Mango Rice: ಮಾವಿನಕಾಯಿ ಚಿತ್ರಾನ್ನ ಮಾಡುವುದು ಹೇಗೆ ಗೊತ್ತೇ? ಈ ಸೀಸನ್ನಲ್ಲಿ ನೀವೂ ಮಾಡಿ ನೋಡಿ

ಬೇಸಿಗೆ ಬಂತೆಂದರೆ ಮಾವಿನಕಾಯಿಗಳ (Mango Rice) ಸೀಸನ್‌ ಶುರು. ಅದರಲ್ಲಿ ಹಲವಾರು ಬಗೆಯ ವ್ಯಂಜನಗಳನ್ನು ಮಾಡಿ ಸವಿಯುವ ಮಜಾನೇ ಬೇರೆ. ಸಾಂಪ್ರದಾಯಿಕ ಸುವಾಸನೆಭರಿತ ಮಾವಿನಕಾಯಿ ಅಡುಗೆಗಳಿಗೆ ಒಂದಿಷ್ಟು ಆಧುನಿಕ ಸ್ವರ್ಶ ನೀಡಿ ಮಾವಿನಕಾಯಿ ಚಿತ್ರಾನ್ನ ಮಾಡಬಹುದಲ್ಲವೇ? ಇದು ಬೇಸಿಗೆಗೆ ರುಚಿಯಾದ ಮತ್ತು ಆರೋಗ್ಯಕ್ಕೂ ಉತ್ತಮವಾದ ವ್ಯಂಜನವಾಗಿದೆ.

ವಿಟಾಮಿನ್‌ C ಅನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ಮಾವಿನಕಾಯಿ ಚರ್ಮವನ್ನು ಆಳದಿಂದ ಸ್ವಚ್ಛಗೊಳಿಸಿ ಕಾಂತಿಯನ್ನು ಕೊಡುತ್ತದೆ. ಇದರಲ್ಲಿಯ ವಿಟಾಮಿನ್‌ C ಯು ಚರ್ಮದ ಪ್ರೋಟೀನ್‌ ಆದ ಕೊಲೆಜಿನ್‌ ಅನ್ನು ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿಯ ವಿಟಾಮಿನ್‌ A ಮತ್ತು ಕೆರಾಟಿನ್‌ಗಳು ಕೂದಲಿನ ಪೋಷಣೆಗೆ ಉತ್ತಮವಾಗಿದೆ. ಆಂಟಿಒಕ್ಸಿಡೆಂಟ್‌ ಗುಣವಿರುವುದರಿಂದ ಅನೇಕ ಹಾನಿಯುಂಟು ಮಾಡುವ ರ್‍ಯಾಡಿಕಲ್‌ಗಳಿಂದ ಕೋಶಗಳನ್ನು ಸಂರಕ್ಷಿಸುತ್ತದೆ. ಇದಲ್ಲದೆ ಮಾವಿನಕಾಯಿಯಲ್ಲಿ ವಿಟಾಮಿನ್‌ K, ಪೋಟ್ಯಾಸಿಯಂ, ಮತ್ತು ಮ್ಯಾಗ್ನಾಸಿಯಂಗಳು ಇವೆ.

ಇದನ್ನೂ ಓದಿ : Onion Benefits : ಈರುಳ್ಳಿಯ 6 ಪ್ರಯೋಜನಗಳು : ಸೌಂದರ್ಯಕ್ಕೂ ಸೈ, ಆರೋಗ್ಯಕ್ಕೂ ಜೈ !

ಇಷ್ಟೆಲ್ಲಾ ಪ್ರಯೋಜನವಿರುವ ಮಾವಿನಕಾಯಿಯನ್ನು ಈ ಬೇಸಿಗೆಯಲ್ಲಿ ಸವಿಯಲೇ ಬೇಕಲ್ಲವೇ? ಹಾಗಾದರೆ, ಮಾವಿನಕಾಯಿ ಚಿತ್ರಾನ್ನ ಮಾಡುವುದು ಹೇಗೆ? ಇಲ್ಲಿದೆ ನೋಡಿ.

ಮಾವಿನ ಕಾಯಿ ಚಿತ್ರಾನ್ನ (Mango Rice) ಮಾಡಲು ಬೇಕಾಗುವ ಸಾಮಗ್ರಿಗಳು

ಅನ್ನ ಒಂದು ಬಟ್ಟಲು
ಮಾವಿನಕಾಯಿ ಒಂದು (ಮೀಡಿಯಂ ಗಾತ್ರ)
ತೆಂಗಿನ ತುರಿ ಅರ್ಧ ಕಪ್‌
ಹಸಿಮೆಣಸಿನ ಕಾಯಿ 4 ರಿಂದ 5
ಶೇಂಗಾ, ಕಡ್ಲೆ ಬೇಳೆ, ಉದ್ದಿನ ಬೇಳೆ ತಲಾ ಒಂದು ಚಮಚ
ಸಾಸಿವೆ ಅರ್ಧ ಚಮಚ
ಕರಿಬೇವಿನ ಸೊಪ್ಪು 8 ರಿಂದ 10 ಎಲೆಗಳು
ಅರಿಶಿನ ಕಾಲು ಚಮಚ
ಅಡುಗೆ ಎಣ್ಣೆ 2 ರಿಂದ 3 ಚಮಚ
ಉಪ್ಪು ರುಚಿಗೆ ತಕ್ಕಷ್ಟು

ಮೊದಲಿಗೆ ಮಾವಿನಕಾಯಿಯ ಸಿಪ್ಪೆ ತೆಗೆದು, ತುರಿದುಕೊಳ್ಳಿ. ಒಂದು ಪ್ಯಾನ್‌ಗೆ ಅಡುಗೆ ಎಣ್ಣೆ ಹಾಕಿ. ಬಿಸಿಯಾದ ನಂತರ ಸಾಸಿವೆ, ಶೇಂಗಾ, ಉದ್ದಿನಬೇಳೆ, ಕಡ್ಲೆ ಬೇಳೆ, ಕರಿಬೇವಿನ ಎಲೆ, ಸಣ್ಣದಾಗಿ ಕತ್ತರಿಸಿದ ಹಸಿ ಮೆಣಸಿನ ಕಾಯಿ ಹಾಕಿ ಒಗ್ಗರಣೆ ಮಾಡಿ. ಸಾಸಿವೆ ಸಿಡಿದ ನಂತರ ಅದಕ್ಕೆ ಅರಿಶಿನ ಹಾಕಿ. ಅದಕ್ಕೆ ತುರಿದ ಮಾವಿನ ಕಾಯಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. 2 ನಿಮಿಷ ಮುಚ್ಚಡಿ. ಅನ್ನ ಸೇರಿಸಿ, ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್‌ ಮಾಡಿ.

ಈಗ ತಯಾರಾಯಿತು ರುಚಿಯಾದ ಮಾವಿನಕಾಯಿ ಚಿತ್ರಾನ್ನ. ಸೀಸನ್ನ ಮುಗಿಯುವುದರೊಳಗೆ ನೀವೂ ಟ್ರೈ ಮಾಡಿ.

ಇದನ್ನೂ ಓದಿ :Health Tips : ಎಣ್ಣೆ ಅಥವಾ ಮಸಾಲೆಯುಕ್ತ ಖಾದ್ಯಗಳನ್ನು ಸೇವಿಸಿದ ಮೇಲೆ ಅಸಹಜ ಎನಿಸುತ್ತಿದ್ದೆಯೇ? ಹಾಗಾದರೆ ಈ ರೀತಿ ಮಾಡಿ

(Mango Rice is the yummiest summer health dish)

Comments are closed.