ದೊಡ್ಡಾಲಹಳ್ಳಿಯಿಂದ ಸಿಎಂ ಗಾದಿಯವರೆಗೆ ‘ಟ್ರಬಲ್ ಶೂಟರ್’ : ಡಿಕೆ ಶಿವಕುಮಾರ್ ರಾಜಕೀಯ ಜರ್ನಿಯ ಕಂಪ್ಲೀಟ್ ಡಿಟೇಲ್ಸ್
1985ರ ಆ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಡಿಕೆ ಶಿವಕುಮಾರ್ ಪರಾಭವಗೊಂಡರೂ, ಕ್ಷೇತ್ರದಲ್ಲಿ ಭರ್ಜರಿ ಪೈಪೋಟಿ ನೀಡಿ ಕಾಂಗ್ರೆಸ್ ಹೈಕಮಾಂಡ್ ಗಮನ ಸೆಳೆದರು.

DK Shivakumar Biography: ಕನಕಪುರದ ಬಂಡೆ ಎಂದೇ ಖ್ಯಾತರಾಗಿರುವ ಡಿಕೆ ಶಿವಕುಮಾರ್ ಅವರ ಹೆಸರು ಸದ್ಯ ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೆ ಕೇಳಿ ಬರ್ತಿದೆ. ಆದರೆ ಡಿಕೆ ರಾಜಕೀಯವಾಗಿ ಬೆಳೆದು ಬಂದ ಜರ್ನಿ ರೋಚಕ. ಡಿಕೆ ಶಿವಕುಮಾರ್ ಅವರ ಬಾಲ್ಯ, ಕಾಂಗ್ರೆಸ್ ಪಕ್ಷಕ್ಕಾಗಿ ಅವರ ಶ್ರಮ, ಎಚ್‌ಡಿ ದೇವೇಗೌಡರ ವಿರುದ್ಧದ ಐತಿಹಾಸಿಕ ಗೆಲುವು ಮತ್ತು ಇಂದಿನ ಸಿಎಂ ಹುದ್ದೆಯ ಪೈಪೋಟಿಯ ವರೆಗಿನ ಕುರಿತಾದ ಒಂದು ಎಕ್ಸ್‌ಕ್ಲೂಸಿವ್ ವರದಿ ಇಲ್ಲಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಎಂಬ ಗ್ರಾಮದಲ್ಲಿ 1962ರ ಮೇ 15 ರಂದು ಜನಿಸಿದ ಡಿಕೆ ಶಿವಕುಮಾರ್ ಬಾಲ್ಯದಿಂದಲೇ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ಕೃಷಿ ಕುಟುಂಬದ ಕೆಂಪೇಗೌಡ ಮತ್ತು ಗೌರಮ್ಮ ದಂಪತಿಯ ಹಿರಿಯ ಮಗನಾದ ಡಿಕೆ ಶಿವಕುಮಾರ್ ಅವರ ಹೆಸರು ಇಂದು ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೆ ಕೇಳಿಬರ್ತಿದೆ.
ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ಶಾಲಾ-ಕಾಲೇಜು ಶಿಕ್ಷಣ ಮುಗಿಸಿದ ಡಿಜೆಎಸ್ (ಡೊನಾಲ್ಡ್ ಜಾನ್ ಸೌತ್) ಕಾಲೇಜಿನಿಂದ ಪದವಿ ಪಡೆದರು. ಬಳಿಕ ಮುಕ್ತ ವಿಶ್ವವಿದ್ಯಾಲಯದಿಂದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ (MA) ಪದವಿ ಪಡೆದರು. ಕಾಲೇಜು ದಿನಗಳಲ್ಲೇ ಎನ್‌ಎಸ್‌ಯುಐ ( NSUI) ವಿದ್ಯಾರ್ಥಿ ಸಂಘಟನೆ ಮೂಲಕ ರಾಜಕೀಯ ಆಸಕ್ತಿ ಬೆಳೆಸಿಕೊಂಡ ಶಿವಕುಮಾರ್, ಅತ್ಯಂತ ಕಿರಿಯ ವಯಸ್ಸಿನಲ್ಲೇ ಯೂತ್ ಕಾಂಗ್ರೆಸ್‌ನಲ್ಲಿ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ.
Also Read : ಡಿಕೆ ಶಿವಕುಮಾರ್ ಪ್ರಮಾಣವಚನಕ್ಕೆ ಶುಭ ದಿನಾಂಕ ಸೂಚಿಸಿದ ದ್ವಾರಕನಾಥ್ ಗುರೂಜಿ
ರಾಜಕೀಯ ಪ್ರವೇಶ: ದೇವೇಗೌಡರ ವಿರುದ್ಧವೇ ಸೆಣಸಾಟ
ಡಿಕೆ ಶಿವಕುಮಾರ್ ಅವರಿಗೆ ರಾಜಕೀಯದಲ್ಲಿ ಮೊದಲ ಬ್ರೇಕ್ ಸಿಕ್ಕಿದ್ದು 1985ರಲ್ಲಿ. ಅಂದು ಕೇವಲ 23 ವರ್ಷದ ಯುವಕನಾಗಿದ್ದ ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್, ಜನತಾದಳದ ಹಿರಿಯ ಹುಲಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧವೇ ಸಾತನೂರು ಕ್ಷೇತ್ರದಿಂದ ಟಿಕೆಟ್ ನೀಡಿ ಅಖಾಡಕ್ಕಿಳಿಸಿತ್ತು.
ಮೊದಲ ಸೋಲು ಮತ್ತು ಗೆಲುವಿನ ಹಾದಿ: 1985ರ ಆ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಶಿವಕುಮಾರ್ ಪರಾಭವಗೊಂಡರೂ, ಕ್ಷೇತ್ರದಲ್ಲಿ ಭರ್ಜರಿ ಪೈಪೋಟಿ ನೀಡಿ ಕಾಂಗ್ರೆಸ್ ಹೈಕಮಾಂಡ್ ಗಮನ ಸೆಳೆದರು.
1989ರ ಪ್ರಥಮ ಜಯ: ನಂತರ 1989ರಲ್ಲಿ ಸಾತನೂರು ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ (MLA) ವಿಧಾನಸಭೆ ಪ್ರವೇಶಿಸಿದರು. ಅಂದಿನಿಂದ ಇಂದಿನವರೆಗೆ ಅವರು ಸತತವಾಗಿ 8 ಬಾರಿ ಶಾಸಕರಾಗಿ ಆಯ್ಕೆಯಾಗಿ ಸೋಲಿಲ್ಲದ ಸರದಾರನಾಗಿ ಉಳಿದಿದ್ದಾರೆ.
ಕರ್ನಾಟಕದ ಅತ್ಯಂತ ಕಿರಿಯ ಸಚಿವ: ಬಂಗಾರಪ್ಪ ಅವರ ಸಂಪುಟದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲೇ ಬಂದೀಖಾನೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ತದನಂತರದಲ್ಲಿ ತಮ್ಮ ರಾಜಕೀಯ ಗುರು ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ಅತ್ಯಂತ ಪ್ರಭಾವಶಾಲಿ ನಗರಾಭಿವೃದ್ಧಿ ಸಚಿವರಾಗಿ ಬೆಂಗಳೂರಿನ ಮೂಲಸೌಕರ್ಯ ಬೆಳವಣಿಗೆಗೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ.
ದೇವೇಗೌಡರ ಕುಟುಂಬಕ್ಕೆ ಬಿಗ್ ಶಾಕ್ ನೀಡಿದ ‘ಕನಕಪುರ ಬಂಡೆ’
ಡಿಕೆ ಶಿವಕುಮಾರ್ ಅವರ ರಾಜಕೀಯ ಜೀವನದ ಅತ್ಯಂತ ಪ್ರಮುಖ ಘಟ್ಟ ಅಂದರೆ ಅದು 2004ರ ಲೋಕಸಭಾ ಚುನಾವಣೆ. ಅಂದು ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರ ಮಗ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್‌ನಿಂದ ತೇಜಸ್ವಿನಿ ಗೌಡ ಅವರನ್ನು ಕಣಕ್ಕಿಳಿಸಿ, ಇಡೀ ಚುನಾವಣಾ ತಂತ್ರಗಾರಿಕೆಯನ್ನು ಡಿಕೆಶಿ ಹೆಗಲಿಗೆ ವಹಿಸಿಕೊಳ್ಳಲಾಗಿತ್ತು. ಆ ಚುನಾವಣೆಯಲ್ಲಿ ಜೆಡಿಎಸ್ ಕೋಟೆಯನ್ನು ಭೇದಿಸಿ ಕುಮಾರಸ್ವಾಮಿ ಅವರನ್ನು ಸೋಲಿಸುವಲ್ಲಿ ಶಿವಕುಮಾರ್ ಯಶಸ್ವಿಯಾಗಿದ್ದರು. ಈ ಘಟನೆ ಅವರ ಕೈಯನ್ನು ರಾಜಕೀಯವಾಗಿ ಮತ್ತಷ್ಟು ಬಲಪಡಿಸಿತು.
ರಾಷ್ಟ್ರ ರಾಜಕಾರಣದ ‘ಟ್ರಬಲ್ ಶೂಟರ್’ ಡಿಕೆಶಿ
- ಕಾಂಗ್ರೆಸ್ ಪಕ್ಷಕ್ಕೆ ದೇಶದ ಯಾವುದೇ ಮೂಲೆಯಲ್ಲಿ ಸಂಕಷ್ಟ ಎದುರಾದರೂ ನೆನಪಾಗುವುದೇ ಡಿಕೆ ಶಿವಕುಮಾರ್.
- 2002ರಲ್ಲಿ ಮಹಾರಾಷ್ಟ್ರದ ವಿಲಾಸ್‌ರಾವ್ ದೇಶ್‌ಮುಖ್ ಸರ್ಕಾರ ಅಪಾಯದಲ್ಲಿದ್ದಾಗ ಶಾಸಕರನ್ನು ಬೆಂಗಳೂರಿನ ರೆಸಾರ್ಟ್‌ನಲ್ಲಿ ಸುರಕ್ಷಿತವಾಗಿಟ್ಟು ಸರ್ಕಾರ ಉಳಿಸಿದ್ದರು.
- 2017ರಲ್ಲಿ ಗುಜರಾತ್‌ನ ಅಹಮದ್ ಪಟೇಲ್ ಅವರ ರಾಜಸಭಾ ಚುನಾವಣೆಯ ವೇಳೆ ಆ ರಾಜ್ಯದ ಶಾಸಕರಿಗೆ ರಕ್ಷಣೆ ನೀಡಿ ಕಾಂಗ್ರೆಸ್ ಗೆಲುವಿಗೆ ಕಾರಣರಾದರು.
- ಇದೇ ಕಾರಣಕ್ಕೆ ಇವರ ಮೇಲೆ ಇಡಿ (ED), ಐಟಿ (IT) ದಾಳಿಗಳು ನಡೆದು ತನಿಖಾ ಸಂಸ್ಥೆಗಳಿಂದ ಜೈಲು ವಾಸ ಅನುಭವಿಸಬೇಕಾಗಿ ಬಂದರೂ, ಪಕ್ಷದ ಮೇಲಿನ ನಿಷ್ಠೆಯನ್ನು ಅವರು ಎಂದಿಗೂ ಬಿಡಲಿಲ್ಲ.
ಕೆಪಿಸಿಸಿ ಅಧ್ಯಕ್ಷ ಪಟ್ಟ, ಕರ್ನಾಟಕದ ಆಡಳಿತ
ಕಾಂಗ್ರೆಸ್ ರಾಜ್ಯದಲ್ಲಿ ಧೂಳೀಪಟವಾಗಿದ್ದ ಸಮಯದಲ್ಲಿ, ಅಂದರೆ 2020ರಲ್ಲಿ ಡಿಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ (KPCC) ಅಧ್ಯಕ್ಷ ಪಟ್ಟ ಒಲಿಯಿತು. ಕೋವಿಡ್ ಸಮಯದಲ್ಲಿ “ಆರೋಗ್ಯ ಹಸ್ತ” ಕಾರ್ಯಕ್ರಮದ ಮೂಲಕ ಜನಸಾಮಾನ್ಯರ ಬಳಿ ಹೋದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಜನಪ್ರಿಯತೆ ಮತ್ತು ಡಿಕೆ ಶಿವಕುಮಾರ್ ಅವರ ಅದ್ಭುತ ಸಾಂಘಿಕ ಶಕ್ತಿಯಿಂದಾಗಿ ಕಾಂಗ್ರೆಸ್ ಬರೋಬ್ಬರಿ 135 ಸ್ಥಾನಗಳನ್ನು ಗೆದ್ದು ಹೊಸ ಇತಿಹಾಸ ಸೃಷ್ಟಿಸಿತು. ಚುನಾವಣಾ ಯಶಸ್ಸಿನ ಬಳಿಕ ಸದ್ಯ ರಾಜ್ಯದ ಏಕೈಕ ಉಪಮುಖ್ಯಮಂತ್ರಿಯಾಗಿ (DyCM) ಹಾಗೂ ಪ್ರಮುಖ ಇಲಾಖೆಗಳ ಸಚಿವರಾಗಿ ಆಡಳಿತ ನಡೆಸುತ್ತಿದ್ದಾರೆ.
ಕರ್ನಾಟಕ ಸಿಎಂ ಆಗ್ತಾರಾ ಡಿಕೆ ಶಿವಕುಮಾರ್
2023ರಲ್ಲಿ ಸರ್ಕಾರ ರಚನೆಯಾಗುವಾಗಲೇ ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಹೈಕಮಾಂಡ್ ಸಂಧಾನದ ಸೂತ್ರದ ಅನ್ವಯ ಸದ್ಯ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಆದರೆ, ಕಾಂಗ್ರೆಸ್ ವಲಯದಲ್ಲಿ ಮತ್ತು ಡಿಕೆಶಿ ಅಭಿಮಾನಿಗಳಲ್ಲಿ “ಅಧಿಕಾರ ಹಂಚಿಕೆ” (Power SharingFormula) ಕುರಿತು ಸದಾ ಚರ್ಚೆಗಳು ನಡೆಯುತ್ತಲೇ ಇವೆ.
ಸದ್ಯ ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ಡಿಕೆ ಶಿವಕುಮಾರ್ ಅವರ ಹೆಸರು ಬಲವಾಗಿ ಕೇಳಿಬರ್ತಿದೆ. ಸಿದ್ದು ರಾಜಕೀಯ ಯುಗಾಂತ್ಯದ ಬೆನ್ನಲ್ಲೇ ಡಿಕೆ ಯುಗ ಕರ್ನಾಟಕಲ್ಲಿ ಆರಂಭವಾಗಿದೆ. ಡಿಕೆ ಸಿಎಂ ಆಗಿ ಉತ್ತಮ ಆಡಳಿತ ನೀಡಲಿ ಅನ್ನೋದು ಕರ್ನಾಟಕದ ಜನತೆಯ ಆಶಯ. ಉತ್ತಮ ಆಡಳಿತ ನೀಡಿದ್ರೆ ಮಾತ್ರವೇ ಮುಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪರ ಜನರು ನಿಲ್ಲೋದಕ್ಕೆ ಸಾಧ್ಯ.
ಆದರೆ ರಾಜ್ಯದಲ್ಲಿ ತಮ್ಮದೇ ಸರಕಾರ ಅಧಿಕಾರದಲ್ಲಿದೆ, ತಾವು ಆಡಿದ್ದೇ ಆಟ ಆಡುತ್ತಿರೋ ದಂಧೆ ಕೋರ ಕಾಂಗ್ರೆಸ್ ನಾಯಕರಿಗೆ ಡಿಕೆಶಿ ಕಡಿವಾಣ ಹಾಕಲೇ ಬೇಕಾಗಿದೆ. ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು, ಪೋಲಿಸ್ ಅಧಿಕಾರಿಗಳನ್ನು ತನ್ನ ಕೈಗೊಂಬೆಯನ್ನಾಗಿಸಿಕೊಳ್ಳುವವರಿಗೆ ತಕ್ಕ ಪಾಠ ಕಲಿಸದೇ ಇದ್ರೆ ಕಾಂಗ್ರೆಸ್‌ಗೆ ಕರ್ನಾಟಕದಲ್ಲಿ ಮುಂದೆ ಉಳಿಗಾಲವಿಲ್ಲ.
ಒಟ್ಟಾರೆಯಾಗಿ, ಹಳ್ಳಿಯ ಸಾಮಾನ್ಯ ಹಿನ್ನೆಲೆಯಿಂದ ಬಂದು ಇಡೀ ದೇಶದ ಕಾಂಗ್ರೆಸ್ ವಲಯವೇ ತನ್ನತ್ತ ತಿರುಗಿ ನೋಡುವಂತೆ ಮಾಡಿರುವ ಡಿಕೆ ಶಿವಕುಮಾರ್ ಕರ್ನಾಟಕದ ಮುಖ್ಯಮಂತ್ರಿ ಆಗುವತ್ತ ಹೆಜ್ಜೆ ಇಟ್ಟಿದ್ದಾರೆ. ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದ ಡಿಕೆ ಇಂದು ಕರ್ನಾಟಕದ ಮುಖ್ಯಮಂತ್ರಿ ಆಗ್ತಾ ಇರೋದು ರಾಮನಗರಕ್ಕೆ ಹೆಮ್ಮೆಯ ವಿಚಾರ.
DK shivakumar political journey childhood to dycm karnataka cm race history



