ನಿಷೇಧಿತ ಪಿಎಫ್ಐ – ಎಸ್ಡಿಪಿಐ ಸಂಘಟನೆ ನಡುವೆ ನಂಟಿದೆ ಎಂದ ಕ್ಯಾ. ಬ್ರಿಜೇಶ್ ಚೌಟ ವಿರುದ್ಧ ಗುಡುಗಿದ ಎಸ್ಡಿಪಿಐ
ಲೋಕಸಭೆಯಲ್ಲಿ ಎಸ್ಡಿಪಿಐ ಹಾಗೂ ನಿಷೇಧಿತ ಪಿಎಫ್ಐ ಸಂಘಟನೆಗಳಿಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಬಂಧ ಕಲ್ಪಿಸಿರುವ ವಿಚಾರ ಇದೀಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ನಿಷೇಧಿತ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು ಇದೀಗ ಎಸ್ಡಿಪಿಐ ಸೋಗಿನಲ್ಲಿ ನಮ್ಮ ಚುನಾವಣಾ ವ್ಯವಸ್ಥೆಯ ಒಳಗೆ ಮರುಪ್ರವೇಶಕ್ಕೆ ಹುನ್ನಾರ ನಡೆಸಿದ್ದಾರೆ ಎಂಬ ಗಂಭೀರ ವಿಚಾರವನ್ನು ಲೋಕಸಭೆಯ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ್ದರು. ಈ ವಿಚಾರವಾಗಿ ಎಸ್ಡಿಪಿಐ ಇದೀಗ ಕೆಂಡಾಮಂಡಲವಾಗಿದೆ.
ಈ ವಿಚಾರವಾಗಿ ಮಾತನಾಡಿರುವ ದಕ್ಷಿಣ ಕನ್ನಡ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾಧತ್ , ಸಂಸದ ಬ್ರಿಜೇಶ್ ಚೌಟನನ್ನು ನನ್ನ ಜನತೆ ಅರಬ್ಬೀ ಸಮುದ್ರಕ್ಕೆ ಎಸೆಯುತ್ತಾರೆ ಎಂದು ಆವಾಜ್ ಹಾಕಿದ್ದಾರೆ . ನಿಷೇಧಿತ ಸಂಘಟನೆಯೊಂದಿಗೆ ಎಸ್ಡಿಪಿಐ ಹೆಸರನ್ನು ಥಳುಕು ಹಾಕುವ ಕೆಲಸವನ್ನು ಚೌಟ ಮಾಡಿದ್ದಾರೆ. 2009ರಿಂದ ಪ್ರಜಾಪ್ರಭುತ್ವದ ಆಶಯದ ಅಡಿಯಲ್ಲೇ ಎಸ್ಡಿಪಿಐ ಕಾರ್ಯ ನಿರ್ವಹಿಸಿದೆ. ಆದರೆ ಚೌಟ ತಾನು ಒಬ್ಬ ಸಂಸದ ಎಂಬ ಜ್ಞಾನವಿಲ್ಲದೇ ಮಾತನಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸಂಪೂರ್ಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮ್ಮದು ಮೂರನೇ ಅತೀ ದೊಡ್ಡ ರಾಜಕೀಯ ಪಕ್ಷ. ಬಿಜೆಪಿ ಕಾರ್ಯಕರ್ತರೇ ಬ್ರಿಜೇಶ್ ಚೌಟ ವಿರುದ್ಧ ಭ್ರಮ ನಿರಸನಗೊಂಡಿದ್ದಾರೆ. ತಾನಿನ್ನೂ ಜೀವಂತವಾಗಿದ್ದೇನೆ ಎಂದು ತೋರಿಸೋಕೆ ಈ ರೀತಿ ಹೇಳಿಕೆ ನೀಡಿದ್ದಾರೆ. ಎಸ್ಡಿಪಿಐಯನ್ನು ಸೈದ್ಧಾಂತಿಕವಾಗಿ ಎದುರಿಸಲು ಸಾಧ್ಯವಾಗದೇ ಈ ರೀತಿ ಮಾತನಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ನಾಯಕ ಮಿಥುನ್ ರೈ ಶಿಸ್ತು ಉಲ್ಲಂಘನೆ : ನೋಟಿಸ್ ಜಾರಿ ಮಾಡಿದ ಎಐಸಿಸಿ
ಅಲ್ಲದೇ ಚಿಕ್ಕಮಗಳೂರಿನಲ್ಲಿ ನಡೆದ ಕೊಲೆ ಪ್ರಕರಣಕ್ಕೂ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿಕೆಗೂ ಲಿಂಕ್ ಮಾಡಿದ ಅನ್ವರ್ ಸಾಧತ್, ಇವರಿಗೆ ಯಾರದಾದ್ದರೂ ರಕ್ತ ಬೇಕು. ಇವರು ಪಾರ್ಲಿಂಮೆಂಟಿನಲ್ಲಿ ಇಂತಹ ಹೇಳಿಕೆ ನೀಡುತ್ತಿದ್ದಂತೆಯೇ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಯಾಗಿದೆ. ಸ್ಥಳೀಯ ಚುನಾವಣೆ ಸಮೀಪಿಸುತ್ತಿದೆ. ಜನರ ಬಳಿ ಹೋಗಲು ಧೈರ್ಯ ಇಲ್ಲದೇ ಎಸ್ಡಿಪಿಐ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದಾರೆ. ಭಾವನಾತ್ಮಕ ಹೇಳಿಕೆ ನೀಡಿದ್ರೆ ಮಾತ್ರ ಚುನಾವಣೆಯಲ್ಲಿ ಮೈಲೇಜ್ ಸಿಗುತ್ತೆ ಎಂಬುದು ಇವರಿಗೂ ತಿಳಿದಿದೆ. ಅಭಿವೃದ್ಧಿ , ಸಮಸ್ಯೆಗಳ ಬಗ್ಗೆ ಇವರು ಪಾರ್ಲಿಮೆಂಟ್ನಲ್ಲಿ ಮಾತನಾಡಲ್ಲ ಬದಲಾಗಿ ಕಮ್ಯುನಲ್ ವಿಚಾರಗಳೇ ಇವರಿಗೆ ಬೇಕು ಎಂದು ಕಿಡಿಕಾರಿದ್ದಾರೆ.



