ಜನಸಾಮಾನ್ಯರಿಗೆ ಬಿಗ್ ಶಾಕ್ : ನಂದಿನಿ ತುಪ್ಪ, ಬೆಣ್ಣೆ ದರದಲ್ಲಿ ಭಾರೀ ಏರಿಕೆ
ಕೆಲವು ದಿನಗಳ ಹಿಂದೆಯಷ್ಟೇ ಕೆಎಂಎಫ್ ನಂದಿನಿ ಬೆಣ್ಣೆ ಸೇರಿದಂತೆ ಹಲವು ಉತ್ಪನ್ನಗಳ ದರ ಇಳಿಕೆ ಮಾಡುವ ಮೂಲಕ ಜನಸಾಮಾನ್ಯರಿಗೆ ರಿಲೀಫ್ ನೀಡಿತ್ತು.
ರಾಜ್ಯದ ಜನತೆಗೆ ಇತ್ತೀಚಿನ ದಿನಗಳಲ್ಲಿ ಒಂದಿಲ್ಲೊಂದು ಉತ್ಪನ್ನಗಳ ದರ ಏರಿಕೆಯಾಗುವ ಮೂಲಕ ಶಾಕ್ ಮೇಲೆ ಶಾಕ್ಎದುರಾಗುತ್ತಲೇ ಇದೆ. ಕೆಲವು ದಿನಗಳ ಹಿಂದೆಯಷ್ಟೇ ಕೆಎಂಎಫ್ ನಂದಿನಿ ಬೆಣ್ಣೆ ಸೇರಿದಂತೆ ಹಲವು ಉತ್ಪನ್ನಗಳ ದರ ಇಳಿಕೆ ಮಾಡುವ ಮೂಲಕ ಜನಸಾಮಾನ್ಯರಿಗೆ ರಿಲೀಫ್ ನೀಡಿತ್ತು.
ಆದರೆ ಈ ಖುಷಿ ಹೆಚ್ಚು ದಿನ ಬಾಳಿಕೆ ಬರಲು ಬಿಡದ ಕರ್ನಾಟಕ ಹಾಲು ಮಹಾಮಂಡಳವು ಇದೀಗ ತುಪ್ಪ ಹಾಗೂ ಬೆಣ್ಣೆ ದರದಲ್ಲಿ ದಿಡೀರ್ ಏರಿಕೆ ಮಾಡಿದೆ. ಪರಿಷ್ಕೃತ ದರದ ಅನ್ವಯ ಒಂದು ಕೆಜಿ ತುಪ್ಪದ ಬೆಲೆಯಲ್ಲಿ 15 ರೂಪಾಯಿ ಏರಿಕೆಯಾಗಿದ್ದರೆ ಇತ್ತ ಒಂದು ಕೆಜಿ ಬೆಣ್ಣೆ ದರ ಬರೋಬ್ಬರಿ 22 ರೂಪಾಯಿ ಏರಿಕೆ ಕಂಡಿದೆ.
ಈ ಮೊದಲು 1 ಕೆಜಿ ತುಪ್ಪದ ದರ 700 ರೂಪಾಯಿ ಆಗಿದ್ದು, ಪರಿಷ್ಕೃತ ದರದ ಅನ್ವಯ 1 ಕೆಜಿ ತುಪ್ಪದ 715 ರೂಪಾಯಿಗಳಿಗೆ ಮಾರಾಟವಾಗಲಿದೆ. ಅಂತೆಯೇ 1 ಕೆಜಿ ಬೆಣ್ಣೆ ದರ 600 ರೂಪಾಯಿಯಿಂದ 622 ರೂಪಾಯಿಗಳಿಗೆ ಏರಿಕೆ ಕಂಡಿದೆ. ಈ ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ. ಈ ರೀತಿ ಬೆಣ್ಣೆ ಹಾಗೂ ತುಪ್ಪದ ದರದಲ್ಲಿ ಕಂಡು ಬಂದಿರುವ ಭಾರೀ ಏರಿಕೆಯು ಶ್ರೀ ಸಾಮಾನ್ಯರ ಜೊತೆಯಲ್ಲಿ ಹೋಟೆಲ್ ಹಾಗೂ ತಿಂಡಿ ಉದ್ಯಮಗಳ ಮೇಲೂ ಪರಿಣಾಮ ಬೀರಲಿದೆ.
ಈ ಮೊದಲು ಜಿಎಸ್ಟಿ ಕಡಿತದಿಂದಾಗಿ ನಂದಿನಿ ತುಪ್ಪ ಸೇರಿದಂತೆ ಇನ್ನಿತರ ಉತ್ಪನ್ನಗಳ ಬೆಲೆ ಇಳಿಕೆ ಮಾಡಲಾಗಿತ್ತು. ಇದಾದ ಬಳಿಕ ನವೆಂಬರ್ ತಿಂಗಳಲ್ಲಿ ತುಪ್ಪದ ದರ ಶೇಕಡಾ 15ರಷ್ಟು ಏರಿಕೆ ಕಂಡಿದ್ದರೆ, ಬೆಣ್ಣೆ ದರದಲ್ಲಿ ಶೇಕಡಾ 6ರಷ್ಟು ಏರಿಕೆ ಉಂಟಾಗಿತ್ತು. ಇದೀಗ ಗಾಯದ ಮೇಲೆ ಬರೆ ಎಂಬಂತೆ ಮತ್ತೊಮ್ಮೆ ನಂದಿನಿ ಬೆಣ್ಣೆ ಹಾಗೂ ತುಪ್ಪದ ದರದಲ್ಲಿ ಏರಿಕೆ ಉಂಟಾಗಿದ್ದು, ಜನಸಾಮಾನ್ಯರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

