ಕೊರೊನಾ ವೈರಸ್ ಮಹಾಮಾರಿಯ ನಡುವಲ್ಲೇ ರಕ್ತದಾನ : ಮೊಗವೀರ ಯುವ ಸಂಘಟನೆಯಿಂದ ವಿಭಿನ್ನ ಕಾರ್ಯಕ್ರಮ

0

ಉಡುಪಿ : ಕೊರೊನಾ ಮಹಾಮಾರಿಯ ಆರ್ಭಟ ದಿನೇ ದಿನೇ ಹೆಚ್ಚುತ್ತಿದೆ. ಆಸ್ಪತ್ರೆಗಳಲ್ಲಿಯೂ ರಕ್ತದ ಕೊರತೆ ಎದುರಾಗಿದೆ. ಕೊರೊನಾ ನಡುವಲ್ಲಿ ಉಡುಪಿ ಜಿಲ್ಲೆಯಲ್ಲಿ ಯಾರೂ ಕೂಡ ರಕ್ತದ ಕೊರತೆಯಿಂದ ಬಳಲಬಾರದೆಂಬ ನಿಟ್ಟಿನಲ್ಲಿ ನಾಡೋಜಾ ಜಿ.ಶಂಕರ್ ಅವರ ಮಾರ್ಗದರ್ಶನಲ್ಲಿ ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಜಿಲ್ಲೆಯಾದ್ಯಂತ ರಕ್ತದಾನ ಶಿಬಿರಗಳನ್ನು ಆಯೋಜಿಸಿದೆ. ಇದರ ಅಂಗವಾಗಿ ಇಂದು ಯಶಸ್ವಿಯಾಗಿ ರಕ್ತದಾನ ಶಿಬಿರವನ್ನು ನಡೆಸಲಾಗಿದೆ.

ನಾಡೋಜಾ ಜಿ.ಶಂಕರ್ ಅವರ ಮಾರ್ಗದರ್ಶನದಲ್ಲಿ ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಜಿಲ್ಲೆಯಾದ್ಯಂತ ರಕ್ತದಾನ ಶಿಬಿರಗಳನ್ನು ಹಲವು ವರ್ಷಗಳಿಂದಲೂ ಆಯೋಜಿಸುತ್ತಿದೆ. ವರ್ಷಂಪ್ರತಿ ಸುಮಾರು 10,000 ದಿಂದ 15,000 ಯೂನಿಟ್ ರಕ್ತವನ್ನು ಸಂಗ್ರಹಿಸಲಾಗುತ್ತಿದ್ದು, ಇದುವರೆಗೆ ಬರೋಬ್ಬರಿ 1.20 ಲಕ್ಷ ಯೂನಿಟ್ ರಕ್ತವನ್ನು ಸಂಗ್ರಹಿಸುವ ಮೂಲಕ ಉಡುಪಿ ಜಲ್ಲೆ ರಕ್ತದಾನಿಗಳ ಜಿಲ್ಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿನ್ನೆಲೆಯಲ್ಲಿ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಉಡುಪಿ, ಮೊಗವೀರ ಯುವ ಸಂಘಟನೆ ಬೆಳ್ಳಂಪಳ್ಳಿ ಘಟಕ, ರಕ್ತನಿಧಿ ಕೆಎಂಸಿ ಮಣಿಪಾಲ ಮತ್ತು ಜಿಲ್ಲಾಡಳಿತ ಉಡುಪಿ ಇವರ ಸಹಯೋಗದಲ್ಲಿ ಮಣಿಪಾಲ ರಕ್ತ ನಿಧಿಯಲ್ಲಿ ರಕ್ತದಾನ ಶಿಬಿರ ನಡೆಯಿತು. ರಕ್ತದಾನ ಶಿಬಿರವನ್ನು ಮೊಗವೀರ ಯುವ ಸಂಘಟನೆ ಯ ಜಿಲ್ಲಾಧ್ಯಕ್ಷರಾದ ಶಿವರಾಮ್ ಕೆ.ಎಮ್ ಮತ್ತು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ.ಕೋಟ್ಯಾನ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಮ್ ಕೆ ಎಮ್ ಕೊರೊನಾ ದಿನೇ ದಿನೇ ಜಾಸ್ತಿಯಾಗುತ್ತಿದೆ. ಸರಕಾರ ಪುನಃ ಪ್ರತೀ ಆದಿತ್ಯವಾರ ಲಾಕ್ ಡೌನ್ ಮುಂದುವರಿಸಿದೆ. ಆದರ ನಡುವೆಯೂ ಸಣ್ಣ ಸಣ್ಣ ರಕ್ತದಾನ ಶಿಬಿರಗಳನ್ನು ನಮ್ಮ ಮಾರ್ಗದರ್ಶಕರಾದ ಜಿ ಶಂಕರ್ ರವರ ಮಾರ್ಗದರ್ಶನದಲ್ಲಿ ನಡೆಸಲು ಮುಂದಾಗಿದ್ದೇವೆ. ರಕ್ತದಾನಿಗಳು ಸಾಮಾಜಿಕ ಅಂತರವನ್ನು ಕಾಯ್ದು ಕೊಂಡು ರಕ್ತದಾನ ಮಾಡುವ ಮೂಲಕ ಕೊರೊನಾ ವಿರುದ್ದ ಹೋರಾಡೊಣ ಎಂದರು.

ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದ ಶಿಬಿರಾರ್ಥಿಗಳಿಗೆ ಎಂಐಟಿ ಮಣಿಪಾಲ ಪ್ರಾಧ್ಯಾಪಕರಾದ ಬಾಲಕೃಷ್ಣ ಮದ್ದೋಡಿ ಅವರು ಪ್ರಮಾಣಪತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮೊಗವೀರ ಯುವ ಸಂಘಟನೆಯ ವಿಠ್ಠಲ್ ಕರ್ಕೇರ, ನವೀನ್ ಬೆಳ್ಳಂಪಳ್ಳಿ, ರಾಜೇಂದ್ರ ಹಿರಿಯಡ್ಕ, ಚಂದ್ರೇಶ್ ಪಿತ್ರೋಡಿ, ರಕ್ತದ ಆಪತ್ಬಾಂಧವ ಸತೀಶ್ ಸಾಲ್ಯಾನ್ ಮಣಿಪಾಲ, ರಕ್ತ ನಿಧಿಯ ಶ್ರೀಧರ್ ಉಪಸ್ಥಿತರಿದ್ದರು.

Leave A Reply

Your email address will not be published.