ರಾಜ್ಯದ ನ್ಯಾಯಾಂಗ ವ್ಯವಸ್ಥೆ ಟಾರ್ಗೆಟ್ ? : ಮಡಿಕೇರಿ, ದಾವಣಗೆರೆ, ಧಾರವಾಡ ಕೋರ್ಟ್ಗಳಿಗೆ ಬಾಂಬ್ ಬೆದರಿಕೆ
ಬೆಂಗಳೂರು : State judicial system target: ರಾಜ್ಯದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಕಾಣದ ಕೈಗಳು ಹುನ್ನಾರ ನಡೆಸುತ್ತಿದ್ದು ಬೇಕಂತಲೇ ಟಾರ್ಗೆಟ್ ಮಾಡಲಾಗುತ್ತಿದೆಯಾ ಎಂಬ ಅನುಮಾನ ಮೂಡಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ರಾಜ್ಯದ ಮಡಿಕೇರಿ, ದಾವಣಗೆರೆ ಹಾಗೂ ಧಾರವಾಡ ಕೋರ್ಟ್ಗಳಿಗೆ ಬಾಂಬ್ ಬೆದರಿಕೆಯ ಸಂದೇಶ ಬಂದಿರುವುದು ಆತಂಕ ಮೂಡಿಸಿದೆ.
ಮಡಿಕೇರಿಯ ನ್ಯಾಯಾಲಯ ಸಮುಚ್ಛಯದ ಇ – ಮೇಲ್ಗೆ ಅನಾಮಧೇಯ ಮೇಲ್ ವಿಳಾಸದಿಂದ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಲಾಗಿದೆ. ಕೂಡಲೇ ಅಲರ್ಟ್ ಆದ ಮಡಿಕೇರಿ ಪೊಲೀಸರು ಕೋರ್ಟ್ನಲ್ಲಿದ್ದ ವಕೀಲರು, ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಕೋರ್ಟ್ನಿಂದ ಹೊರಗೆ ಕಳುಹಿಸಿ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಸಿಬ್ಬಂದಿ ಜೊತೆ ಪರಿಶೀಲನೆ ನಡೆಸಿದ್ದಾರೆ.
Also read: ಕೆಎಸ್ಆರ್ಟಿಸಿಯಿಂದ ಬಿಗ್ಶಾಕ್ : ಲಗೇಜ್ ದರದಲ್ಲಿ ಏರಿಕೆ
ಇನ್ನು ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ ಜಡ್ಜ್ ಅವರ ಇ – ಮೇಲ್ ಐಡಿಗೆ ತಮಿಳುನಾಡು ಮೂಲದ ವ್ಯಕ್ತಿ ಇ – ಮೇಲ್ ಮಾಡಿದ್ದಾರೆ. ಈ ಸಂದೇಶದಲ್ಲಿ ಮಧ್ಯಾಹ್ನ 12:30ಕ್ಕೆ ಆರ್ಡಿಎಕ್ಸ್ ಬಾಂಬ್ ಕೋರ್ಟ್ನಲ್ಲಿ ಸ್ಪೋಟವಾಗಲಿದೆ ಎಂದು ಎಚ್ಚರಿಕೆ ನೀಡಲಾಗಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
ಅದೇ ರೀತಿ ರಾಜ್ಯ ಹೈಕೋರ್ಟ್ನ ಧಾರವಾಡ ಪೀಠಕ್ಕೆ ಕಳೆದ ತಿಂಗಳಷ್ಟೇ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಒಂದು ತಿಂಗಳ ಒಳಗಾಗಿ ಇದೀಗ ಮತ್ತೊಮ್ಮೆ ಹುಸಿ ಬಾಂಬ್ ಸಂದೇಶ ಕಳುಹಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕಾಗಮಿಸಿದ ಗದಗ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.



