‘ಪ್ರತಿಷ್ಠೆ’ ಉಳಿಸಿಕೊಳ್ಳುವತ್ತ ಬಿಎಸ್ವೈ : ‘ಪ್ರತಿಜ್ಞಾ’ ಬಿಸಿಯಲ್ಲಿ ಡಿಕೆಶಿ : ‘ಕೊರೊನಾ’ಕ್ಕೆ ಬಲಿಯಾದ್ರ ಜನರು ?

0

ಬೆಂಗಳೂರು : ಕರ್ನಾಟಕದಲ್ಲಿ ಭೀಕರವಾಗಿ ಕೊರೋನಾ ಸ್ಪೋಟಗೊಂಡಿದೆ. ಅಪಾಯದ ಮಟ್ಟವನ್ನು ಮೀರಿದೆ. ಕರ್ನಾಟಕದಲ್ಲಿ ಒಂದೇ ದಿನ ಸಾವಿರಕ್ಕೂ ಅಧಿಕ ಪ್ರಕರಣ ವರದಿಯಾಗಿದೆ. ಈ ನಡುವೆ ಕರ್ನಾಟಕದ ಆಡಳಿತ ಹಾಗೂ ವಿರೋಧ ಪಕ್ಷ ಎರಡು ಟೀಕೆಗೆ ಗುರಿಯಾಗಿವೆ.
ಆಡಳಿತ ಹಾಗೂ ವಿರೋಧ ಪಕ್ಷ ಕೊರೋನಾವನ್ನು ಗಂಭೀರವಾಗಿ ತೆಗೆದುಕೊಂಡೇ ಇಲ್ಲ. ಕಳೆದ ಮೂರು ತಿಂಗಳಿನಿಂದ ಬಿಜೆಪಿ ಹಾಗೂ ಕಾಂಗ್ರೆಸ್ ತೋರಿಸಿದ ವರ್ತನೆ ಇದನ್ನು ಸಾಬೀತುಪಡಿಸಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಕೊರೊನಾ ನಿಯಂತ್ರಣ ಎಲ್ಲಿ ತನ್ನ ಜನಪ್ರಿಯತೆಗೆ ತೊಂದರೆಯಾಗುತ್ತದೆ ಎಂಬುವುದನ್ನೇ ಯೋಚಿಸಿದ್ದಾರೆ. ಅವರ ಈ ಯೋಚನೆ ಅವರ ನಿರ್ಧಾರಗಳಿಂದಲೇ ಗೋಚರವಾಗುತ್ತಿದೆ. ‘ಲಾಕ್ ಡೌನ್’ ಕಠಿಣವಾಗಿ ಪಾಲಿಸುವುದನ್ನು ಬಿಟ್ಟು ಜನರ ಒತ್ತಡಕ್ಕೆ ಒಳಗಾಗಿ ತಾನು ಜನರಲ್ಲಿ ‘ಅಪ್ರಿಯ’ ಆಗುತ್ತೆನಂಬ ಅಳುಕಿನಿಂದ ಇಡೀ ಮೂರು ತಿಂಗಳು ಯಡಿಯೂರಪ್ಪ ಕಾರ್ಯನಿರ್ವಹಿಸಿದರು ಎನ್ನುತ್ತಾರೆ ವಿಶ್ಲೇಷಕರು. ಲಾಕ್ ಡೌನ್’ ಸಡಿಲಿಸುವುದರಲ್ಲಿ ಹೆಚ್ಚು ಆಸಕ್ತಿ ತೋರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಚಿವ ಸಂಪುಟದ ಸಚಿವರ ನಡುವಿನ ಭಿನ್ನಾಭಿಪ್ರಾಯ ಸರಿಮಾಡಲು ಹೋಗಲೇ ಇಲ್ಲ, ಇದರಿಂದ ಕೊರೊನಾ ನಿಯಂತ್ರಣದ ಸಮನ್ವಯತೆ ದಾರಿ ತಪ್ಪಿದೆ.

ಇನ್ನು ಕೊರೊನಾ ಮಹಾಮಾರಿಯ ವಿರುದ್ದ ಎಡವಿರುವ ಸರಕಾರವನ್ನು ಎಚ್ಚರಿಸಬೇಕಿರುವ ವಿರೋಧ ಪಕ್ಷ ಕಾಂಗ್ರೆಸ್ ಕೈಕಟ್ಟಿ ಕುಳಿತಂತಿದೆ. ರಾಜ್ಯದಲ್ಲಿ ಕೊರೊನಾ ಹೆಮ್ಮಾರಿ ರೌದ್ರನರ್ತನವನ್ನು ಮೆರೆಯುತ್ತಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಮಾತ್ರ ಕಳೆದ ಮೂರು ತಿಂಗಳಿನಿಂದ ಪ್ರತಿಜ್ಞಾ ಕಾರ್ಯಕ್ರಮದಲ್ಲಿಯೇ ಸಂಪೂರ್ಣವಾಗಿ ನಿರತರಾವಿದ್ದಾರೆ. ಆದರೆ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಡಿಕೆಶಿ ಅವರು ಮಾಡಿಯೇ ಇಲ್ಲ. ಪ್ರತಿಜ್ಞಾ ಕಾರ್ಯಕ್ರಮಕ್ಕೆ ಪ್ರತಿದಿನ ಮೀಟಿಂಗ್ ಮಾಡುತ್ತಿರುವ ಕಾಂಗ್ರೆಸ್, ಸರ್ಕಾರದ ವಿರುದ್ಧ ವ್ಯವಸ್ಥಿತ ಪ್ರತಿಭಟನೆಯನ್ನು ಮಾಡಿಲ್ಲ. ಇದರಿಂದ ನಿದ್ದೆಯಲ್ಲಿದ್ದ ಸರಕಾರವನ್ನು ಎಚ್ಚರಿಸುವ ಕಾರ್ಯ ನಡೆಯಲಿಲ್ಲ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತ್ರ ಕೆಲವು ಸಂದರ್ಭದಲ್ಲಿ ಏಕಾಂಗಿಯಾಗಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆದರೆ ಕಾಂಗ್ರೆಸ್ ಸಾಮೂಹಿಕವಾಗಿ ಸರಕಾರದ ವಿರುದ್ಧ ಮುಗಿ ಬೀಳಲಿಲ್ಲ. ಜೆಡಿಎಸ್ ಸ್ವಲ್ಪಮಟ್ಟಿಗೆ ಸರಕಾರವನ್ನು ಎಚ್ಚರಿಸುವ ಕಾರ್ಯವನ್ನು ಮಾಡಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರಕಾರದ ವಿರುದ್ದ ಚಾಟಿ ಬೀಸಿದ್ದಾರೆ. ಆದರೂ ಸರಕಾರ ಎಚ್ಚೆತ್ತುಕೊಳ್ಳುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಒಟ್ಟಿನಲ್ಲಿ ಆಡಳಿತ ಹಾಗೂ ವಿಪಕ್ಷ ಜನರ ಹಿತ ಕಾಪಾಡುವುದಕ್ಕಿಂತ ರಾಜಕೀಯ, ಪಕ್ಷ ಸಂಘಟನೆಯಲ್ಲಿ ನಿರತವಾಗಿ ಜನರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಆಡಳಿತ, ವಿಪಕ್ಷಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದ್ರೂ ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರು ಕೊರೊನಾ ಮಹಾಮಾರಿಯನ್ನು ನಿಯಂತ್ರಿಸುವ ಮೂಲಕ ತಮಗೆ ಮತಕೊಟ್ಟು ಗೆಲ್ಲಿಸಿದ ಮತದಾರನ ಋಣವನ್ನು ತೀರಿಸುವ ಕಾರ್ಯವನ್ನು ಮಾಡಬೇಕಿದೆ.

Leave A Reply

Your email address will not be published.