ತಿಮರೋಡಿ ಗಡಿಪಾರು ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ

ಧರ್ಮಸ್ಥಳದ ತಲೆಬುರುಡೆ ಪ್ರಕರಣದ ನೆರಳಿನಲ್ಲಿ ವಿವಾದಾತ್ಮಕ ಹೇಳಿಕೆ ಹಾಗೂ ಸೌಜನ್ಯ ಪರ ಹೋರಾಟಗಳ ಮೂಲಕ ಮುಂಚೂಣಿಯಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನಲ್ಲಿ ಭಾರಿ ಮುಖಭಂಗವಾಗಿದೆ.

ಧರ್ಮಸ್ಥಳದ ತಲೆಬುರುಡೆ ಪ್ರಕರಣದ ನೆರಳಿನಲ್ಲಿ ವಿವಾದಾತ್ಮಕ ಹೇಳಿಕೆ ಹಾಗೂ ಸೌಜನ್ಯ ಪರ ಹೋರಾಟಗಳ ಮೂಲಕ ಮುಂಚೂಣಿಯಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನಲ್ಲಿ ಭಾರಿ ಮುಖಭಂಗವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿದ್ದ ಆಡಳಿತಾತ್ಮಕ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಸಾರ್ವಜನಿಕ ಶಾಂತಿ ಕದಡಿದ ಮತ್ತು ಕಾನೂನು ಸುವ್ಯವಸ್ಥೆಗೆ ಪದೇ ಪದೇ ಧಕ್ಕೆ ತಂದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ ಸ್ಟೆಲ್ಲಾ ವರ್ಗೀಸ್ ಅವರು ತಿಮರೋಡಿ ವಿರುದ್ಧ ಈ ಗಡಿಪಾರು ಆದೇಶ ಹೊರಡಿಸಿದ್ದರು. ಒಟ್ಟು 32 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಮಹೇಶ್ ಶೆಟ್ಟಿ, ಕರಾವಳಿ ಭಾಗದಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಕಂಟಕಪ್ರಾಯವಾಗಿದ್ದಾರೆ ಎಂಬ ಪೊಲೀಸ್ ವರದಿಯನ್ನಾಧರಿಸಿ ಈ ಕಠಿಣ ಕ್ರಮ ಕೈಗೊಳ್ಳಲಾಗಿತ್ತು.

ಈ ಆದೇಶವನ್ನು ಪ್ರಶ್ನಿಸಿ ತಿಮರೋಡಿ ಅವರು ಈ ಹಿಂದೆ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರಾದರೂ ಅಲ್ಲಿಯೂ ಅವರಿಗೆ ಯಾವುದೇ ಪರಿಹಾರ ಸಿಕ್ಕಿರಲಿಲ್ಲ. ಹೈಕೋರ್ಟ್ ತೀರ್ಪನ್ನು ಸವಾಲು ಮಾಡಿ ಸಲ್ಲಿಸಲಾಗಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಆಲಿಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, ಕೆಳ ನ್ಯಾಯಾಲಯಗಳ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ್ದಲ್ಲದೆ ಅರ್ಜಿಯನ್ನು ಸಂಪೂರ್ಣವಾಗಿ ವಜಾಗೊಳಿಸಿದೆ.

ನ್ಯಾಯಾಲಯದ ಈ ಅಂತಿಮ ತೀರ್ಪಿನಿಂದಾಗಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಮುಂದಿನ ಒಂದು ವರ್ಷದ ಅವಧಿಗೆ ತಮ್ಮ ತವರು ಜಿಲ್ಲೆಯಾದ ದಕ್ಷಿಣ ಕನ್ನಡವನ್ನು ಪ್ರವೇಶಿಸುವಂತಿಲ್ಲ. ಅವರು ತಕ್ಷಣವೇ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ತೆರಳಿ ಗಡಿಪಾರು ಶಿಕ್ಷೆಯನ್ನು ಅನುಭವಿಸುವುದು ಅನಿವಾರ್ಯವಾಗಿದೆ.

Supreme Court refuses to stay externment order against Timarodi

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »