ ರಾಜಕುಮಾರ್ ಚೌಧರಿ ಆರೋಪಿಸಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ಜಲ್ಲಿಕಲ್ಲು ತುಂಬುವ ವಿಚಾರವಾಗಿ ನಡೆದ ವಿವಾದವು ಈ ಹಂತಕ್ಕೆ ಹೋಗಿ ತಲುಪಿದೆ ಎನ್ನಲಾಗಿದೆ. ಮಾತಿಗೆ ಮಾತು ಬೆಳೆದು ಬಳಿಕ ರಾಜ್ಕುಮಾರ್ ಮೇಲೆ ಹಲ್ಲೆ ನಡೆದಿದೆ. ಆರೋಪಿಗಳು ತಮ್ಮ ಜಮೀನಿನಲ್ಲಿ ನಡೆಸುತ್ತಿದ್ದ ಅಕ್ರಮ ಗಣಿಗಾರಿಕೆಯನ್ನು ರಾಜ್ಕುಮಾರ್ ವಿರೋಧಿಸಿದ ಹಿನ್ನೆಲೆಯಲ್ಲಿ ಈ ಸಂಘರ್ಷ ಸಂಭವಿಸಿದೆ ಎನ್ನಲಾಗಿದೆ.
ಇನ್ನು ಈ ವಿಚಾರವಾಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಡೆಹರಿಯಾ ಪ್ರತಿಕ್ರಿಯೆ ನೀಡಿದ್ದು, ಆರೋಪಿಗಳಾದ ರಾಮಾನುಜ ಪಾಂಡೆ, ರಾಮ್ ಬಿಹಾರಿ ಪಾಂಡೆ, ಪವನ್ ಪಾಂಡೆ ಹಾಗೂ ಸತೀಶ್ ಪಾಂಡೆ ಎಂಬವರು ದಲಿತ ಯುವಕ ರಾಜಕುಮಾರ್ ಚೌಧರಿಯನ್ನು ಅವಮಾನಿಸಿ ಹಿಂಸಿಸಿದ್ದಾರೆ.
ಇದನ್ನೂ ಓದಿ : ಸುಪ್ರೀಂ ಕೋರ್ಟ್ ಬೆನ್ನಲ್ಲೇ, ಗುಜರಾತ್ ನಲ್ಲಿ ನ್ಯಾಯಮೂರ್ತಿಗಳ ಮೇಲೆ ಚಪ್ಪಲಿ ಎಸೆತ
ಅಲ್ಲದೇ ಮನಬಂದಂತೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಐವರೂ ಮತ್ವಾರಾ ಗ್ರಾಮದ ನಿವಾಸಿಗಳು. ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ನಾಲ್ವರು ಆರೋಪಿಗಳು ಪ್ರಸ್ತುತ ತಲೆಮರೆಸಿಕೊಂಡಿದ್ದು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.
2023ರಲ್ಲಿ ಕಟ್ನಿಯಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಸಿಧಿ ಜಿಲ್ಲೆಯಲ್ಲಿ ಇದೇ ಮಾದರಿಯ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಲಾಗಿತ್ತು.
ಈ ಪ್ರಕರಣವು ರಾಷ್ಟ್ರಮಟ್ಟದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು. ಕೊನೆಗೆ ಇದು ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ವಿಪಕ್ಷಗಳಿಗೆ ರಾಜಕೀಯ ಅಸ್ತ್ರವಾಗಿ ಪರಿಣಮಿಸಿತ್ತು.
ಇದನ್ನೂ ಓದಿ : ಬದುಕಿದ್ದಾಗಲೇ ಸತ್ತಂತೆ ನಟಿಸಿದ ವೃದ್ದ : ಕಾರಣ ಕೇಳಿದ್ರೆ ನಗು ಬರೋದು ಗ್ಯಾರಂಟಿ



