ಕುವೆಂಪು ವಿರಚಿತ ನಾಡಗೀತೆಯಲ್ಲಿ ಬದಲಾವಣೆ : ಜೈ ಭಾರತ ಜನನಿಯ ತನುಜಾತೆಯಲ್ಲಿ ಬೌದ್ಧ ಪದ ಮರುಸೇರ್ಪಡೆಗೆ ಸಲಹೆ

ರಾಷ್ಟ್ರಕವಿ ಕುವೆಂಪು ವಿರಚಿತ ಕರ್ನಾಟಕದ ಹೆಮ್ಮೆಯ ನಾಡಗೀತೆಯಾದ 'ಜಯ ಭಾರತ ಜನನಿಯ ತನುಜಾತೆ'ಯಲ್ಲಿ ಮಹತ್ವದ ಬದಲಾವಣೆ ತರಲು ರಾಜ್ಯ ಸರ್ಕಾರ ಗಂಭೀರ ಸಿದ್ಧತೆ ನಡೆಸಿದೆ.

ರಾಷ್ಟ್ರಕವಿ ಕುವೆಂಪು ವಿರಚಿತ ಕರ್ನಾಟಕದ ಹೆಮ್ಮೆಯ ನಾಡಗೀತೆಯಾದ ‘ಜಯ ಭಾರತ ಜನನಿಯ ತನುಜಾತೆ’ಯಲ್ಲಿ ಮಹತ್ವದ ಬದಲಾವಣೆ ತರಲು ರಾಜ್ಯ ಸರ್ಕಾರ ಗಂಭೀರ ಸಿದ್ಧತೆ ನಡೆಸಿದೆ. ಇತ್ತೀಚೆಗಷ್ಟೇ ಶತಮಾನೋತ್ಸವ ಸಂಭ್ರಮ ಆಚರಿಸಿಕೊಂಡ ಈ ಐತಿಹಾಸಿಕ ಗೀತೆಯಲ್ಲಿ, ಮೂಲ ಕೃತಿಯಲ್ಲಿದ್ದ ‘ಬೌದ್ಧ’ ಧರ್ಮದ ಹೆಸರನ್ನು ಮರಳಿ ಸೇರ್ಪಡೆಗೊಳಿಸಲು ಉನ್ನತ ಮಟ್ಟದ ತಜ್ಞರ ಸಮಿತಿ ಶಿಫಾರಸು ಮಾಡಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ನೇತೃತ್ವದ ಸಮಿತಿಯು ಈ ಮಹತ್ತರ ಸಲಹೆಯನ್ನು ನೀಡಿದೆ. ಕುವೆಂಪು ಅವರು ಬರೆದಿದ್ದ ಮೂಲ ಸಾಹಿತ್ಯದಲ್ಲಿ ಬೌದ್ಧ ಧರ್ಮದ ಉಲ್ಲೇಖವಿತ್ತು. ಆದರೆ ಕಾಲಕ್ರಮೇಣ ಗಾಯನದ ಅನುಕೂಲಕ್ಕಾಗಿ ಅಥವಾ ಇತರ ಕಾರಣಗಳಿಂದಾಗಿ ‘ಬೌದ್ಧ’ ಎಂಬ ಪದವು ಕೈಬಿಟ್ಟು ಹೋಗಿತ್ತು. ಸದ್ಯದ ಸಾಂಸ್ಕೃತಿಕ ಮಹತ್ವ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಪರಿಗಣಿಸಿ, ಪ್ರಸ್ತುತ ಚಾಲ್ತಿಯಲ್ಲಿರುವ ‘ಜೈನರುದ್ಯಾನ’ ಎಂಬ ಪದದ ಬದಲಿಗೆ ಇನ್ಮುಂದೆ ‘ಜೈನಬೌದ್ಧರುದ್ಯಾನ’ ಎಂದು ಪರಿಷ್ಕರಿಸಲು ನಿರ್ಧರಿಸಲಾಗಿದೆ.

ಈ ಹೊಸ ಪದವನ್ನು ನಾಡಗೀತೆಯ ಗಾಯನದಲ್ಲಿ ಅಳವಡಿಸಲು ದಿವಂಗತ ಮೈಸೂರು ಅನಂತಸ್ವಾಮಿ ಅವರು ಸಂಯೋಜಿಸಿರುವ ಪ್ರಸಿದ್ಧ ರಾಗದಲ್ಲೇ ಮರು ಸಂಯೋಜನೆ ಮಾಡಲಾಗುತ್ತದೆ. ಇದಕ್ಕಾಗಿ ಪ್ರೊ. ಹಂಪ ನಾಗರಾಜಯ್ಯ, ಪ್ರೊ. ಬರಗೂರು ರಾಮಚಂದ್ರಪ್ಪ ಹಾಗೂ ಡಾ. ಚಿದಾನಂದ ಗೌಡ ಸೇರಿದಂತೆ ನಾಡಿನ ಖ್ಯಾತ ಸಾಹಿತಿ ಮತ್ತು ಚಿಂತಕರನ್ನೊಳಗೊಂಡ ವಿಶೇಷ ಸಮಿತಿಯನ್ನು ರಚಿಸಲಾಗಿದೆ.

1924ರಲ್ಲಿ ಕುವೆಂಪು ಅವರು ತಮ್ಮ 20ನೇ ವಯಸ್ಸಿನಲ್ಲಿ ‘ಕಿಶೋರಚಂದ್ರವಾಣಿ’ ಎಂಬ ಕಾವ್ಯನಾಮದಲ್ಲಿ ಈ ಗೀತೆಯನ್ನು ರಚಿಸಿದ್ದರು. ಇದು ಅವರ ‘ಕೊಳಲು’ ಕವನ ಸಂಕಲನದಲ್ಲಿ ಮೊದಲು ಪ್ರಕಟವಾಗಿತ್ತು. ಕುವೆಂಪು ಅವರ ಮೂಲ ಆಶಯದಂತೆ ಸರ್ವಧರ್ಮ ಸಮನ್ವಯದ ಸಂದೇಶವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಈ ಹೆಜ್ಜೆ ಸಾಂಸ್ಕೃತಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Proposed change to the state anthem penned by Kuvempu Suggestion to re-include the word Bouddha in Jaya Bharata Jananiya Tanujate

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »