ಅಪ್ಪ-ಮಗನ ಲಾಕಪ್ ಡೆತ್ ಪ್ರಕರಣ : 9 ಪೊಲೀಸರಿಗೆ ಗಲ್ಲು ಶಿಕ್ಷೆ!
ತಂದೆ ಮಗನ ಲಾಕಪ್ ಡೆತ್ ಪ್ರಕರಣ ಸಂಬಂಧಿಸಿದಂತೆ ಮಧುರೈ ಜಿಲ್ಲಾ ನ್ಯಾಯಾಲಯ 9 ಪೊಲೀಸರಿಗೆ ಮರಣದಂಡನೆ ವಿಧಿಸಿದೆ.
ತಮಿಳುನಾಡಿನ ಅಪ್ಪ ಮಗನ ಲಾಕಪ್ ಡೆತ್ ಪ್ರಕರಣ ಸದ್ಯ ದೇಶದಾದ್ಯಂತ ಸುದ್ದಿಯಾಗುತ್ತಿದೆ. ಆರು ವರ್ಷದ ಹಿಂದೆ ನಡೆದಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುರೈ ಜಿಲ್ಲಾ ನ್ಯಾಯಾಲಯ ಪೊಲೀಸರಿಗೆ ಮರಣದಂಡನೆ ವಿಧಿಸಿದೆ. ಭಾರತದ ಇತಿಹಾಸದಲ್ಲಿಯೇ ನ್ಯಾಯಾಲಯವೊಂದು ಇಷ್ಟೊಂದು ಪೊಲೀಸರಿಗೆ ಮರಣದಂಡನೆ ವಿಧಿಸಿದ ಮೊದಲ ಪ್ರಕರಣ ಎನಿಸಿಕೊಂಡಿದೆ.
ಏನಿದು ಪ್ರಕರಣ?
2020ರ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ, ಮೊಬೈಲ್ ಅಂಗಡಿ ಜಯರಾಜ್ (58 ವರ್ಷ) ಮತ್ತು ಅವರ ಮಗ ಜೆ. ಬೆನ್ನಿಕ್ಸ್ (31 ವರ್ಷ) ಅವರು ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ಅಂಗಡಿ ತೆರೆದಿದ್ದರು ಎಂಬ ಕಾರಣಕ್ಕೆ ಪೊಲೀಸರು ಅವರನ್ನು ವಶಕ್ಕೆ ಪಡೆದು,ಇವರಿಬ್ಬರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಲಾಗಿತ್ತು. ತೀವ್ರ ಗಾಯಗೊಂಡಿದ್ದ ಬೆನ್ನಿಕ್ಸ್ ಜೂನ್ 22ರಂದು ಮತ್ತು ಜಯರಾಜ್ ಜೂನ್ 23ರಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಪೊಲೀಸ್ ಕಸ್ಟಡಿಯಲ್ಲಿದ್ದಾಗ ಜಯರಾಜ್ ಮತ್ತು ಬೆನ್ನಿಕ್ಸ್ ಅವರಿಗೆ ಕೇವಲ ಹೊಡೆತ ಮಾತ್ರ ನೀಡಿರಲಿಲ್ಲ, ಬದಲಿಗೆ ಅತೀವವಾದ ಲೈಂಗಿಕ ದೌರ್ಜನ್ಯ ಮತ್ತು ದೈಹಿಕ ಹಿಂಸೆ ನೀಡಲಾಗಿತ್ತು ಎಂದು ಸಿಬಿಐ (CBI) ತನ್ನ ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿತ್ತು. ರಕ್ತದ ಮಡುವಿನಲ್ಲಿದ್ದ ಅವರನ್ನು ಜೈಲಿಗೆ ಕಳುಹಿಸುವ ಮೊದಲು ಅವರ ಬಟ್ಟೆಗಳನ್ನು ಬದಲಾಯಿಸಲು ಪೊಲೀಸರು ಒತ್ತಾಯಿಸಿದ್ದರು ಎಂಬ ಅಂಶ ನ್ಯಾಯಾಲಯದಲ್ಲಿ ಸಾಬೀತಾಗಿದೆ.
ಇದನ್ನೂ ಓದಿ : ದ್ವಿಭಾಷಾ ನೀತಿ ಮರುಪರಿಶೀಲನೆಗೆ ರಾಜ್ಯಪಾಲರ ನಿರ್ದೇಶನ : ಕರವೇ ಪ್ರತಿಭಟನೆ
ಪೊಲೀಸರಿಂದಲೇ ಸಾಕ್ಷ್ಯ ನಾಶ ಯತ್ನ
ಆರೋಪಿ ಪೊಲೀಸರು ಸ್ಟೇಷನ್‌ನಲ್ಲಿದ್ದ ರಕ್ತದ ಕಲೆಗಳನ್ನು ತೊಳೆದು ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಿದ್ದರು. ಅಲ್ಲದೆ, ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಿ ಹಾಕಲಾಗಿತ್ತು. ಆದರೆ, ಆ ದಿನ ಪೊಲೀಸ್ ಠಾಣೆಯಲ್ಲಿದ್ದ ರೇವತಿ ಎಂಬ ಮಹಿಳಾ ಪೊಲೀಸ್ ಪೇದೆಯ ಧೈರ್ಯದ ಸಾಕ್ಷ್ಯವು ಈ ಪ್ರಕರಣದಲ್ಲಿ ಅತ್ಯಂತ ನಿರ್ಣಾಯಕವಾಯಿತು. ಅವರು ನೀಡಿದ ಹೇಳಿಕೆಯು ಪೊಲೀಸರ ಅಮಾನವೀಯ ಕೃತ್ಯವನ್ನು ಸಾಬೀತುಪಡಿಸಲು ಸಹಾಯ ಮಾಡಿತು.
ನ್ಯಾಯಾಲಯದ ಆದೇಶದಲ್ಲೇನಿದೆ ?
ನ್ಯಾಯಾಲಯವು ವಿಧಿಸಿರುವ 1.40 ಕೋಟಿ ರೂಪಾಯಿ ದಂಡವು ಭಾರತದಲ್ಲಿ ಕಸ್ಟಡಿಯಲ್ ಡೆತ್ ಪ್ರಕರಣವೊಂದರಲ್ಲಿ ವಿಧಿಸಲಾದ ಅತಿ ದೊಡ್ಡ ಮೊತ್ತಗಳಲ್ಲಿ ಒಂದಾಗಿದೆ. ಈ ಮೊತ್ತವನ್ನು ಜಯರಾಜ್ ಅವರ ಪತ್ನಿ (ಬೆನ್ನಿಕ್ಸ್ ತಾಯಿ) ಸೆಲ್ವರಾಣಿ ಅವರಿಗೆ ನೀಡುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ :ಇಂದಿನಿಂದ ರಾಜ್ಯದಲ್ಲಿ ಮತ್ತೆ ಶುರು ವರುಣನ ಅಬ್ಬರ..! 16 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಸುದೀರ್ಘ ವಿಚಾರಣೆಯ ನಂತರ, ತಂದೆ-ಮಗನ ಲಾಕ್ ಅಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಏಪ್ರಿಲ್ 6, 2026 ರಂದು ಮಧುರೈ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಈ ಕೃತ್ಯವು “ಅಪರೂಪದಲ್ಲಿ ಅಪರೂಪದ ಪ್ರಕರಣ” ಎಂದು ಪರಿಗಣಿಸಿದ ನ್ಯಾಯಾಲಯವು, ಕರ್ತವ್ಯದಲ್ಲಿದ್ದ 9 ಮಂದಿ ಪೊಲೀಸ್ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದೆ.



