Bangladesh BJP: ಬಾಂಗ್ಲಾದೇಶ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಗೆದ್ದ ಬಿಜೆಪಿ!

Bangladesh Elections | BJP: ಬಾಂಗ್ಲಾದೇಶದ 13ನೇ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನವನ್ನು ಗೆಲ್ಲುವ ಮೂಲಕ ಗಮನ ಸೆಳೆದಿದೆ. ಈ ಪಕ್ಷದ ಹೆಸರಿನ ಸಂಕ್ಷಿಪ್ತ ರೂಪ ‘ಬಿಜೆಪಿ’ ಎಂದಿದ್ದರೂ, ಇದಕ್ಕೂ ಭಾರತದ ಭಾರತೀಯ ಜನತಾ ಪಾರ್ಟಿಗೂ ಯಾವುದೇ ಸಂಬಂಧವಿಲ್ಲ. ಈ ಬಿಜೆಪಿಯ ಪೂರ್ಣ ರೂಪ ಬಾಂಗ್ಲಾದೇಶ ಜಾತಿಯ ಪಾರ್ಟಿ (BJP).

ಅಂದಲೀಬ್ ರಹಮಾನ್ ಪಾರ್ಥೋ ಗೆಲುವು
ಬಿಜೆಪಿ (ಬಾಂಗ್ಲಾದೇಶ ಜಾತಿಯ ಪಾರ್ಟಿ) ಅಭ್ಯರ್ಥಿ ಮತ್ತು ಆ ಪಕ್ಷದ ಅಧ್ಯಕ್ಷರಾದ ಅಂದಲೀಬ್ ರಹಮಾನ್ ಪಾರ್ಥೋ ಅವರು ‘ಭೋಲಾ-1’ ಕ್ಷೇತ್ರದಿಂದ ಭರ್ಜರಿ ಜಯ ಸಾಧಿಸಿದ್ದಾರೆ. ಇವರು 1,05,543 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ಜಮಾತ್-ಎ-ಇಸ್ಲಾಮಿಯ ಎಂಡಿ ನಜ್ರುಲ್ ಇಸ್ಲಾಂ ಅವರನ್ನು ಸೋಲಿಸಿದ್ದಾರೆ.

ಬಿಎನ್‌ಪಿ ಮೈತ್ರಿಕೂಟದ ಭಾಗ
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ತಾರಿಕ್ ರಹಮಾನ್ ನೇತೃತ್ವದ ಬಿಎನ್‌ಪಿ ಮೈತ್ರಿಕೂಟದ ಜೊತೆಗೂಡಿ ಸ್ಪರ್ಧಿಸಿತ್ತು. ಮೈತ್ರಿಕೂಟದ ಇತರ ಸಣ್ಣ ಪಕ್ಷಗಳಾದ ಗಣಸಂಹತಿ ಆಂದೋಲನ್ ಮತ್ತು ಗಣ ಅಧಿಕಾರ ಪರಿಷತ್ ಕೂಡ ತಲಾ ಒಂದು ಸ್ಥಾನವನ್ನು ಗೆದ್ದಿವೆ.

ಅಭಿವೃದ್ಧಿಯ ಭರವಸೆ
ತಮ್ಮ ಗೆಲುವಿನ ನಂತರ ಮಾತನಾಡಿದ ಪಾರ್ಥೋ, ಭೋಲಾ ನಗರವನ್ನು ಅತ್ಯಾಧುನಿಕ ಹಾಗೂ ಸುಂದರ ನಗರವನ್ನಾಗಿ ಮಾಡುವ ಭರವಸೆ ನೀಡಿದ್ದಾರೆ. ಭೋಲಾ-ಬರಿಶಾಲ್ ಸೇತುವೆ ನಿರ್ಮಾಣ, ವೈದ್ಯಕೀಯ ಕಾಲೇಜು ಸ್ಥಾಪನೆ ಮತ್ತು ಪ್ರತಿ ಮನೆಗೆ ಗ್ಯಾಸ್ ಸಂಪರ್ಕ ಕಲ್ಪಿಸುವುದು ತಮ್ಮ ಮೊದಲ ಆದ್ಯತೆ ಎಂದು ಅವರು ಘೋಷಿಸಿದ್ದಾರೆ.

17 ವರ್ಷಗಳ ಗಡಿಪಾರು ಅಂತ್ಯ: ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ತಾರಿಕ್ ರಹಮಾನ್ ಆಯ್ಕೆ

ಯಾರು ಈ ಪಾರ್ಥೋ?
ಅಂದಲೀಬ್ ರಹಮಾನ್ ಪಾರ್ಥೋ ಅವರು ವೃತ್ತಿಯಿಂದ ವಕೀಲರು ಮತ್ತು ಶಿಕ್ಷಣ ತಜ್ಞರಾಗಿದ್ದಾರೆ. ಇವರು ಢಾಕಾದ ಬ್ರಿಟಿಷ್ ಸ್ಕೂಲ್ ಆಫ್ ಲಾ ಸಂಸ್ಥೆಯ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. 2008ರಲ್ಲಿ ಮೊದಲ ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದ ಇವರು, ಈಗ ಮತ್ತೊಮ್ಮೆ ಸಂಸತ್ತಿಗೆ ಪ್ರವೇಶಿಸಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories