School Holiday : ಭಾನುವಾರವೂ ಮಕ್ಕಳಿಗೆ ಶಾಲೆ : ಪೋಷಕರಿಂದ ಬಾರೀ ಆಕ್ರೋಶ

ಉಡುಪಿ/ಮಂಗಳೂರು :School Holiday : ಕರಾವಳಿಯ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಹಾಗೂ ಭಾನುವಾರ ಶಾಲಾ ತರಗತಿಗಳನ್ನು ನಡೆಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಆದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಕ್ರಮಕ್ಕೆ ಪೋಷಕರ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಈ ಬಾರಿ ಧಾರಾಕಾರ ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳಿಗೆ ಹತ್ತಕ್ಕೂ ಅಧಿಕ ದಿನಗಳ ಕಾಲ ರಜೆ ನೀಡಲಾಗಿತ್ತು. ಹೀಗಾಗಿ ಶೈಕ್ಷಣಿಕ ಅವಧಿಯನ್ನು ಸರಿದೂಗಿಸುವ ಸಲುವಾಗಿ ಶನಿವಾರ ಇಡೀ ದಿನ ಶಾಲಾ ತರಗತಿ ನಡೆಸಲು ಈಗಾಗಲೇ ಎರಡೂ ಜಿಲ್ಲೆಗಳ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದಲೂ ನಿರಂತರವಾಗಿ ಶನಿವಾರದ ತರಗತಿಗಳು ನಡೆಯುತ್ತಿವೆ. ಈ ನಡುವಲ್ಲೇ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಡೆಸಿದೆ.

ದಸರಾ ರಜಾ ಅವಧಿಯಲ್ಲಿಯೇ ಸರ್ವೆ ಕಾರ್ಯ ನಡೆಸಿದ್ದು, ದಸರಾ ರಜೆಯನ್ನು ವಿಸ್ತರಣೆ ಮಾಡಲಾಗಿತ್ತು. ಈ ರಜೆಯನ್ನು ಹೊಂದಾಣಿಕೆ ಮಾಡುವ ಸಲುವಾಗಿಯೇ ಭಾನುವಾರವೂ ತರಗತಿ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ.

Also Read: ಧರ್ಮಸ್ಥಳ ಬುರುಡೆ ಕೇಸ್​ : ಮೂಲ ಪ್ರಕರಣ, ಎಸ್​ಐಟಿ ವಿಚಾರಣೆ ರದ್ದತಿಗೆ ಕೋರ್ಟ್​ ಮೆಟ್ಟಿಲೇರಿದ ಬುರುಡೆ ಗ್ಯಾಂಗ್​

ಭಾನುವಾರ ತರಗತಿ ಮಕ್ಕಳಿಗೆ ಒತ್ತಡ

ವಾರದ ಎಲ್ಲಾ ದಿನಗಳಲ್ಲಿಯೂ ತರಗತಿಯನ್ನು ನಡೆಸುವುದರಿಂದ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಒಂದು ದಿನವೂ ಬಿಡುವು ಇಲ್ಲದೇ ತರಗತಿ ನಡೆಸಿದ್ರೆ ಮಕ್ಕಳು ಶಿಕ್ಷಣದ ಮೇಲೆ ಬೇಸತ್ತು ಹೋಗುವ ಸಾಧ್ಯತೆಯಿದೆ.

ಆರೋಗ್ಯದ ದೃಷ್ಟಿಯಿಂದ ಮಕ್ಕಳಿಗೆ ಒಂದು ದಿನವಾದ್ರೂ ರಜೆ ಬೇಕು ಅನ್ನೋ ಕಾರಣಕ್ಕೆ ಶನಿವಾರ ಮಧ್ಯಾಹ್ನ ಹಾಗೂ ಭಾನುವಾರ ಕಡ್ಡಾಯವಾಗಿ ಶಾಲೆಗಳಿಗೆ ರಜೆ ನೀಡಲಾಗುತ್ತಿತ್ತು. ಆದರೆ ಸರಕಾರ ಹಾಗೂ ಅಧಿಕಾರಿಗಳ ಎಡವಟ್ಟಿನಿಂದಾಗಿ ಮಕ್ಕಳು, ಶಿಕ್ಷಕರು ಹೈರಾಣಾಗುವ ಸ್ಥಿತಿ ಬಂದೊದಗಿದೆ.

ಭಾನುವಾರ ಶಾಲಾ ತರಗತಿಗಳನ್ನು ನಡೆಸುವುದು ಸೂಕ್ತವಲ್ಲ. ಮಕ್ಕಳು ವಿಶ್ರಾಂತಿ ಇಲ್ಲದೇ ಪಠ್ಯ ಚಟುವಟಿಕೆಯಲ್ಲಿ ತೊಡಗಿಕೊಂಡ್ರೆ ಪರೀಕ್ಷೆಯ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಅಂತ ವೈದ್ಯರು ಕೂಡ ಅಭಿಪ್ರಾಯ ಪಟ್ಟಿದ್ದಾರೆ.

ಸಮೀಕ್ಷೆ ನಡೆಸಿದ ಶಿಕ್ಷಕರಿಗೆ ಹೊರೆ

ಪಾಠಬೋಧಿಸುವ ಶಿಕ್ಷಕರನ್ನು ಪೂಜ್ಯ ಭಾವನೆಯಿಂದ ನೋಡಲಾಗುತ್ತಿದೆ. ಗೌರವದ ಭಾವನೆಯಿಂದಲೇ ಸಾಕಷ್ಟು ಮಂದಿ ಶಿಕ್ಷಕ ವೃತ್ತಿಯನ್ನೇ ಆರಿಸಿಕೊಳ್ತಾ ಇದ್ರು, ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಸರಕಾರ ಹಾಗೂ ಅಧಿಕಾರಿಗಳು ನಡೆಸಿಕೊಳ್ತಾ ಇದ್ದ ರೀತಿಗೆ ಶಿಕ್ಷಕರು ಬೇಸತ್ತು ಹೋಗಿದ್ದಾರೆ.

ದಸರಾ ರಜೆಯಲ್ಲಿ ಜಾತಿ ಸರ್ವೇ ಕಾರ್ಯವನ್ನು ಶಿಕ್ಷಕರಿಂದ ಮಾಡಿಸಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸರಕಾರ ಇದೀಗ ಶಿಕ್ಷಕರಿಗಿದ್ದ ಭಾನುವಾರದ ರಜೆಯನ್ನೂ ಕಿತ್ತು ಕೊಳ್ಳಲು ಮುಂದಾಗಿದೆ.

ಹಿಂದೆಲ್ಲಾ ಬೇಸಿಗೆ ರಜೆಯನ್ನು ಎಪ್ರೀಲ್‌ 1 ರಿಂದ ಮೇ ಅಂತ್ಯದ ವರೆಗೆ ನೀಡಲಾಗುತ್ತಿತ್ತು. ಇನ್ನು ದಸರಾ ರಜೆಯನ್ನು ಅಕ್ಟೋಬರ್‌ ಒಂದು ತಿಂಗಳ ಕಾಲ ನೀಡಲಾಗ್ತಿತ್ತು. ಆದರೆ ಕೊರೊನಾ ನಂತರದಲ್ಲಿ ದಸರಾ, ಬೇಸಿಗೆ ರಜೆಗೆ ಶಿಕ್ಷಣ ಇಲಾಖೆ ಕತ್ತರಿ ಪ್ರಯೋಗಿಸಿದೆ.

ಈ ಬಾರಿ ದಸರಾ ರಜೆಯನ್ನು ಒಂದು ತಿಂಗಳ ಕಾಲ ನೀಡಿಲ್ಲ. ಮಕ್ಕಳ ಹಕ್ಕುಗಳ ಪ್ರಕಾರ ದಸರಾ ರಜೆಯನ್ನು ಕಡ್ಡಾಯವಾಗಿ ಒಂದು ತಿಂಗಳ ಕಾಲ ನೀಡಬೇಕಾಗಿತ್ತು. ಮಕ್ಕಳು ತಮ್ಮ ಹಕ್ಕಿನ ರಜೆಯನ್ನು ಪಡೆದಿದ್ದರೂ ಕೂಡ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಿಕ್ಷಣದ ಒತ್ತಡ ಹೇರುವುದು ಯಾಕೆ ಅಂತಾ ಪೋಷಕರು ಪ್ರಶ್ನಿಸುತ್ತಿದ್ದಾರೆ.

ಎಸಿ ರೂಂನಲ್ಲಿ ಕುಳಿತಿರುವ ಅಧಿಕಾರಿಗಳು ದಿನಕ್ಕೊಂದು ಆದೇಶ ಹೊರಡಿಸುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಫಲಿತಾಂಶ ಬರಬೇಕು ಅನ್ನೋ ಕಾರಣಕ್ಕೆ ಪಾಸ್‌ ಅಂಕವನ್ನೇ ಶಿಕ್ಷಣ ಸಚಿವರು ಇಳಿಕೆ ಮಾಡಿದ್ದರು.

Also Read: ಅರಣ್ಯ ಇಲಾಖೆ ಉದ್ಯೋಗದ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

ಸಾಲದಕ್ಕೆ ಎರಡು ಬಾರಿ ಪರೀಕ್ಷೆ ಬರೆಯೋದಕ್ಕೂ ಅವಕಾಶವಿದೆ. ಇಷ್ಟೆಲ್ಲಾ ಇದ್ದ ಮೇಲೆ ನೀಡಿದ ರಜೆಯ ಅವಧಿಯನ್ನು ಸರಿ ಹೊಂದಿಸುತ್ತೇವೆ ಅಂತಾ ಭಾನುವಾರ ತರಗತಿ ನಡೆಸೋದು ಸರಿಯಾ?

ಇತರ ರಾಜ್ಯಗಳಲ್ಲಿ ಇರುವಂತೆಯೇ ಕರ್ನಾಟಕದ ಶಾಲಾ ಶಿಕ್ಷಕರಿಗೆ ಸೌಲಭ್ಯವನ್ನು ನೀಡಿ, ಮಕ್ಕಳಿಗೆ ಇತರ ರಾಜ್ಯದಲ್ಲಿ ಸಿಗುವಷ್ಟೇ ರಜೆಯನ್ನು ನೀಡುವ ಕೆಲಸವನ್ನು ಮಾಡಬೇಕಾಗಿದೆ. ದಿನಕ್ಕೊಂದು ಆದೇಶ ಹೊರಡಿಸಿ ಮಕ್ಕಳನ್ನು, ಶಿಕ್ಷಕರನ್ನು ಗೊಂದಲಕ್ಕೆ ಸಿಲುಕಿಸುವ ಮೊದ್ಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories