Congress President Poll Results 2022:ಎಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಜಯಭೇರಿ

ದೆಹಲಿ : Congress President Poll Results 2022 :ಎಐಸಿಸಿ ಅಧ್ಯಕ್ಷ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು ಬರೋಬ್ಬರಿ ಎರಡು ದಶಕಗಳ ಬಳಿಕ ಗಾಂಧಿಯೇತರ ಕುಟುಂಬದ ವ್ಯಕ್ತಿಯೊಬ್ಬರು ಪಕ್ಷದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಶಶಿ ತರೂರ್​ ಹಾಗೂ ಮಲ್ಲಿಕಾರ್ಜುನ ಖರ್ಗೆ ನಡುವೆ ನಡೆದ ಹಣಾಹಣಿಯಲ್ಲಿ ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಒಟ್ಟು 9,385 ಮತಗಳ ಪೈಕಿ ಮಲ್ಲಿಕಾರ್ಜುನ ಖರ್ಗೆ 7897 ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎದುರಾಳಿ ಶಶಿ ತರೂರ್​ ಕೇವಲ 1072 ಮತಗಳನ್ನು ಗಳಿಸಲಷ್ಟೇ ಶಕ್ತರಾಗಿದ್ದಾರೆ .


2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷವು ಹೀನಾಯ ಸೋಲನ್ನು ಅನುಭವಿಸಿದ ಬಳಿಕ ಈ ಸೋಲಿನ ನೈತಿಕ ಹೊಣೆಯನ್ನು ಹೊತ್ತು ರಾಹುಲ್​ ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಇದಾದ ಬಳಿಕ ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಪಕ್ಷವನ್ನು ಮುನ್ನಡೆಸುತ್ತಿದ್ದರು. ಮತ್ತೊಮ್ಮೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಏರಲು ರಾಹುಲ್​ ಗಾಂಧಿ ಸುತಾರಾಂ ಒಪ್ಪದ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರೆಲ್ಲ ಒಂದಾಗಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನು ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ. ಬರೋಬ್ಬರಿ 23 ವರ್ಷಗಳ ಬಳಿಕ ಕಾಂಗ್ರೆಸ್​ ಪಕ್ಷಕ್ಕೆ ಗಾಂಧಿಯೇತರ ಕುಟುಂಬದ ವ್ಯಕ್ತಿಯೊಬ್ಬರು ಅಧ್ಯಕ್ಷರಾಗುವುದು ಅಲ್ಲಿಗೆ ಪಕ್ಕಾ ಆಗಿತ್ತು.


ಇನ್ನು ಎಐಸಿಸಿ ಅಧ್ಯಕ್ಷ ಚುನಾವಣೆ ಫಲಿತಾಂಶ ಹೊರ ಬಿದ್ದ ಬಳಿಕ ಮಾತನಾಡಿದ ಸಂಸದ ಶಶಿ ತರೂರ್​, ಪಕ್ಷದ ಪುನರುಜ್ಜೀವನ ಇಂದಿನಿಂದ ಆರಂಭವಾಗಲಿದೆ. ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ ಮಲ್ಲಿಕಾರ್ಜುನ ಖರ್ಗೆಗೆ ನನ್ನ ಅಭಿನಂದನೆಗಳು. ಎಐಸಿಸಿ ಅಧ್ಯಕ್ಷನಾಗುವುದು ಒಂದು ದೊಡ್ಡ ಗೌರವ ಹಾಗೂ ಜವಾಬ್ದಾರಿಯ ಕೆಲಸವಾಗಿದೆ. ಈ ಕಾರ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಯಶಸ್ಸು ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಟ್ವೀಟಾಯಿಸಿದ್ದಾರೆ.


ಅಂದ ಹಾಗೆ ಇಂದು ಮುಂಜಾನೆಯಷ್ಟೇ ರಾಹುಲ್​ ಗಾಂಧಿ ಚುನಾವಣೆ ಫಲಿತಾಂಶಕ್ಕೂ ಮುನ್ನ ಬಾಯಿ ತಪ್ಪಿ ಮಲ್ಲಿಕಾರ್ಜುನ ಖರ್ಗೆಯನ್ನು ಎಐಸಿಸಿ ಅಧ್ಯಕ್ಷ ಎಂದು ಕರೆದುಬಿಟ್ಟಿದ್ದರು. ಇತ್ತ ಮತ ಎಣಿಕೆಯ ಮುನ್ನಾ ದಿನ ಶಶಿ ತರೂರ್ ಬಣವು ಚುನಾವಣಾ ಸಂದರ್ಭದಲ್ಲಿ ಅನೇಕ ಅಕ್ರಮಗಳು ನಡೆದಿದೆ ಎಂದು ಚುನಾವಣಾಧಿಕಾರಿಯನ್ನು ಸಂಪರ್ಕಿಸಿತ್ತು. ಅತಿ ಹೆಚ್ಚು ಪಿಸಿಸಿ ಪ್ರತಿನಿಧಿಗಳನ್ನು ಹೊಂದಿರುವ ಉತ್ತರ ಪ್ರದೇಶ ಸೇರಿದಂತೆ ಮೂರು ರಾಜ್ಯಗಳಲ್ಲಿ ಅಕ್ರಮಗಳು ನಡೆದಿದೆ ಎಂದು ಶಶಿ ತರೂರ್​ ಬಣ ಆರೋಪಿಸಿತ್ತು. ಉತ್ತರ ಪ್ರದೇಶದಲ್ಲಿ ಮತದಾನ ಮುಗಿದ ಬಳಿಕ ಪ್ರಾಧಿಕಾರ ನೀಡಿದ ಮಾರ್ಗಸೂಚಿಗಳ ಪ್ರಕಾರ ಮತಪೆಟ್ಟಿಗೆಗಳನ್ನು ಸೀಲ್​ ಮಾಡಿಲ್ಲ ಎಂದು ಆರೋಪಿಸಿತ್ತು.


ಮಲ್ಲಿಕಾರ್ಜುನ ಖರ್ಗೆಯನ್ನು ಗಾಂಧಿ ಕುಟುಂಬದ ಅನಧಿಕೃತ ಅಧಿಕೃತ ಅಭ್ಯರ್ಥಿ ಎಂದು ಹೇಳಲಾಗುತ್ತಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್​ ಹಿರಿಯ ನಾಯಕರು ಮಲ್ಲಿಕಾರ್ಜುನ ಖರ್ಗೆಗೆ ಸಾಥ್​ ನೀಡಿದ್ದಾರೆ. ಸುಮಾರು 137 ವರ್ಷಗಳ ಇತಿಹಾಸದಲ್ಲಿ ಆರನೇ ಬಾರಿಗೆ ಕಾಂಗ್ರೆಸ್​ ಅಧ್ಯಕ್ಷನನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಗಿದೆ.

ಇದನ್ನು ಓದಿ : Monday the worst day:‘ಸೋಮವಾರ ವಾರದ ಅತ್ಯಂತ ಕೆಟ್ಟ ದಿನ’ : ಗಿನ್ನೆಸ್​ ವಿಶ್ವ ದಾಖಲೆಯಲ್ಲಿ ಅಧಿಕೃತ ಘೋಷಣೆ

ಇದನ್ನೂ ಓದಿ : Third FIR registered :ಮುರುಘಾ ಶರಣರಿಗೆ ಮತ್ತೊಂದು ಆಘಾತ : ಗ್ರಾಮೀಣ ಠಾಣೆಯಲ್ಲಿ ಶ್ರೀಗಳ ವಿರುದ್ಧ ದಾಖಲಾಯ್ತು ಮೂರನೇ ಎಫ್​ಐಆರ್​

Congress President Poll Results 2022:Kharge sweeps Congress prez elections; ‘revival of party begins today,’ says Tharoor

Comments are closed.