ಸ್ಯಾನಿಟರಿ ಪ್ಯಾಡ್ ಬಳಕೆಗೆ ಬ್ರೇಕ್ : ಸರ್ಕಾರದಿಂದ ವಿದ್ಯಾರ್ಥಿನಿಯರಿಗೆ ಸಿಗಲಿದೆ ಮುಟ್ಟಿನ ಕಪ್
ಶಾಲಾ ವಿದ್ಯಾರ್ಥಿನಿಯರ ಆರೋಗ್ಯ ಮತ್ತು ನೈರ್ಮಲ್ಯದ ವಿಚಾರದಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ 9ನೇ ತರಗತಿಯಿಂದ 12ನೇ ತರಗತಿಯವರೆಗೆ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಮುಟ್ಟಿನ ಕಪ್ ವಿತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಸ್ಯಾನಿಟರಿ ಪ್ಯಾಡ್ಗಳ ಬಳಕೆಗೆ ತಿಲಾಂಜಲಿ ಹಾಡಲು ರಾಜ್ಯ ಸರ್ಕಾರ ಮುಂದಾಗಿದೆ,
ಸ್ಯಾನಿಟರಿ ಪ್ಯಾಡ್ಗಳಿಂದ ಪರಿಸರಕ್ಕೆ ಹಾಗೂ ರಾಜ್ಯದ ಖಜಾನೆ ಎರಡಕ್ಕೂ ಹೊರೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಸ್ಯಾನಿಟರಿ ಪ್ಯಾಡ್ಗಳನ್ನು ಕೇವಲ 1 ಬಾರಿ ಮಾತ್ರ ಬಳಕೆ ಮಾಡಬಹುದಾದ ಹಿನ್ನೆಲೆಯಲ್ಲಿ ರಾಜ್ಯದ 1 ಮಿಲಿಯನ್ಗೂ ಅಧಿಕ ವಿದ್ಯಾರ್ಥಿನಿಯರಿಗೆ ಇದನ್ನು ಪೂರೈಸುವುದು ನಿಜಕ್ಕೂ ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆ ತಂದೊಡ್ಡಿತ್ತು. ಆದರೆ ಮುಟ್ಟಿನ ಕಪ್ಗಳನ್ನು 10 ವರ್ಷಗಳ ಕಾಲ ಮರುಬಳಕೆ ಮಾಡಬಹುದಾಗಿದೆ. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ವಾರ್ಷಿಕ 16 ಕೋಟಿ ರೂಪಾಯಿ ಉಳಿತಾಯವಾಗಲಿದೆ. ಜೊತೆಯಲ್ಲಿ ಪರಿಸರಕ್ಕೆ ಟನ್ಗಟ್ಟಲೇ ಪ್ಯಾಡ್ ಕಸ ಸೇರುವುದು ಕೂಡ ತಪ್ಪಲಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಸುರಕ್ಷತೆಗಾಗಿ ಶಿಕ್ಷಣ ಇಲಾಖೆಯಿಂದ ನಿಯಮ ಜಾರಿ : ಧ್ವಜಾರೋಹಣಕ್ಕೆ ವಿದ್ಯಾರ್ಥಿಗಳನ್ನು ಬಳಸುವಂತಿಲ್ಲ
ಆದರೆ ಮುಟ್ಟಿನ ಕಪ್ಗಳನ್ನು ಶರೀರದ ಒಳಭಾಗದಲ್ಲಿ ಧರಿಸಬೇಕಾದ ಕಾರಣ, ಇದಕ್ಕೆ ಸೂಕ್ತ ತರಬೇತಿಯ ಅಗತ್ಯವಿದೆ. ಅಲ್ಲದೇ ಪ್ರತಿ ತಿಂಗಳು ಇದನ್ನು ಬಳಕೆ ಮಾಡುವ ಮುನ್ನ ಸ್ವಚ್ಛತಾ ವಿಧಾನ ಹೇಗಿರಬೇಕು ಎಂಬುದರ ಬಗ್ಗೆ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಸರ್ಕಾರದ ಮುಂದಿದೆ. ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತಲ್ಲಿ ರಾಜ್ಯ ಸರ್ಕಾರಕ್ಕೆ ನಿಜಕ್ಕೂ ಇದು ಬಹುದೊಡ್ಡ ಪ್ರಮಾಣದಲ್ಲಿ ಲಾಭ ತಂದುಕೊಡಲಿದೆ.



