ವಿದೇಶದಲ್ಲಿ ಬಂಧಿಯಾದ ಭಾರತೀಯರ ರಕ್ಷಣೆ : ಮೇ 7 ರಿಂದಲೇ ಶುರುವಾಗುತ್ತೆ ಕಾರ್ಯಾಚರಣೆ

0

ನವದೆಹಲಿ : ಕೊರೊನಾ ವೈರಸ್ ಸೋಂಕಿನಿಂದ ವಿಶ್ವವೇ ತತ್ತರಿಸಿ ಹೋಗಿದೆ. ಲಕ್ಷಾಂತರ ಮಂದಿ ಭಾರತೀಯರು ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ವಿದೇಶದಲ್ಲಿರುವ ಭಾರತೀಯರನ್ನು ದೇಶಕ್ಕೆ ವಾಪಾಸ್ ಕರೆತರಲು ಬೃಹತ್ ಯೋಜನೆಯೊಂದನ್ನು ಸಿದ್ದಪಡಿಸುತ್ತಿದೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳು ವಿದೇಶಿ ವಿಮಾನಗಳ ಹಾರಾಟವನ್ನೇ ರದ್ದುಪಡಿಸಿದ್ದಾರೆ. ಕೊರೊನಾ ವೈರಸ್ ಸೋಂಕಿನಿಂದ ಗಲ್ಪ್ ರಾಷ್ಟ್ರಗಳು ತತ್ತರಿಸಿ ಹೋಗಿವೆ. ಅದ್ರಲ್ಲೂ ಲಕ್ಷಾಂತರ ಮಂದಿ ಭಾರತೀಯರು ವಿದೇಶಗಳಲ್ಲಿ ಬಂಧಿಯಾಗಿದ್ದಾರೆ. ಹೀಗಾಗಿಯೇ ವಿದೇಶಗಳಲ್ಲಿರುವ ಭಾರತೀಯರು ರಕ್ಷಣೆಗಾಗಿ ಕೇಂದ್ರ ಸರಕಾರಕ್ಕೆ ಮೊರೆಯಿಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಯೋಜನೆಯೊಂದನ್ನು ಈಗಾಗಲೇ ಸಿದ್ದಪಡಿಸಿದೆ. ಗಲ್ಪ್ ರಾಷ್ಟ್ರಗಳಲ್ಲಿ ಭಾರತಕ್ಕೆ ಬರುವವರ ಮಾಹಿತಿಯನ್ನು ಪಡೆಯುತ್ತಿದ್ದು, ಮೇ 7 ರಿಂದಲೇ ಹಂತ ಹಂತವಾಗಿ ಭಾರತೀಯರನ್ನು ದೇಶಕ್ಕೆ ವಾಪಾಸ್ ಕರೆತರಲು ಮುಂದಾಗಿದೆ.

ಕೊರೊನಾ ಸೋಂಕು ಯಾವುದೇ ಕಾರಣಕ್ಕೂ ವಿದೇಶಗಳಿಂದ ಬರುವವರಿಂದ ಹರಡಬಾರದೆಂಬ ನಿಟ್ಟಿನಲ್ಲಿ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದೇಶದಲ್ಲಿರುವ ಭಾರತೀಯರನ್ನು ವಾಪಾಸ್ ಕರೆಯಿಸಿಕೊಳ್ಳುವ ಕುರಿತು ಕೇಂದ್ರ ಸರಕಾರ ಈಗಾಗಲೇ ರಾಜ್ಯ ಸರಕಾರಗಳಿಗೆ ಸೂಚನೆಯನ್ನು ಕೊಟ್ಟಿವೆ. ಮಾತ್ರವಲ್ಲ ರಾಜ್ಯ ಸರಕಾರಗಳು ಕೂಡ ಜಿಲ್ಲಾಡಳಿತಗಳಿಗೆ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸುವಂತೆ ಹೇಳಿವೆ. ಹೀಗಾಗಿಯೇ ವಿದೇಶಗಳಿಂದ ತಾಯ್ನಾಡಿಗೆ ಮರಳುವವರನ್ನು ಕ್ವಾರಂಟೈನ್ ಗೆ ಒಳಪಡಿಸುವ ಕುರಿತು ಸಿದ್ದತೆಗಳು ಜೋರಾಗಿಯೇ ನಡೆಯುತ್ತಿವೆ.

ಯುಎಇವೊಂದರಲ್ಲೇ ಈಗಾಗಲೇ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಭಾರತಕ್ಕೆ ವಾಪಾಸಾಗಲು ಉತ್ಸುಕರಾಗಿದ್ದು, ತಮ್ಮ ಹೆಸರನ್ನು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಈ ಹಿಂದೆ ಚೀನಾದ ವುಹಾನ್ ನಲ್ಲಿ ಸಿಲುಕಿದ್ದವರನ್ನು ರಕ್ಷಣೆ ಮಾಡಿದ್ದ ಇಂಡಿಯನ್ ಏರ್ ಲೈನ್ಸ್ ಗಲ್ಪ್ ರಾಷ್ಟ್ರಗಳಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.

ಇಂಡಿಯನ್ ಏರ್ ಲೈನ್ಸ್ ಜೊತೆಗೆ ಹಲವು ನೌಕೆಗಳನ್ನು ಬಳಕೆ ಮಾಡಲು ಚಿಂತನೆ ನಡೆದಿದೆ. ಆರೋಗ್ಯ ಇಲಾಖೆ ಹಾಗೂ ನಾಗರೀಕ ವಿಮಾನಯಾನ ಸಚಿವಾಲಯ ಈ ಕುರಿತು ನಿಯಮಾವಳಿಗಳನ್ನು ರೂಪಿಸಿದೆ. ವಿದೇಶದಿಂದ ತಾಯ್ನಾಡಿಗೆ ಮರಳುವ ಪ್ರತಿಯೊಬ್ಬರನ್ನೂ ಕೂಡ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಕೊರೊನಾ ಸೋಂಕಿನ ಲಕ್ಷಣಗಳು ಇಲ್ಲದವರನ್ನು ಮಾತ್ರವೇ ಪ್ರಯಾಣಕ್ಕೆ ಅವಕಾಶಕಲ್ಪಿಸಲಾಗುತ್ತದೆ. ಈ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ.

ವಿದೇಶಗಳಿಂದ ಮರಳುವವರ ಪರೀಕ್ಷೆ, ಕ್ವಾರಂಟೈನ್ ವೆಚ್ಚವನ್ನು ರಾಜ್ಯಸರಕಾರಗಳೇ ಭರಿಸುವಂತೆ ಕೇಂದ್ರ ಸರಕಾರ ಸೂಚನೆಯನ್ನು ನೀಡಿದೆ. ವಿದೇಶಗಳಿಂದ ಮರಳುವವರನ್ನು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಿಸಲಾಗುತ್ತದೆ. 14 ದಿನಗಳ ನಂತರ ಆರೋಗ್ಯ ತಪಾಸಣೆಯನ್ನು ನಡೆಸಿಯೇ ಅವರನ್ನು ಮನೆಗೆ ಕಳುಹಿಸಲು ಪ್ಲ್ಯಾನ್ ರೂಪಿಸಲಾಗಿದೆ.

ಅಲ್ಲದೇ ಪ್ರತಿಯೊಬ್ಬರ ಮೇಲೂ ನಿಗಾ ಇರಿಸುವ ನಿಟ್ಟಿನಲ್ಲಿ ಆರೋಗ್ಯ ಸೇತು ಆ್ಯಪ್ ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಕುರಿತು ಕೇಂದ್ರ ಸರಕಾರ ಅಧಿಕೃತವಾಗಿ ಮಾಹಿತಿಯನ್ನು ಪ್ರಕಟಿಸುವ ಸಾಧ್ಯತೆಯಿದೆ.

Leave A Reply

Your email address will not be published.