15 ವರ್ಷಗಳ ಬಳಿಕ ರಾಜ್ಯ ರಾಜಧಾನಿಯಲ್ಲಿ ಕಡಿಮೆ ತಾಪಮಾನ : ದಾಖಲೆಯ ಚಳಿ ದಾಖಲಿಸಿದ ಬೆಂಗಳೂರು
ರಾಜ್ಯದಾದ್ಯಂತ ಈ ಬಾರಿ ವಾಡಿಕೆಗಿಂತ ಹೆಚ್ಚು ಚಳಿಯ ವಾತಾವರಣವಿದೆ. ಈ ನಡುವೆ ರಾಜ್ಯ ರಾಜಧಾನಿ ಬೆಂಗಳೂರು ಜನವರಿ ತಿಂಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಚಳಿ ಕಂಡಿದೆ. ಕಳೆದ ಹದಿನೈದು ವರ್ಷಗಳಲ್ಲೇ ಕಾಣದಂತಹ ಚಳಿ ಈ ವರ್ಷ ದಾಖಲಾಗಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಕನಿಷ್ಟ ತಾಪಮಾನ 13 -14 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಮೈಕೊರೆಯುವ ಚಳಿಗೆ ರಾಜಧಾನಿ ಮಂದಿ ನಡುಗಿ ಹೋಗಿದ್ದಾರೆ.
ಕಳೆದ ಒಂದೂವರೆ ದಶಕಗಳಲ್ಲಿ ದಾಖಲೆಯ ಚಳಿ ಇದಾಗಿದ್ದು, ಮುಂದಿನ ಐದು ದಿನಗಳ ಕಾಲ ಇದೇ ವಾತಾವರಣ ಮುಂದುವರಿಯಲಿದೆ ಎಂಂದು ಐಎಂಡಿ ಮಾಹಿತಿ ನೀಡಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ನಗರದಲ್ಲಿ 14.9, ಬೆಂಗಳೂರು ಎಚ್ಎಎಲ್ ನಲ್ಲಿ 14.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.ಇದು ನಿರೀಕ್ಷಿತ ವಾಡಿಕೆಗಿಂತ ಕಡಿಮೆ ತಾಪಮಾನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇನ್ನು ಇಂದು ಬೆಂಗಳೂರಿನಲ್ಲಿ ತಾಪಮಾನ ಇನ್ನಷ್ಟು ಕುಸಿದಿದ್ದು ಕನಿಷ್ಠ ತಾಪಮಾನ 12.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಳಗ್ಗೆ ಹಾಗೂ ರಾತ್ರಿ ಸಂದರ್ಭದಲ್ಲಿ ಚಳಿ ಅತ್ಯಧಿಕ ಪ್ರಮಾಣದಲ್ಲಿ ಇರಲಿದ್ದು ಬಾಕಿ ಸಂದರ್ಭದಲ್ಲಿ ಮೋಡ ಕವಿದ ವಾತಾವರಣ ಕಂಡು ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.



