ಬಿಎಂಟಿಸಿ ಪ್ರಯಾಣಿಕರಿಗೆ ಸಿಹಿಸುದ್ದಿ, ಆನ್‌ಲೈನ್ ಕ್ಯೂಆರ್ ಟಿಕೆಟ್ ವ್ಯವಸ್ಥೆ ಶೀಘ್ರ ಜಾರಿ
ಮೆಟ್ರೋ ಮಾದರಿಯಲ್ಲಿ ಬಿಎಂಟಿಸಿ ಬಸ್‌ಗಳಲ್ಲೂ ಆನ್‌ಲೈನ್ ಕ್ಯೂಆರ್ ಟಿಕೆಟ್ ವ್ಯವಸ್ಥೆ ಜಾರಿಗೆ ಬರಲಿದ್ದು, ಪ್ರಯಾಣಿಕರಿಗೆ ಸುಲಭ, ವೇಗದ ಮತ್ತು ನಗದುರಹಿತ ಪ್ರಯಾಣದ ಅನುಕೂಲ ದೊರೆಯಲಿದೆ.

ಬೆಂಗಳೂರು ನಗರದಲ್ಲಿ ಪ್ರತಿದಿನ ಲಕ್ಷಾಂತರ ಜನರು ಬಿಎಂಟಿಸಿ ಬಸ್‌ಗಳನ್ನು ಅವಲಂಬಿಸಿ ಪ್ರಯಾಣಿಸುತ್ತಾರೆ. ಆದರೆ ಜನಸಂದಣಿ ಹೆಚ್ಚಿರುವ ಸಮಯದಲ್ಲಿ ಟಿಕೆಟ್ ಪಡೆಯಲು ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಿಎಂಟಿಸಿ ಹೊಸ ಡಿಜಿಟಲ್ ವ್ಯವಸ್ಥೆ ಜಾರಿಗೆ ಮುಂದಾಗಿದೆ.
ನಮ್ಮ ಮೆಟ್ರೋದಲ್ಲಿ ಇರುವ ಮಾದರಿಯಂತೆ ಇನ್ನು ಮುಂದೆ ಬಿಎಂಟಿಸಿ ಪ್ರಯಾಣಿಕರು ಮೊಬೈಲ್ ಮೂಲಕವೇ ಕ್ಯೂಆರ್ ಟಿಕೆಟ್ ಖರೀದಿಸಿ ಬಸ್ ಏರಲು ಅವಕಾಶ ದೊರೆಯಲಿದೆ. ಬಸ್ ಹತ್ತುವ ಮುನ್ನವೇ ಟಿಕೆಟ್ ಬುಕ್ ಮಾಡಿಕೊಳ್ಳಬಹುದಾದ ಈ ವ್ಯವಸ್ಥೆ ಪ್ರಯಾಣವನ್ನು ಇನ್ನಷ್ಟು ಸುಗಮಗೊಳಿಸಲಿದೆ.
ಸದ್ಯ ಬಿಎಂಟಿಸಿಯಲ್ಲಿ ಬಹುತೇಕ ಪ್ರಯಾಣಿಕರು ಯುಪಿಐ ಪಾವತಿ ಮೂಲಕ ಟಿಕೆಟ್ ಪಡೆಯುತ್ತಿದ್ದಾರೆ. ಇದರ ಜೊತೆಗೆ ಸಂಪೂರ್ಣ ನಗದುರಹಿತ ಮತ್ತು ಟಿಕೆಟ್ ರಹಿತ ಪ್ರಯಾಣ ವ್ಯವಸ್ಥೆ ರೂಪಿಸುವ ಗುರಿಯನ್ನು ಸಂಸ್ಥೆ ಹೊಂದಿದೆ. ಹೊಸ ವ್ಯವಸ್ಥೆಯಿಂದ ನಿರ್ವಾಹಕರ ಮೇಲೆ ಇರುವ ಒತ್ತಡವೂ ಕಡಿಮೆಯಾಗುವ ನಿರೀಕ್ಷೆ ಇದೆ.
ಕೆಲ ಸಂದರ್ಭಗಳಲ್ಲಿ ಪ್ರಯಾಣಿಕರು ಟಿಕೆಟ್ ಪಡೆಯದೆ ದಂಡ ಪಾವತಿಸಿದ ಘಟನೆಗಳು ನಡೆದಿವೆ. ಮತ್ತೊಂದೆಡೆ ಡಿಜಿಟಲ್ ಪಾವತಿ ದುರುಪಯೋಗದ ದೂರುಗಳೂ ಕೇಳಿಬಂದಿದ್ದವು. ಹೊಸ ಕ್ಯೂಆರ್ ಟಿಕೆಟ್ ವ್ಯವಸ್ಥೆ ಇಂತಹ ಸಮಸ್ಯೆಗಳಿಗೆ ಕಡಿವಾಣ ಹಾಕುವಲ್ಲಿ ನೆರವಾಗಲಿದೆ.
ಇದಲ್ಲದೆ, ಎನ್‌ಸಿಎಂಸಿ ಕಾರ್ಡ್ ಮೂಲಕ ಮೆಟ್ರೋ ಮತ್ತು ಬಿಎಂಟಿಸಿ ಎರಡರಲ್ಲೂ ಪ್ರಯಾಣಿಸುವ ಏಕೀಕೃತ ವ್ಯವಸ್ಥೆ ತರಲು ಸಹ ಸಂಸ್ಥೆ ಸಿದ್ಧತೆ ನಡೆಸುತ್ತಿದೆ. ಈ ಕ್ರಮ ಸಾರ್ವಜನಿಕ ಸಾರಿಗೆಯನ್ನು ಇನ್ನಷ್ಟು ಆಧುನಿಕಗೊಳಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.



