Karnataka CM Change: ವೈಲೆಂಟ್ ಆಗಿದ್ದ ಡಿಕೆಶಿ ಸಡನ್ ಸೈಲೆಂಟ್..! ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಅಂದಿದ್ಯಾಕೆ ಬಂಡೆ

Karnataka CM Change : ಬೆಂಗಳೂರು :ನವೆಂಬರ್ ಕ್ರಾಂತಿ ಮೊಳಗಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್ ಸಡನ್ ಆಗಿ ಸೈಲೆಂಟ್ ಆಗಿದ್ದಾರೆ. ಸಿಎಂ ಸ್ಥಾನ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದ ಡಿಕೆಶಿ ಇದೀಗ ಹೈಕಮಾಂಡ್ ನಿರ್ಧಾರಕ್ಕೆ ಬದ್ದ ಎಂದಿದ್ದಾರೆ. ಮಾತ್ರವಲ್ಲ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿಯೇ ಮುಂದುವರಿಯುತ್ತೇನೆ ಎಂಬ ಹೇಳಿಕೆ ಕೊಟ್ಟು, ಅಚ್ಚರಿ ಮೂಡಿಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಪೈಪೋಟಿ ಕಾಂಗ್ರೆಸ್ ಹೈಕಮಾಂಡ್ ತಲೆತಿರುಗುವಂತೆ ಮಾಡಿತ್ತು. ಬಣ ರಾಜಕೀಯ, ಜಾತಿ ಅಸ್ತ್ರ ಎಲ್ಲವನ್ನೂ ಪ್ರಯೋಗಿಸಿ ಡಿ.ಕೆ ಶಿವಕುಮಾರ್ ಸಿಎಂ ಸ್ಥಾನ ಪಡೆಯುವ ಎಲ್ಲಾ ತಯಾರಿಯಲ್ಲಿದ್ದರು.
ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಪದೇ ಪದೇ ಭೇಟಿ ನೀಡಿ ಸಿಎಂ ಸ್ಥಾನದ ಆಕಾಂಕ್ಷೆ ಮುಂದಿಡುತ್ತಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಇದೀಗ ತಮ್ಮ ಹೋರಾಟ ನಿಲ್ಲಿಸಿದ್ರಾ ಎಂಬ ಅನುಮಾನ ಶುರುವಾಗಿದೆ.
ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ, ಹೈಕಮಾಂಡ್ ಹೇಳಿದಂತೆಯೇ ನಾವೆಲ್ಲ ಕೇಳುತ್ತೇವೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನಮ್ಮ ಪಕ್ಷದ ಆಸ್ತಿಯಿದ್ದಂತೆ. ಅವರ ಮಾರ್ಗದರ್ಶನದಲ್ಲಿಯೇ ನಾವೆಲ್ಲ ಸಾಗುತ್ತಿದ್ದೇವೆ. ಅವರು ಏನೂ ಹೇಳಿದರೂ ಕೇಳಬೇಕು ಎಂದು ಹೇಳಿದ್ದಾರೆ. ನಾವು ಅದನ್ನೇ ಮಾಡುತ್ತಿದ್ದೇವೆ ಎಂದು ಹೇಳಿದರು.
ಇನ್ನು ಶಾಸಕರು ದೆಹಲಿಗೆ ಭೇಟಿ ನೀಡುತ್ತಿರುವ ವಿಚಾರವಾಗಿಯೂ ಮಾತನಾಡಿದ ಅವರು, ಮಂತ್ರಿ ಆಗಬೇಕು ಎನ್ನುವ ಆಸೆ ಎಲ್ಲಾ ಶಾಸಕರಿಗೆ ಇದೆ. ಹೀಗಾಗಿ ಹೈಕಮಾಂಡ್ ಭೇಟಿ ಮಾಡಿ ಸಚಿವ ಸ್ಥಾನ ಪ್ರಸ್ತಾಪಿಸುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ನವೆಂಬರ್ ತಿಂಗಳಲ್ಲಿ ದೊಡ್ಡ ಮಟ್ಟದ ಕ್ರಾಂತಿಯಾಗಲಿದೆ ಎಂಬ ಗುಮಾನಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಆದರೆ ಇದೀಗ ಡಿ.ಕೆ ಶಿವಕುಮಾರ್ ಬಿಳಿಬಾವುಟ ಹಾರಿಸಿರುವುದನ್ನು ನೋಡ್ತಿದ್ರೆ ಕ್ರಾಂತಿ ಶಾಂತಿಯಾಗಿ ಬದಲಾಯಿತಾ ಎಂಬ ಅನುಮಾನ ಮೂಡಿದೆ.
Karnataka CM Change DK Shivakumar Silent after meet Mallikarjun Kharge



