ಬಿಸಿ ರೋಡ್‌ನಲ್ಲಿ ಲಾವಣ್ಯ ಹತ್ಯೆ ಪ್ರಕರಣ : ಆರೋಪಿ ಪತ್ತೆಗೆ ಪೊಲೀಸರ ವಿಶೇಷ ತಂಡ
BC Raod Lavanya murder case : ಚೇತನ್ ಹಾಗೂ ಲಾವಣ್ಯ ಇಬ್ಬರೂ ಕೂಡ ಸಂಬಂಧಿಕರಾಗಿದ್ದು, ಚೇತನ್ ಲಾವಣ್ಯಳನ್ನು ಪ್ರೀತಿಸುತ್ತಿದ್ದ. ಇದು ಒನ್ ಸೈಡ್ ಲವ್ ಆಗಿದ್ದು, ಲಾವಣ್ಯಳಿಗೆ ಈ ಪ್ರೀತಿ ಇಷ್ಟ ಇರಲಿಲ್ಲ.

ಮಂಗಳೂರು : ಕೆಎಸ್‌ಆರ್‌ಟಿಸಿ ಬಸ್ಸಿನಿಂದ ಇಳಿದ ಯುವತಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಆರೋಪಿಯ ಪತ್ತೆಗಾಗಿ ಎಸ್‌ಪಿ ಅರುಣ್ ಕುಮಾರ್ ಅವರು ವಿಶೇಷ ತಂಡವನ್ನು ರಚಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಸಿ ರೋಡ್‌ನಲ್ಲಿ ನಿನ್ನೆ 23 ವರ್ಷದ ಲಾವಣ್ಯ ಎಂಬಾಕೆಯನ್ನು ಬೆಳ್ತಂಗಡಿ ಒಡಿಲ್ನಾಳದ ನಿವಾಸಿ 22 ವರ್ಷದ ಚೇತನ್ ಎಂಬಾತ ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಈ ಘಟನೆ ಇಡೀ ಕರಾವಳಿಯಾದ್ಯಂತ ಆತಂಕವನ್ನು ಸೃಷ್ಟಿಸಿತ್ತು.
ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಕೆಲಸ ಮಾಡುತ್ತಿದ್ದ ಲಾವಣ್ಯ ಎಂಬಾಕೆ ಕಲ್ಲಡ್ಕದಿಂದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಬಿಸಿರೋಡ್‌ಗೆ ಬಂದಿದ್ದಾಳೆ. ನಂತರ ತನ್ನೂರಾಗಿರುವ ಕಕ್ಯಪದವಿಗೆ ತೆರಳುವ ಬಸ್ಸನ್ನು ಏರಿದ್ದಾಳೆ. ಈ ವೇಳೆ ಆರೋಪಿ ಚೇತನ ಕೂಡ ಅಲ್ಲಿಗೆ ಬಂದಿದ್ದ, ಆತನನ್ನು ನೋಡಿ ಬೆದರಿದ ಯುವತಿ ಬಸ್ಸಿನಿಂದ ಇಳಿದಿದ್ದಾಳೆ. ಆಕೆಯನ್ನು ಬೆನ್ನಟ್ಟಿದ ಚೇತನ ತನ್ನ ಬಳಿಯಲ್ಲಿ ಆಯುಧದಿಂದ ಆಕೆಯ ಮೇಳೆ ದಾಳಿ ಮಾಡಿ, ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆಯಾಗಿತ್ತು. ಇದನ್ನು ಗಮನಿಸಿಯೇ ಆರೋಪಿ ಚೇತನ್ ಈ ಕೃತ್ಯ ಎಸಗಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಯುವತಿಯನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಆದರೆ ಆಕೆ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಅರುಣ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಶೀಲಿಸಿದ್ದು, ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಿರುವುದಾಗಿ ತಿಳಿಸಿದ್ದಾರೆ.
ಚೇತನ್ ಹಾಗೂ ಲಾವಣ್ಯ ಇಬ್ಬರೂ ಕೂಡ ಸಂಬಂಧಿಕರಾಗಿದ್ದು, ಚೇತನ್ ಲಾವಣ್ಯಳನ್ನು ಪ್ರೀತಿಸುತ್ತಿದ್ದ. ಇದು ಒನ್ ಸೈಡ್ ಲವ್ ಆಗಿದ್ದು, ಲಾವಣ್ಯಳಿಗೆ ಈ ಪ್ರೀತಿ ಇಷ್ಟ ಇರಲಿಲ್ಲ. ಆದರೆ ಚೇತನ್ ಈಕೆಯ ಬಳಿಯಲ್ಲಿ ಪ್ರೀತಿಸುವಂತೆ ಪೀಡಿಸುತ್ತಿದ್ದ ಅನ್ನೋದು ಬಯಲಾಗಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿದ ಬಳಿಕವೇ ಸತ್ಯಾಂಶ ಹೊರಬರೋದಕ್ಕೆ ಸಾಧ್ಯ.
Lavanya murder case on BC Road: Special police team to find the accused

