ಹೆಂಡತಿ ಹೆರಿಗೆಗೆ ಮನೆಗೆ ಬಂದಿದ್ದ ಯೋಧ ಮಗಳು ಹುಟ್ಟುವ ಕೆಲವೇ ಗಂಟೆಗಳ ಮೊದಲು ಸಾವು!
Indian Army Soldier: ಸತಾರಾ (ಮಹಾರಾಷ್ಟ್ರ): ಹೊಸ ಜೀವದ ಆಗಮನದ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ವಿಧಿಯಾಟ ಮರಣದ ಶೋಕವನ್ನು ತಂದಿಟ್ಟಿದೆ. ಹೆಂಡತಿಯ ಹೆರಿಗೆಗಾಗಿ ರಜೆ ಮೇಲೆ ಬಂದಿದ್ದ ಭಾರತೀಯ ಸೇನೆಯ ಯೋಧ ಪ್ರಮೋದ್ ಜಾಧವ್, ತಮ್ಮ ಮಗಳ ಮುಖ ನೋಡುವ ಮೊದಲೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಸತಾರಾದ ಪರ್ಲಿ ನಿವಾಸಿಯಾದ ಪ್ರಮೋದ್ ಜಾಧವ್ ಅವರು ತಮ್ಮ ಪತ್ನಿಯ ಹೆರಿಗೆಗಾಗಿ ರಜೆ ಪಡೆದು ಊರಿಗೆ ಬಂದಿದ್ದರು. ಪತ್ನಿಯನ್ನು ಹೆರಿಗೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗು ಜನಿಸಲು ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗ, ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಪ್ರಮೋದ್ ಭೀಕರ ಅಪಘಾತಕ್ಕೀಡಾಗಿ ಕೊನೆಯುಸಿರೆಳೆದರು.
ಹಲವು ವರ್ಷಗಳ ಕಾಯುವಿಕೆ, ಮಗುವಿನ ಮುಖ ನೋಡಲಾಗದ ತಂದೆ:
ಪ್ರಮೋದ್ ನಿಧನರಾದ ಎಂಟು ಗಂಟೆಗಳ ನಂತರ ಅವರ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಂದೆಯ ಸಾವಿನ ಸುದ್ದಿ ತಿಳಿಯದ ಹಸುಗೂಸು ತಂದೆಯಿಲ್ಲದ ಜಗತ್ತಿಗೆ ಕಾಲಿಟ್ಟರೆ, ಅತ್ತ ಮಗುವನ್ನು ಎತ್ತಿ ಮುದ್ದಾಡಬೇಕಿದ್ದ ತಂದೆ ಅದಾಗಲೇ ಹೆಣವಾಗಿದ್ದರು.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಈ 11 ಕಡಲತೀರಗಳು ‘ಬ್ಲೂ ಫ್ಲಾಗ್’ ಮಾನ್ಯತೆಗೆ ಗುರುತು
ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ:
ಯೋಧ ಪ್ರಮೋದ್ ಜಾಧವ್ ಅವರ ಅಂತ್ಯಕ್ರಿಯೆಯನ್ನು ಇಂದು ಪೂರ್ಣ ಮಿಲಿಟರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಈ ವೇಳೆ ಕಂಡುಬಂದ ದೃಶ್ಯ ನೆರೆದಿದ್ದವರ ಕರುಳು ಹಿಂಡುವಂತಿತ್ತು. ಹೆರಿಗೆಯಾಗಿ ಕೇವಲ ಎಂಟು ಗಂಟೆಯಷ್ಟೇ ಆಗಿದ್ದ ಪತ್ನಿಯನ್ನು ಆಸ್ಪತ್ರೆಯಿಂದ ಸ್ಟ್ರೆಚರ್ ಮೇಲೆ ಮಲಗಿಸಿಕೊಂಡೇ ಅಂತ್ಯಕ್ರಿಯೆಯ ಸ್ಥಳಕ್ಕೆ ಕರೆತರಲಾಯಿತು. ಆಕೆ ಸ್ಟ್ರೆಚರ್ ಮೇಲೆ ಮಲಗಿಯೇ ಪ್ರಮೋದ್ ಅವರ ಪಾರ್ಥಿವ ಶರೀರವನ್ನು ಮುಟ್ಟಿ ಕಣ್ಣೀರಿಡುತ್ತಿದ್ದರೆ, ಪಕ್ಕದಲ್ಲೇ ಇದ್ದ ಸಂಬಂಧಿಯೊಬ್ಬರು ಅಷ್ಟೇ ಜನಿಸಿದ ಹಸುಗೂಸನ್ನು ಹಿಡಿದು ನಿಂತಿದ್ದರು.
ತನ್ನ ತಂದೆ ದೇಶ ಕಾಯುವ ಸೈನಿಕ ಎನ್ನುವ ಅರಿವಿಲ್ಲದ, ತಂದೆಯ ಮುಖವನ್ನೂ ನೋಡದ ಮಗುವನ್ನು ಕಂಡು ಇಡೀ ಗ್ರಾಮವೇ ಕಣ್ಣೀರು ಸುರಿಸಿತು. ಈ ಘಟನೆಯಿಂದ ಸತಾರಾ ಜಿಲ್ಲೆಯಾದ್ಯಂತ ಶೋಕ ಮಡುಗಟ್ಟಿದೆ.



