ಅರಬ್ ರಾಷ್ಟ್ರಗಳಲ್ಲಿ ಅತಂತ್ರರಾದ ಭಾರತೀಯರು : ನಿಮ್ಮ ಪ್ರಜೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಿ ಎಂದ ಯುಎಇ

0

ದುಬೈ : ಕೊರೊನಾ ಹೊಡೆತಕ್ಕೆ ಗಲ್ಪ್ ರಾಷ್ಟ್ರಗಳು ತತ್ತರಿಸಿ ಹೋಗಿವೆ. ಕೊರೊನಾ ಸೋಂಕು ಇನ್ನಷ್ಟು ವ್ಯಾಪಕವಾಗಿ ಹರಡೋ ಭೀತಿಯ ನಡುವಲ್ಲೇ ಗಲ್ಪ್ ರಾಷ್ಟ್ರಗಳಲ್ಲಿ ನೆಲೆಸಿರೊ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈಗಾಗಲೇ ದುಬೈ, ಅಜ್ಮಾನ್, ಫುಜೈರಾ, ರಸಲ್ ಖೈಮಾ, ಶಾರ್ಜಾ, ಉಮಲ್ ಖ್ವೈನ್,ಅಬುದಾಬಿಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ರಾಷ್ಟ್ರಗಳು ಕೂಡಲೇ ತಮ್ಮ ದೇಶದ ಪ್ರಜೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುವಂತೆ ಯುಎಇ ತಾಕೀತು ಮಾಡಿದೆ. ಇನ್ನು ಕುವೈತ್ ಉದ್ಯೋಗಿಗಳಿಗೆ ವಿಆರ್ ಎಸ್ ಆಫರ್ ನೀಡಿದೆ.

ಗಲ್ಪ್ ರಾಷ್ಟ್ರಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಬದುಕುಕಟ್ಟಿಕೊಂಡಿದ್ದಾರೆ. ಕುವೈತ್ ಹಾಗೂ ಯುಎಇ ನಲ್ಲಿ ಬರೋಬ್ಬರಿ 34 ಲಕ್ಷದಷ್ಟು ಭಾರತೀಯರು ವಿವಿಧ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಯುಎಇಯಲ್ಲಿರುವ ಭಾರತೀಯ ಪೈಕಿ ಶೇ.30 ರಷ್ಟು ಕೇರಳಿಗರಿದ್ದಾರೆ.

ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ಹಲವು ಜನರು ದುಬೈನಲ್ಲಿ ನೆಲೆಸಿದ್ದಾರೆ. ಇದೀಗ ಕೊರೊನಾ ಹಿನ್ನೆಲೆಯಲ್ಲಿ ಭಾರತೀಯರನ್ನು ತಮ್ಮ ದೇಶಕ್ಕೆ ವಾಪಾಸ್ ಕರೆಯಿಸಿಕೊಳ್ಳಬೇಕು. ಇಲ್ಲವಾದಲ್ಲಿ ಕಾರ್ಮಿಕ ನೀತಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿರ್ಬಂಧನಾ ಕ್ರಮಗಳನ್ನು ಕೈಗೊಳ್ಳುವುದಾಗಿ ಯುಎಇ ಭಾರತಕ್ಕೆ ಬೆದರಿಕೆಯನ್ನು ಒಡ್ಡಿದೆ.

ಸ್ವದೇಶಕ್ಕೆ ಮರಳಲು ಬಯಸುವ ಖಾಸಗಿ ವಲಯದ ವಲಸಿಗರನ್ನು ಆಯಾಯಾ ರಾಷ್ಟ್ರಗಳು ಶೀಘ್ರದಲ್ಲಿಯೇ ವಾಪಾಸ್ ಕರೆಯಿಸಿಕೊಳ್ಳಬೇಕು. ಈ ನಿಯಮಕ್ಕೆ ನಿರಾಕರಿಸುವ ರಾಷ್ಟ್ರಗಳೊಂದಿಗಿನ ಕಾರ್ಮಿಕ ಸಂಬಂಧವನ್ನು ಪರಿಶೀಲಿಸಲಾಗುವುದು ಮತ್ತು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸುವುದರ ಜೊತೆಗೆ ಭವಿಷ್ಯದ ನೇಮಕಾತಿಗಳಿಗೆ ನಿರ್ಬಂಧ ವಿಧಿಸಲಾಗುವುದು ಎಂದು ಎಚ್ಚರಿಸಿದೆ.

ತಮ್ಮ ರಾಷ್ಟ್ರಗಳ ಪ್ರಜೆಗಳನ್ನು ವಾಪಾಸ್ ಕರೆಯಿಸಿಕೊಳ್ಳುವ ಕುರಿತು ಯುಎಇ ಈಗಾಗಲೇ ಭಾರತದ ವಿದೇಶಾಂಗ ವ್ಯವಹಾರ ಮತ್ತು ಅಂತರಾಷ್ಟ್ರೀಯ ಸಹಕಾರ ಸಚಿವಾಲಯ, ಯುಎಇಯ ಭಾರತೀಯ ಮಿಷನ್ ಸೇರಿದಂತೆ ಎಲ್ಲಾ ರಾಯಭಾರ ಕಚೇರಿಗಳಿಗೆ ಟಿಪ್ಪಣಿ ಕಳುಹಿಸಲಾಗಿದೆ ಎಂದು ಭಾರತದ ಯುಎಇ ರಾಯಭಾರಿ ಅಹ್ಮದ್ ಅಬ್ದುಲ್ ರಹಮಾನ್ ಅಲ್ ಬನ್ನಾ ತಿಳಿಸಿರುವುದಾಗಿ ಗಲ್ಪ್ ನ್ಯೂಸ್ ವರದಿ ಮಾಡಿದೆ.

ಇನ್ನು ಕುವೈತ್ ಕೂಡ ಅತೀ ಹೆಚ್ಚು ಸಂಖ್ಯೆಯಲ್ಲಿ ಭಾರತೀಯರು ನೆಲೆಸಿದ್ದಾರೆ. ಕುವೈತ್ ಸರಕಾರ ವಿದೇಶಿಗರ ವೀಸಾ ಅವಧಿಯನ್ನು ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡುವುದಿಲ್ಲ ಎಂದಿದೆ. ವೀಸಾ ಅವಧಿ ಮುಗಿಯುವವರು ಎಪ್ರಿಲ್ 30ರ ಒಳಗಾಗಿ ಕುವೈತ್ ತೊರೆಯುವಂತೆ ವಾರ್ನಿಂಗ್ ನೀಡಿದೆ.

ಇನ್ನೊಂದೆಡೆ ಕುವೈತ್ ಕಂಪೆನಿಗಳು ಈಗಾಗಲೇ ವಿದೇಶಿಗರಿಗೆ ವಿಆರ್ ಎಸ್ ಆಫರ್ ನೀಡಿದೆ. ಅದರಲ್ಲೂ ಕುವೈತ್ ನ ಪ್ರತಿಷ್ಠಿತ ಕಂಪೆನಿಯಾಗಿರುವ ಎಂ.ಎಚ್. ಅಲ್ಶಯಾ ವಿಆರ್ ಎಸ್ ಪಡೆಯುವ ಉದ್ಯೋಗಿಗಳಿಗೆ ಮುಂಗಡವಾಗಿ ಮೂರು ತಿಂಗಳ ವೇತನ ನೀಡುವುದಾಗಿ ಘೋಷಣೆ ಮಾಡಿದೆ.

ಕೊರೊನಾ ಸೋಂಕು ಇನ್ನಷ್ಟು ಹೆಚ್ಚಳವಾದ್ರೆ ಕುವೈತ್ ನಲ್ಲಿರೋ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಒಟ್ಟಿನಲ್ಲಿ ಬದುಕು ಕಟ್ಟಿಕೊಳ್ಳುವುದಕ್ಕೆ ಗಲ್ಪ್ ರಾಷ್ಟ್ರಗಳಿಗೆ ತೆರಳಿರೋ ಭಾರತೀಯರು ಅತಂತ್ರರಾಗೋ ಆತಂಕ ಎದುರಾಗಿದೆ. ಗಲ್ಪ್ ರಾಷ್ಟ್ರಗಳು ಭಾರತೀಯರನ್ನ ಕಡ್ಡಾಯವಾಗಿ ದೇಶಗಳಿಂದ ಹೊರಹಾಕುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಗಮನಹರಿಸಬೇಕಾದ ಅನಿವಾರ್ಯತೆಯೂ ಇದೆ.

Leave A Reply

Your email address will not be published.