Congress President Polls :ಇಲ್ಲಿದೆ ನೋಡಿ ಎಐಸಿಸಿ ಅಧ್ಯಕ್ಷ ಚುನಾವಣೆಯ ಪ್ರಮುಖ ವಿಚಾರಗಳು

Congress President Polls : ಬರೋಬ್ಬರಿ 22 ವರ್ಷಗಳ ಬಳಿಕ ಇಂದು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್​​ಗೆ ನೂತನ ಅಧ್ಯಕ್ಷನ ಆಯ್ಕೆಗೆ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದೆ. ಕರ್ನಾಟಕದ ಹಿರಿಯ ರಾಜಕಾರಣಿ ಎನಿಸಿರುವ ಮಲ್ಲಿಕಾರ್ಜುನ ಖರ್ಗೆ ಕೂಡ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರೋದ್ರಿಂದ ಇಂದಿನ ಚುನಾವಣಾ ಫಲಿತಾಂಶ ಏನಾಗಬಹುದು ಎಂಬ ಕುತೂಹಲ ಕರ್ನಾಟಕದ ಪಾಲಿಗೆ ಹೆಚ್ಚೇ ಇದೆ. ಗಾಂಧಿ ಕುಟುಂಬದ ಆಪ್ತ ಎನಿಸಿರುವ ಮಲ್ಲಿಕಾರ್ಜುನ ಖರ್ಗೆ ಹಾಗೂ ತಿರುವನಂತಪುರಂ ಸಂಸದ ಶಶಿ ತರೂರ್​ ನಡುವೆ ಇಂದು ಎಐಸಿಸಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ.


ಶಶಿ ತರೂರ್​ ಹಾಗೂ ಮಲ್ಲಿಕಾರ್ಜುನ ಖರ್ಗೆ ನಡುವೆ ಇಂದು ಹಣಾಹಣಿ ಏರ್ಪಟ್ಟಿದ್ದರೂ ಸಹ ಎಐಸಿಸಿ ಅಧ್ಯಕ್ಷನ ಪಟ್ಟ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆಗೆ ಸಿಗುವುದು ಬಹುತೇಕ ಪಕ್ಕಾ ಆಗಿದೆ. ಪಕ್ಷದ ಹಿರಿಯ ರಾಜಕಾರಣಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಸೋನಿಯಾ ಗಾಂಧಿ ಕುಟುಂಬಕ್ಕೆ ತೀರಾ ಆಪ್ತರೆನಿಸಿದ್ದಾರೆ. ಅಲ್ಲದೇ ಈವರೆಗೆ ಪಕ್ಷದಲ್ಲಿ ಹೇಳಿಕೊಳ್ಳುವಂತಹ ಸ್ಥಾನ ಕೂಡ ಸಿಗದ ಹಿನ್ನೆಲೆಯಲ್ಲಿ ಈ ಪಟ್ಟ ಮಲ್ಲಿಕಾರ್ಜುನ ಖರ್ಗೆ ಕಡೆಗೆ ವಾಲುವ ಸಾಧ್ಯತೆ ಹೆಚ್ಚಿದೆ. ಆದರೆ ಇಬ್ಬರಲ್ಲಿ ಯಾರೇ ಚುನಾವಣೆಯಲ್ಲಿ ವಿಜೇತರಾದರೂ ಸಹ ಎರಡೂವರೆ ದಶಕದ ಬಳಿಕ ಕಾಂಗ್ರೆಸ್​ ಪಕ್ಷದ ಅಧ್ಯಕ್ಷಗಿರಿಯನ್ನು ಪಡೆದ ಗಾಂಧಿ ಪರಿವಾರಕ್ಕೆ ಸೇರದ ಮೊದಲ ವ್ಯಕ್ತಿ ಎನಿಸಲಿದ್ದಾರೆ.


ದೆಹಲಿಯಲ್ಲಿರುವ ಕಾಂಗ್ರೆಸ್​​ ಪ್ರಧಾನ ಕಚೇರಿ ಸೇರಿದಂತೆ ದೇಶದಲ್ಲಿ ಒಟ್ಟು 65 ಕಡೆಗಳಲ್ಲಿ ಇಂದು ಎಐಸಿಸಿ ಅಧ್ಯಕ್ಷ ಚುನಾವಣೆ ನಡೆಯಲಿದೆ. 9000ಕ್ಕೂ ಅಧಿಕ ಪ್ರದೇಶ ಕಾಂಗ್ರೆಸ್​ ಸಮಿತಿ ಸದಸ್ಯರು ಈ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 10 ಗಂಟೆಯಿಂದಲೇ ಮತದಾನ ಆರಂಭಗೊಂಡಿದ್ದು ಸಂಜೆ ನಾಲ್ಕು ಗಂಟೆ ವೇಳೆಗೆ ಚುನಾವಣಾ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.


ಭಾರತ್​​ ಜೋಡೋ ಯಾತ್ರೆಯ ಅಂಗವಾಗಿ ಕರ್ನಾಟಕದಲ್ಲಿ 2 ಮತಗಟ್ಟೆಗಳ ಸ್ಥಾಪನೆಯಾಗಿದೆ. ಗೌಪ್ಯ ಮತದಾನದ ಮೂಲಕ ಮತದಾನ ಪ್ರಕ್ರಿಯೆ ನಡೆಯಲಿದ್ದು ಕರ್ನಾಟಕದಲ್ಲಿ ಕೆಪಿಸಿಸಿ ಕಚೇರಿ ಹಾಗೂ ಬಳ್ಳಾರಿಯ ಸಂಗನಕಲ್ಲು ಎಂಬಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಕಂಟೈನರ್​ ತಾತ್ಕಾಲಿಕ ಮತಗಟ್ಟೆಯನ್ನಾಗಿ ಮಾಡಲಾಗಿದೆ. ಭಾರತ್​ ಜೋಡೋ ಯಾತ್ರೆಯ ಪ್ರಯುಕ್ತ ಬಳ್ಳಾರಿಯ ಸಂಗನಕಲ್ಲು ಎಂಬಲ್ಲಿ ತಂಗಿರುವ ರಾಹುಲ್​ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್​ ನಾಯಕರು ಇಂದು ಈ ಮತಗಟ್ಟೆಯಲ್ಲಿಯೇ ಕಾಂಗ್ರೆಸ್​ ಅಧ್ಯಕ್ಷನ ಆಯ್ಕೆಗೆ ಮತ ಚಲಾವಣೆ ಮಾಡಲಿದ್ದಾರೆ.


ಮತದಾನ ಮಾಡಲು ಕಾಂಗ್ರೆಸ್​ ಪಕ್ಷವು ಗೌಪ್ಯ ಮತದಾನ ಪ್ರಕ್ರಿಯೆಯನ್ನು ಆಯ್ಕೆ ಮಾಡಿಕೊಂಡಿದೆ. ಮತ ಪತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್​ ಹೀಗೆ ಇಬ್ಬರ ಹೆಸರು ಇರಲಿದ್ದು ಇದರಲ್ಲಿ ತಮ್ಮಗಿಷ್ಟವಾದ ಪ್ರತಿನಿಧಿಯ ಹೆಸರಿನ ಎದುರು ಟಿಕ್​ ಮಾಡುವ ಮೂಲಕ ಮತ ಚಲಾವಣೆ ಮಾಡಬೇಕು. ಸದಸ್ಯರು ತಮಗೆ ನಿಗದಿ ಮಾಡಿದ ಮತಗಟ್ಟೆಯಲ್ಲಿಯೇ ಮತಚಲಾಯಿಸಬೇಕು. ಸಂಪೂರ್ಣ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಎಲ್ಲಾ ಮತಪೆಟ್ಟಿಗೆಗಳು ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯ ಭದ್ರತಾ ಕೊಠಡಿಗೆ ರವಾನೆ ಆಗಲಿವೆ.


ಬುಧವಾರದಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಅಲ್ಲಿಯವರೆಗೆ ಈ ಮತಪೆಟ್ಟಿಗೆಗಳು ಎಐಸಿಸಿ ಪ್ರಧಾನ ಕಚೇರಿಯ ಭದ್ರತಾ ಕೊಠಡಿಯಲ್ಲಿ ಭದ್ರವಾಗಿ ಇರಲಿವೆ. ಅತೀ ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿಯು ಎಐಸಿಸಿ ಅಧ್ಯಕ್ಷಗಾದಿಯ ಚುಕ್ಕಾಣಿ ಹಿಡಿಯಲಿದ್ದಾರೆ.

ಇದನ್ನು ಓದಿ : The Halal Cut Controversy : ದೀಪಾವಳಿ ಹೊತ್ತಲೇ ಹಲಾಲ್ ಕಟ್ ವಿವಾದ : ಹಿಂದೂ ಸಂಘಟನೆಗಳಿಂದ ಜಾಗೃತಿ ಅಭಿಯಾನ

ಇದನ್ನೂ ಓದಿ : ICC T20 World Cup 2022 : ಇಂದು ಭಾರತ ಆಸ್ಟ್ರೇಲಿಯಾ ಅಭ್ಯಾಸ ಪಂದ್ಯ : ಇಲ್ಲಿದೆ T20 ವಿಶ್ವಕಪ್ ವೇಳಾಪಟ್ಟಿ

Congress President Polls Voting Process Explained

Comments are closed.