ಸಾಫ್ಟವೇರ್ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಮಿಲಿಂಡಾ ವಿಚ್ಛೇಧನ ಘೋಷಿಸಿದ ಮೂರು ತಿಂಗಳ ಬಳಿಕ ಅಧಿಕೃತವಾಗಿ ವಿಚ್ಚೇಧನ ಪಡೆದುಕೊಂಡಿದ್ದು, 27 ವರ್ಷಗಳ ವಿವಾಹವನ್ನು ಅಧಿಕೃತವಾಗಿ ಅಂತ್ಯಗೊಳಿಸಿದ್ದಾರೆ.

ಬಿಲ್ ಗೇಟ್ಸ್ ಮತ್ತು ಮಿಲಿಂಡಾ ದಂಪತಿಯ ಪ್ರೆಂಚ್ ಗೇಟ್ಸ್ ದಂಪತಿಯ ವಿಚ್ಛೇದನವನ್ನು ವಾಷಿಂಗ್ಟನ್ ನ ಕಿಂಗ್ ಕೌಂಟಿಯ ನ್ಯಾಯಾಧೀಶರು ಅಧಿಕೃತವಾಗಿ ಪ್ರಕಟಿಸಿದ್ದು, ಆದರೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ನ್ಯಾಯಾಲಯ ಒಪ್ಪಿಲ್ಲ.

ಕೋರ್ಟ್ ಮಾಹಿತಿ ಪ್ರಕಾರ ಬಿಲ್ ಗೇಟ್ಸ್ ಹಾಗೂ ಮಿಲಿಂಡಾ ದಂಪತಿ ಪರಸ್ಪರ ಆರ್ಥಿಕ ನೆರವು ಪಡೆಯುವುದಿಲ್ಲ ಮತ್ತು ಹೆಸರನ್ನು ಬದಲಿಸಿಕೊಳ್ಳುವುದಿಲ್ಲ ಎನ್ನಲಾಗಿದೆ. ವಿಚ್ಛೇದನದ ನಿಯಮದಂತೆ ಬಿಲ್ ಗೇಟ್ಸ್ ಮತ್ತು ಮಿಲಿಂಡಾ ತಮ್ಮ ಆಸ್ತಿಯನ್ನು ವಿಭಜಿಸಿಕೊಳ್ಳಲಿದ್ದು, ಈ ವಿವರಗಳನ್ನು ಗೌಪ್ಯವಾಗಿ ಕಾಪಾಡಲಾಗುತ್ತದೆ.

ಕಳೆದ ಮೇನಲ್ಲಿ ಈ ದಂಪತಿ ವಿಚ್ಛೇದನ ಘೋಷಿಸಿದ್ದು, ಆ ಬಳಿಕ ವಾಷಿಂಗ್ಟನ ಕೌಟುಂಬಿಕ ನ್ಯಾಯಾಲಯದ ನಿಯಮಗಳ ಪ್ರಕಾರ 90 ದಿನಗಳ ಕಾಯುವಿಕೆಯನ್ನು ನೀಡಲಾಗುತ್ತದೆ. ಆದರೆ ವೇಟಿಂಗ್ ಪಿರಿಯಡ್ ಅಂತ್ಯವಾದ ಬಳಿಕ ನ್ಯಾಯಾಲಯ ವಿಚ್ಛೇದನವನ್ನು ಅಧಿಕೃತಗೊಳಿಸಿದೆ.

ಬಿಲ್ ಗೇಟ್ಸ್ ಮತ್ತು ಮಿಲಿಂಡಾ ದಂಪತಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದು, ವಿಚ್ಛೇದನದ ಬಳಿಕವೂ ಟ್ರಸ್ಟ್ ನ ಎಲ್ಲ ಸಾಮಾಜಿಕ ಕಾರ್ಯಗಳನ್ನು ಒಟ್ಟಾಗಿ ಮುಂದುವರೆಸಿಕೊಂಡು ಹೋಗುವುದಾಗಿ ಪ್ರಕಟಿಸಿದೆ. ಅಲ್ಲದೇ ಸಂಸ್ಥೆಗೆ ಜಂಟಿಯಾಗಿ ಹಣಕಾಸಿನ ನೆರವನ್ನು ನೀಡುವುದಾಗಿಯೂ ದಂಪತಿ ಘೋಷಿಸಿದ್ದರು.