ಕಾರ್ಕಳ ಪರಶುರಾಮನ ಮೂರ್ತಿ ಹಿತ್ತಾಳೆ, ಫೈಬರ್ ಅಂದವರಿಗೆ ಹಿನ್ನೆಡೆ : ಪೊಲೀಸರಿಂದ ಚಾರ್ಜ್‌ಶೀಟ್ ಸಲ್ಲಿಕೆ

ಕಾರ್ಕಳ : ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ವಿವಾದ (Karkala Parashurama Theme Park controversy) ಮಹತ್ವದ ತಿರುವು ಪಡೆದುಕೊಂಡಿದೆ.
ಪರಶುರಾಮನ ಮೂರ್ತಿಯನ್ನು ಫೈಬರ್‌ನಿಂದ ನಿರ್ಮಿಸಿಲ್ಲ, ಬದಲಾಗಿ ಮೂರ್ತಿ ನಿರ್ಮಾಣಕ್ಕೆ ಬಳಸಿದ್ದು ಹಿತ್ತಾಳೆ ಅನ್ನೋದು ಪೊಲೀಸರ ತನಿಖೆಯಿಂದ ದೃಢಪಟ್ಟಿದೆ.
ಕಾಂಗ್ರೆಸ್ ಮುಖಂಡರಾದ ಕೃಷ್ಣ ಶೆಟ್ಟಿ ಅವರು ಉಡುಪಿ ಜಿಲ್ಲೆಯ ಕಾರ್ಕಳ ಉಮಿಕಲ್ ಬೆಟ್ಟದಲ್ಲಿರುವ ಪರಶುರಾಮನ ಮೂರ್ತಿಯನ್ನು ಫೈಬರ್‌ನಿಂದ ಮಾಡಲಾಗಿದೆ.
ಮೂರ್ತಿ ನಿರ್ಮಾಣದಲ್ಲಿ ಅಕ್ರಮ ಎಸಗಲಾಗಿದೆ ಎಂದು ಕಾರ್ಕಳ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು. ಕಾರ್ಕಳ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಅಲ್ಲದೇ ನ್ಯಾಯಾಲಯಕ್ಕೆ ದೋಷಾರೋಷಣ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದಾರೆ. ಪೊಲೀಸರ ಚಾರ್ಜ್‌ಶೀಟ್‌ನಲ್ಲಿ ಹಲವು ವಿಚಾರಗಳನ್ನು ಉಲ್ಲೇಖಿಸಿದ್ದಾರೆ.
ಪರಶುರಾಮ ಮೂರ್ತಿ ಫೈಬರ್ ಅಂದವರಿಗೆ ಮುಖಭಂಗ
ಕಾರ್ಕಳದಲ್ಲಿ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ನಿರ್ಮಾಣಗೊಂಡಿದ್ದ ಪರಶುರಾಮನ ಮೂರ್ತಿಯನ್ನು ಫೈಬರ್‌ನಿಂದ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರಾದ ಕೃಷ್ಣ ಶೆಟ್ಟಿ ಅವರು ದೂರ ನೀಡಿದ್ದರು.
ಕಾರ್ಕಳದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರು ಕೂಡ ಫೈಬರ್ ಮೂರ್ತಿ ಎಂದು ಆರೋಪಿಸಿದ್ದರು.
ಅಷ್ಟೇ ಅಲ್ಲಾ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಕೂಡ ಫೈಬರ್ ಮೂರ್ತಿ ಎನ್ನುವ ಹೇಳಿಕೆಯನ್ನು ನೀಡಿದ್ದರು.
ಆದ್ರೀಗ ಪೊಲೀಸರ ತನಿಖೆಯಲ್ಲಿ ಪರಶುರಾಮನ ಮೂರ್ತಿಯನ್ನು ಫೈಬರ್‌ನಿಂದ ನಿರ್ಮಾಣ ಮಾಡಿಲ್ಲ. ಹಿತ್ತಾಳೆಯನ್ನು ಬಳಸಿ ಮೂರ್ತಿಯನ್ನು ನಿರ್ಮಾಣ ಮಾಡಲಾಗಿದೆ ಅನ್ನೋದು ಬಯಲಾಗಿದೆ.
ಇದನ್ನೂ ಓದಿ: ಪರಶುರಾಮ ಮೂರ್ತಿ ವಿವಾದ : ಮುನಿಯಾಲು ಉದಯ್ ಕುಮಾರ್ ಶೆಟ್ಟಿ ವಿರುದ್ದ ದೂರು ಕೊಟ್ಟ ಶಿಲ್ಪಿ ಕೃಷ್ಣ ನಾಯ್ಕ್
ಕಾರ್ಕಳ ನಗರ ಠಾಣೆಯ ಪೊಲೀಸರು ಈ ಕುರಿತು ತನಿಖೆಯನ್ನು ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದಾರೆ.
ಪರಶುರಾಮನದ್ದು ಫೈಬರ್ ಮೂರ್ತಿ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್ ಮುಖಂಡರಿಗೆ ಇದೀಗ ಮುಖಭಂಗವಾಗಿದೆ.
Karkala Parashurama Theme Park controversy : ಚಾರ್ಜ್‌ಶೀಟ್‌ನಲ್ಲಿ ಏನಿದೆ ?
2024ರ ಜೂನ್ 21ರಂದು ಕೃಷ್ಣ ಶೆಟ್ಟಿ ಅವರು ದೂರು ನೀಡಿದ್ದು, ಅದರಲ್ಲಿ ಕೃಷ್ಣ ನಾಯಕ್ Krish Art World ಎಂಬ ಸಂಸ್ಥೆಯ ಮುಖಾಂತರ ಕಾರ್ಕಳ ತಾಲೂಕಿನ ಪರಶುರಾಮ್ ಥೀಮ್ ಪಾರ್ಕ ನಲ್ಲಿ ಕಂಚಿನ ಪರಶುರಾಮ್ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ ಹಣ ಪಡೆದುಕೊಂಡು ಕಾಮಗಾರಿ ನಡೆಸಿದ್ದಾರೆ.
ಕ್ರಿಶ್ ಆರ್ಟ್ ವರ್ಕ್ಸ್‌ನ ಮಾಲೀಕರಾದ, ಆರೋಪಿ ಕೃಷ್ಣ ನಾಯ್ಕ ಎಂಬವರು ಕಂಚಿನ ಮೂರ್ತಿಯನ್ನು ಮಾಡದೇ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ಸರಕಾರಕ್ಕೆ ವಂಚನೆ ಯನ್ನು ಮಾಡಿರುತ್ತಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕೃಷ್ಣ ಶೆಟ್ಟಿ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 120/2024 ಕಲಂ 420.409 ಐಪಿಸಿ ರಂತೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.
ಪ್ರಕರಣದ ತನಿಖಾ ಕಾಲದಲ್ಲಿ ಪರಶುರಾಮ ಮೂರ್ತಿಯ ಶಿಲ್ಪಿ ಕೃಷ್ಣ ನಾಯ್ಕ ಈತನು ಕಂಚಿನ ಲೋಹದಿಂದ ಪರಶುರಾಮ ಮೂರ್ತಿಯನ್ನು ನಿರ್ಮಾಣ ಮಾಡಿಲ್ಲ. ಬದಲಾಗಿ ಹಿತ್ತಾಳೆ ಲೋಹದಿಂದ ಪರಶುರಾಮ ಮೂರ್ತಿಯನ್ನು ನಿರ್ಮಾಣ ಮಾಡಿರುವುದು ತಜ್ಜರ ಪರಿಶೀಲನಾ ವರದಿಯಿಂದ ಹಾಗೂ ತನಿಖೆಯಿಂದ ಸಾಬೀತಾಗಿರುತ್ತದೆ.
ಅಲ್ಲದೇ ಪ್ರೊಜೆಕ್ಟ ಡೈರೆಕ್ಟರ್ ಅರುಣ ಕುಮಾರ್ ಹಾಗೂ ಇಂಜಿನಿಯರ್ ಸಚಿನ್ ವೈ ಕುಮಾರ್ ಇವರು ವರ್ಕ್ ಆರ್ಡರ್ ನಲ್ಲಿದ್ದ ಷರತ್ತುಗಳನ್ನು ಪಾಲಿಸಿರುವುದಿಲ್ಲ.
2023ರ ಅಕ್ಟೋಬರ್ 12ರಂದು ಪರಶುರಾಮ ಮೂರ್ತಿಯ ಸೊಂಟದಿಂದ ಮೇಲ್ಬಾಗವನ್ನು ಉಮ್ಮಿಕಲ್ ಬೆಟ್ಟದಿಂದ ತೆಗೆದುಕೊಂಡು ಹೋಗಿ ಉಡುಪಿ ತಾಲೂಕು ಅಲೆವೂರು ಗ್ರಾಮದ ಪ್ರಗತಿ ನಗರ ಎಂಬಲ್ಲಿರುವ ನಿರ್ಮಿತಿ ಕೇಂದ್ರಕ್ಕೆ ಸಂಬಂಧಿಸಿರುವ ಶೆಡ್‌ನಲ್ಲಿ 2024ರ ಫೆಬ್ರವರಿ 25ರ ವರೆಗೆ ಇರಿಸಿಕೊಂಡಿದ್ದಾರೆ.
ಆದರೆ ಪರಶುರಾಮ ಮೂರ್ತಿಯ ಸೊಂಟದಿಂದ ಮೇಲ್ಬಾಗವನ್ನು ಶಿಲ್ಪಿ ಕೃಷ್ಣ ನಾಯ್ಕ ಈತನಿಗೆ ಹಸ್ತಾಂತರ ಮಾಡಿದ್ದು,, ಕೃಷ್ಣ ನಾಯ್ಕ ಈತನು ಅದನ್ನು ಬೆಂಗಳೂರಿಗೆ ಸಾಗಾಟ ಮಾಡಿರುವುದಾಗಿ ತಪ್ಪು ಮಾಹಿತಿಯನ್ನು ನೀಡಿರುತ್ತಾರೆ.
ಆರೋಪಿಗಳಾದ ಶಿಲ್ಪಿ ಕೃಷ್ಣ ನಾಯ್ಕ ಉಡುಪಿ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ ಡೈರೆಕ್ಟರ್ ಅರುಣ ಕುಮಾರ್ ಹಾಗೂ ಇಂಜಿನಿಯರ್ ಸಚಿನ್ ವೈ ಕುಮಾರ್ ಇವರುಗಳು ಅಪರಾಧಿಕ ಒಳಸಂಚು ಮತ್ತು ನಂಬಿಕೆ ದ್ರೋಹ ಮತ್ತು ವಂಚನೆ ಎಸಗಿ, ಸಾಕ್ಷಿ ನಾಶ ಮಾಡಿರುತ್ತಾರೆ.
ಅವರ ವಿರುದ್ದ ಕಲಂ. 420, 409, 201, 120 (ಬಿ) ಜೊತೆಗೆ 34 ಐಪಿಸಿ ಯಂತೆ 1231 ಪುಟಗಳ ದೋಷಾರೋಪಣಾ ಪಟ್ಟಿಯನ್ನು ತಯಾರಿಸಿ ಮಾನ್ಯ ಕಾರ್ಕಳದ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
Karkala Parashurama Theme Park controversy : ಕಾರ್ಕಳ ಪ್ರವಾಸೋದ್ಯಮಕ್ಕೆ ಹಿನ್ನಡೆ ಆಯ್ತು ವಿವಾದ
ಪರಶುರಾಮನ ಥೀಮ್ ಪಾರ್ಕ್ ಕಾರ್ಕಳದ ಪ್ರವಾಸೋದ್ಯಕ್ಕೆ ವಿಪುಲ ಅವಕಾಶವನ್ನು ಒದಗಿಸಿತ್ತು. ದೇಶದ ನಾನಾ ಮೂಲೆಗಳಿಂದಲೂ ಪರಶುರಾಮನ ಥೀಮ್ ಪಾರ್ಕ್ ನೋಡಲು ಪ್ರವಾಸಿಗರು ಆಗಮಿಸುತ್ತಿದ್ದರು.
ಕಾರ್ಕಳದ ಥೀಮ್ ಪಾರ್ಕ್‌ಗೆ ಬರುವ ಪ್ರವಾಸಿಗರು ಜಿಲ್ಲೆಯ ಇತರ ಪ್ರವಾಸಿ ಕೇಂದ್ರಗಳಿಗೂ ಭೇಟಿ ನೀಡ್ತಾ ಇದ್ರು. ಆದರೆ ಪರಶುರಾಮನ ಮೂರ್ತಿಯ ಹೆಸರಲ್ಲಿ ನಡೆದ ರಾಜಕೀಯ ಗುದ್ದಾಟದಿಂದಾಗಿ ಕಾರ್ಕಳದ ಪ್ರವಾಸೋದ್ಯಮಕ್ಕೆ ಗರಬಡಿದಂತಾಗಿದೆ.
ಒಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದ್ದ ಪರಶುರಾಮ ಮೂರ್ತಿಯ ಕುರಿತ ಆರೋಪಕ್ಕೆ ಕಾರ್ಕಳ ಪೊಲೀಸರು ತಾರ್ತಿಕ ಅಂತ್ಯ ಕಾಣಿಸಿದ್ದಾರೆ. ಪರಶುರಾಮನದ್ದು ಪೈಬರ್ ಪ್ರತಿಮೆ ಅಲ್ಲಾ ಬದಲಾಗಿ ಹಿತ್ತಾಳೆ ಅನ್ನೋದು ಸ್ಪಷ್ಟವಾಗಿದೆ.
ಇದನ್ನೂ ಓದಿ : ಕೇರಳ ನರ್ಸ್ ನಿಮಿಷಾ ಪ್ರಿಯಾಗೆ ಮರಣ*ದಂಡನೆ ಫಿಕ್ಸ್..! ಕೇಂದ್ರ ಸುಪ್ರೀಂ ಕೋರ್ಟ್‌ಗೆ ಹೇಳಿದೇನು ?
Karkala Parashurama Theme Park controversy big Updates Karkala Police Submit Chargesheet in Kannada news



