ಗಣರಾಜ್ಯೋತ್ಸವದ ಮಹತ್ವ ನಿಮಗೆಷ್ಟು ಗೊತ್ತು ? ಹೇಮಂತ್‌ ಚಿನ್ನು ಅವರ ಬರಹವನ್ನು ಓದಿ

ಹೇಮಂತ್ ಚಿನ್ನು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ಬರಹಗಾರರಾಗಿ, ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಗಣರಾಜ್ಯೋತ್ಸವದ ಮಹತ್ವ, ಆಚರಣೆ, ಇತಿಹಾಸದ ಬಗ್ಗೆ ವಿಸ್ತ್ರತವಾದ ಲೇಖನವನ್ನು ಬರೆದಿದ್ದಾರೆ.

importance of Republic Day : ಜನವರಿ 26 ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಲ್ಪಡಬಹುದಾದ ಮಹತ್ವಪೂರ್ಣ ದಿನವಾಗಿದೆ. ಇಂದು ಭಾರತದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ.  ನಮ್ಮ ಭಾರತ ದೇಶ ಬಹಳ ಶ್ರೀಮಂತ ಹಾಗೂ ಸಮೃದ್ಧಿಯ ಬೀಡಾಗಿತ್ತು. ಭಾರತದಲ್ಲಿ ತುಂಬಿ ತುಳುಕುತ್ತಿದ್ದ ಚಿನ್ನ ಬೆಳ್ಳಿ ವಜ್ರ ವೈಡೂರ್ಯ ಸಾಂಬಾರ ಪದಾರ್ಥಗಳನ್ನು ಕಂಡು ಆಕರ್ಷಿತರಾಗಿ ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಬ್ರಿಟಿಷರು ಭಾರತೀಯ ರಾಜರುಗಳಲ್ಲಿದ್ದ ಒಡಕುಗಳನ್ನು ತನ್ನ ಬಂಡವಾಳ ಆಗಿಸಿಕೊಂಡು ರಾಜರುಗಳ ನಡುವೆ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಾ ಒಂದೊಂದೆ ಸಾಮ್ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಭಾರತದಲ್ಲಿ ಬ್ರಿಟಿಷ್ ಅಧಿಪತ್ಯ ಸ್ಥಾಪಿಸಿದರು. ಭಾರತೀಯರನ್ನು ಅವರದೇ ನೆಲದಲ್ಲಿ ಗುಲಾಮರನ್ನಾಗಿ ಮಾಡಿಕೊಂಡರು.

ಹಲವಾರು ದೇಶಭಕ್ತರ ತ್ಯಾಗ ಬಲಿದಾನ ಹೋರಾಟಗಳ ಫಲವಾಗಿ ಭಾರತಕ್ಕೆ ಆಗಸ್ಟ್ 15 .1947 ರಂದು ಸ್ವಾತಂತ್ಯ ದೊರೆಯಿತು. ಬ್ರಿಟಿಷ್ ಅಧಿಪತ್ಯ ಕೊನೆಗೊಂಡಿತು. ಕೆಂಪುಕೋಟೆಯ ಮೇಲೆ ಭಾರತದ ತ್ರಿವರ್ಣಧ್ವಜ ಹಾರಲ್ಪಟ್ಟಿತು. ಬಹುದಿನಗಳಿಂದ ಭಾರತೀಯರು ಕಂಡ ಕನಸು ನನಸಾಯಿತು. ಆದರೆ ಸ್ವಾತಂತ್ಯ್ರದ ಸವಿಯನ್ನು ಸವಿಯುತ್ತಿರುವಾಗಲೇ ಹಲವಾರು ಸಮಸ್ಯೆಗಳು ಉದ್ಭವಿಸಿದವು. ಅವುಗಳಲ್ಲಿ ರಾಜ್ಯಾಂಗ ನಿರ್ಮಾಣದ ವ್ಯವಸ್ಥೆಯು ಒಂದು.

ಗಣರಾಜ್ಯಗಳ ಮಾನ್ಯತೆ ಸಾಧಿಸುವುದು ಅನಿವಾರ್ಯವಾಯಿತು. ಆ ಸಂದರ್ಭದಲ್ಲಿ ಭಾರತದಲ್ಲಿ 552 ರಾಜಸಂಸ್ಥಾನಗಳು ಬ್ರಿಟಿಷರ ನೇರ ಆಳ್ವಿಕೆಗೆ ಒಳಪಟ್ಟ ಪ್ರಾಂತ್ಯಗಳಿದ್ದು ಪ್ರತಿಯೊಂದು ರಾಜ ಸಂಸ್ಥಾನಗಳು ಸ್ವಾತಂತ್ರ್ಯ ಘೋಷಿಸಿಕೊಳ್ಳಲು ಹವಣಿಸುತ್ತಿದ್ದವು. ಇಂತಹ ಸಂದರ್ಭದಲ್ಲಿ ಇಡೀ ದೇಶಕ್ಕೆ ಅನ್ವಯವಾಗುವಂತಹ ಏಕರೂಪದ ಕಾನೂನುಗಳ ಸಂಹಿತೆಯ ಅಗತ್ಯವಾಯಿತು. ಫಲಶೃತಿಯಾಗಿ ಜನವರಿ 26 ರಂದು ನಮ್ಮ ಸಂವಿಧಾನ ಜಾರಿಗೆ ಬಂದಿತು. ಅಂದರೆ ಭಾರತ ಗಣರಾಜ್ಯವಾಯಿತು.

ಆ ದಿನವೇ ಗಣರಾಜ್ಯೋತ್ಸವ.ಪ್ರತಿವರ್ಷ ನಾವು ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ. ಗಣರಾಜ್ಯ ಎಂದರೆ ಹೀಗೆ ಹೇಳಲಾಗುತ್ತದೆ ಗಣ ಎಂದರೆ ಜನಗಳು, ರಾಜ್ಯ ಎಂದರೆ ಆಳ್ವಿಕೆ. ಅಂದರೆ ಜನಗಳ ಆಳ್ವಿಕೆಯೇ ಗಣರಾಜ್ಯವಾಗಿದೆ.ಈ ರೀತಿಯಾಗಿ ತನ್ನ ದೇಶದ ಜನರ ಆಶೋತ್ತರಗಳನ್ನು ಕಾಳಜಿಪೂರಕವಾಗಿ ನೋಡಿಕೊಳ್ಳುವ ಸರ್ವಸ್ವತಂತ್ರ್ಯ ದೇಶವನ್ನು ಗಣರಾಜ್ಯ ಎನ್ನುತ್ತೇವೆ.ಗಣರಾಜ್ಯದ ಮತ್ತೊಂದು ಹೆಸರೆ ಪ್ರಜಾಪ್ರಭುತ್ವವಾಗಿದ್ದು ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ಸರ್ಕಾರಿ ಪದ್ದತಿಯೇ ಪ್ರಜಾಪ್ರಭುತ್ವವಾಗಿದೆ. ಗಣರಾಜ್ಯ ವ್ಯವಸ್ಥೆಯುಲ್ಲಿ ಜನರೇ ಜನಪ್ರತಿನಿಧಿಗಳನ್ನು ಚುನಾಯಿಸುವ ಮೂಲಕ ಸರಕಾರವನ್ನು ರಚಿಸುತ್ತಾರೆ.

Horoscope Today 26 January Zodiac Sign Republic day
Image Credit to Original Source

ಜನಪ್ರತಿನಿಧಿಗಳು ಜನರ ಪರವಾಗಿ ಕೆಲಸ ಮಾಡುತ್ತಾರೆ. ಒಂದು ರಾಷ್ಟ್ರವನ್ನು ಒಂದೇ ಚೌಕಟ್ಟಿನಲ್ಲಿ ಹೇಗೆ ನಿಯಂತ್ರಣ ಮಾಡಬೇಕು ಎನ್ನುವುದನ್ನು ತಿಳಿಸಿಕೊಡುವ ಕಾನೂನುಗಳ ಸಂಗ್ರಹವನ್ನು ಸಂವಿಧಾನ ಎನ್ನುತ್ತೇವೆ. ಅಂದರೆ ಒಂದು ದೇಶವು ಅನುಸರಿಸುವ ಮೂಲಭೂತ ಕಾನೂನನ್ನು ಸಂವಿಧಾನ ಎನ್ನಬಹುದು. ಸಂವಿಧಾನವು ಸರ್ಕಾರದ ಮಾರ್ಗಸೂಚಕವಾಗಿರುತ್ತದೆ. ಸಂವಿಧಾನ ರಚನಾ ಸಭೆ ಪ್ರಥಮ ಬಾರಿಗೆ 1946 ಡಿಸೆಂಬರ್ 9 ರಂದು ಸಭೆ ಸೇರಿತು.

ಸಂವಿಧಾನ ಸಭೆಯ ಅಧ್ಯಕ್ಷರನ್ನಾಗಿ ಡಾ: ಬಾಬು ರಾಜೇಂದ್ರ ಪ್ರಸಾದ್. ಉಪಾಧ್ಯಕ್ಷರನ್ನಾಗಿ ಹೆಚ್.ಸಿ. ಮುಖರ್ಜಿ ಎ.ಟಿ. ಕೃಷ್ಣಮಾಚಾರಿಯವರನ್ನು ಆಯ್ಕೆ ಮಾಡಲಾಯಿತು. ಈ ಸಮಿತಿಯು ಈಗಿರುವ ಸಂವಿಧಾನ ರಚಿಸಲು 22 ವಿವಿಧ ಸಮಿತಿಗಳನ್ನು ಹಾಗೂ 5 ಉಪಸಮಿತಿಗಳನ್ನು ನೇಮಿಸಿದವು. ಈ ಸಮಿತಿಗಳು ಸಂವಿಧಾನದ ವಿಷಯಗಳನ್ನು ಪರಿಶೀಲನೆ ಮಾಡಿದವು.ಪ್ರಮುಖವಾದ ಸಮಿತಿಗಳೆಂದರೆ.

  • ರಾಷ್ಟ್ರಧ್ವಜ ಸಮಿತಿ.
  • ನಿಯಮ ರಚನಾ ಸಮಿತಿ.
  • ಚಾಲನಾ ಸಮಿತಿ.
  • ಹಣಕಾಸು ವಿಚಾರಗಳ ಸಮಿತಿ.

ಈ ನಾಲ್ಕು ಸಮಿತಿಗಳ ಅಧ್ಯಕ್ಷರನ್ನಾಗಿ ಬಾಬು ರಾಜೇಂದ್ರ ಪ್ರಸಾದ್ ರನ್ನು ಆಯ್ಕೆ ಮಾಡಲಾಯಿತು.

ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಡಾ: ಬಿ.ಆರ್. ಅಂಬೇಡ್ಕರ್ ರವರು.
ರಾಜ್ಯಗಳ ಸಮಿತಿಯ ಅಧ್ಯಕ್ಷರಾಗಿ ಜವಹರ್ ಲಾಲ್ ನೆಹರುರವರು.
ಮೂಲಭೂತ ಹಕ್ಕುಗಳು ಮತ್ತು ಅಲ್ಪಸಂಖ್ಯಾತ ಸಮಿತಿಯ ಅಧ್ಯಕ್ಷರಾಗಿ
ಸರ್ದಾರ್ ವಲ್ಲಭ ಬಾಯಿ ಪಟೇಲ್ ರವರು.

  • ಭಾಷಾವಾರು ಪ್ರಾಂತ್ಯಗಳ ಸಮಿತಿ
  • ಹಿಂದಿ ಭಾಷಾವಾರು ಸಮಿತಿ
  • ಉರ್ದು ಭಾಷಾಂತರ ಸಮಿತಿ ಪ್ರೆಸ್ ಗ್ಯಾಲರಿ ಮುಂತಾದ ಅನೇಕ ಸಮಿತಿಗಳನ್ನು ರಚಿಸಿದರು.

ಈ ಸಮಿತಿಗಳು ತಮ್ಮ ಕರಡನ್ನು 1949 ನವಂಬರ್ 26 ರಂದು ಸಲ್ಲಿಸಿದವು. ಈ ಕಾರ್ಯ ಪೂರೈಸಲು ಸಂವಿಧಾನ ಸಭೆ 2 ವರ್ಷ 11 ತಿಂಗಳು 18 ದಿನಗಳನ್ನು ತೆಗೆದುಕೊಂಡಿತು. 1949 ರ ನವಂಬರ್ 26 ರಂದು ಸಂವಿಧಾನ ಸಭೆಯಿಂದ ಇದು ಅಂಗೀಕಾರವಾಯಿತು. ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳೆರಡರಲ್ಲಿ 200 ಪ್ರತಿಗಳನ್ನು ತಯಾರಿಸಿದರು.1950 ಜನವರಿ 24 ರಂದು ಈ ಪ್ರತಿಗಳನ್ನು ನೀಡಿದರು.

ಅಂತಿಮವಾಗಿ 1950 ಜನವರಿ 26 ರಂದು ಸಂವಿಧಾನ ಜಾರಿಗೆ ಬಂದಿತು. ಅದರ ಸವಿನೆನಪಿಗಾಗಿ ಪ್ರತಿವರ್ಷ ಜನವರಿ 26 ನ್ನು ಗಣರಾಜ್ಯ ದಿನವಾಗಿ ಆಚರಿಸಲಾಗುವುದು. ದೇಶಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿರುವ ಮಹಾತ್ಮರಿಗಾಗಿ ಇಂದು ಪದ್ಮಶ್ರಿ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನು, ಶೌರ್ಯ ಪ್ರಶಸ್ತಿಗಳನ್ನು ನೀಡಲಾಗುವುದು.

ಅಂದು ರಾಷ್ಟ್ರದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಗಳು ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ. ರಾಜಪಥ್ ದಲ್ಲಿ ಸಶಸ್ತ್ರ ಪಡೆಗಳ ಕವಾಯತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳು ಇರುತ್ತವೆ. ಪ್ರತಿವರ್ಷವೂ ವಿದೇಶಿಯರೊಬ್ಬರು ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳುತ್ತಾರೆ. ಭಾರತ ಸಂವಿಧಾನವನ್ನು ಜನವರಿ 26 ರಂದೆ ಅಂಗಿಕರಿಸಿ ಗಣರಾಜ್ಯೋತ್ಸವ ಆಚರಿಸಲು ಪ್ರಮುಖ ಕಾರಣವೆಂದರೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೇಸ್ ಲಾಹೋರ್ ಅಧಿವೇಶನದಲ್ಲಿ ಪೂರ್ಣಸ್ವರಾಜ್ಯದ ಮಸೂದೆಯನ್ನು ಅಂಗಿಕರಿಸಿತ್ತು. ಅದರ ಪ್ರಯುಕ್ತ ಜನವರಿ 26 ವಿಶೇಷ ದಿನವಾಗಿದೆ.

ಸಂವಿಧಾನ ರಚನಾ ವಿಧಾನಗಳ ಬಗ್ಗೆ ತಿಳಿಯುವುದಾದರೆ ಡಾ: ಬಿ.ಆರ್. ಅಂಬೇಡ್ಕರ್ ಸಂವಿಧಾನ ಕರಡು ರಚನಾ ಸಭೆಯ ಅಧ್ಯಕ್ಷರಾಗಿದ್ದರು. ಅಲ್ಲದೇ ಸದಸ್ಯರಾಗಿ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಎಸ್.ಎನ್. ಮುಖರ್ಜಿ, ಮಾದವರಾವ್, ಬೆನಗಲ್ ನರಸಿಂಹರಾವ್, ಸಯ್ಯದ್ ಮಹಮದ್ ಸಾದಿಲ್ಲಾ ಮುಂತಾದವರು ಪ್ರಮುಖರಾಗಿದ್ದಾರೆ. ಇವರು ಜಗತ್ತಿನ ವಿವಿಧ ರಾಷ್ಟ್ರಗಳ ಸಂವಿಧಾನವನ್ನು ಅಧ್ಯಯನ ಮಾಡಿ ಅವುಗಳಲ್ಲಿರುವ ಉತ್ತಮ ಅಂಶಗಳನ್ನು ಕ್ರೂಢಿಕರಿಸಿ ನಮ್ಮ ದೇಶದ ಜನರ ಭಾವನೆಗಳು ಪರಿಸ್ಥಿತಿಗೆ ಹೊಂದಿಕೆಯಾಗುವಂತೆ ನಮ್ಮ ಸಂವಿಧಾನದಲ್ಲಿ ಅಳವಡಿಸಲಾಗಿದೆ.

Horoscope Today 26 January Zodiac Sign Republic day
Image Credit to Original Source

ಲಿಖಿತ ಸಂವಿಧಾನ, ಸರ್ವೋಚ್ಛ ನ್ಯಾಯಾಲಯ, ಮೂಲಭೂತ ಹಕ್ಕುಗಳನ್ನು ಅಮೇರಿಕ ಸಂಯುಕ್ತ ಸಂಸ್ಥಾನದಿಂದ ಸರ್ವೋಚ್ಛ ನ್ಯಾಯಾಲಯಗಳ ವ್ಯಾಪ್ತಿ, ಏಕಪೌರತ್ವ, ಸಂಸದೀಯ ರೂಪದ ಸರ್ಕಾರ, ಸಂವಿಧಾನಾತ್ಮಕ ಕಾರ್ಯಾಂಗದ ವಿಷಯಗಳನ್ನು ಬ್ರಿಟನ್ ಸಂವಿಧಾನದಿಂದ, ರಾಜ್ಯ ನಿರ್ದೇಶಕ ತತ್ವಗಳು ರಾಷ್ಟ್ರಪತಿ ಚುನಾವಣಾ ವಿಧಿವಿಧಾನಗಳನ್ನು ಐರ್ ಲ್ಯಾಂಡ್ ಸಂವಿಧಾನದಿಂದ ಕೇಂದ್ರ ಮತ್ತು ರಾಜ್ಯಗಳ ಅಧಿಕಾರ ವ್ಯವಸ್ಥೆಯ ಬಗ್ಗೆ ಕೆನಡಾ ಸಂವಿಧಾನದಿಂದ ಪಡೆಯಲಾಗಿದೆ.

ಆಸ್ಟ್ರೇಲಿಯ ಸಂವಿಧಾನದಿಂದ ಕೇಂದ್ರಪಟ್ಟಿ, ರಾಜ್ಯಪಟ್ಟಿ, ಸಮವರ್ತಿಪಟ್ಟಿಗಳು, ಸಂಸದೀಯ ವಿಶೇಷ ಅಧಿಕಾರ, ವ್ಯಾಪಾರ- ವಾಣಿಜ್ಯ ವಿಷಯಗಳನ್ನು ಪಡೆಯಲಾಗಿದೆ. ಇನ್ನು ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ರಷ್ಯಾದಿಂದಲೂ, ತುರ್ತು ಪರಿಸ್ಥಿತಿ ಅಧಿಕಾರಗಳನ್ನು ಜರ್ಮನಿಯಿಂದಲೂ. ಸಂವಿಧಾನ ತಿದ್ದುಪಡಿ ಅಧಿಕಾರಗಳನ್ನು ದಕ್ಷಿಣ ಆಪ್ರಿಕಾದಿಂದಲೂ ಪಡೆಯಲಾಗಿದೆ.

ಸಂವಿಧಾನ ರಚನೆಯಲ್ಲಿ ಡಾ: ಬಿ.ಆರ್. ಅಂಬೇಡ್ಕರ್ ರವರ ಸೇವೆ ಅಮೋಘ ಹಾಗೂ ಅಪಾರವಾದುದು. ಅವರ ಅವಿರಥ ಪರಿಶ್ರಮದ ಫಲವೇ ನಮ್ಮ ಸಂವಿಧಾನ. ಆದುದರಿಂದ ಡಾ: ಬಿ.ಆರ್. ಅಂಬೇಡ್ಕರ್ ರವರನ್ನು ಭಾರತ ಸಂವಿಧಾನದ ಶಿಲ್ಪಿ ಎಂದು ಕರೆಯಲಾಗಿದೆ.ಭಾರತ ಸಂವಿಧಾನ ಮೂಲತಃ 395 ಅನುಚ್ಛೇದಗಳು, ( ವಿಧಿಗಳು) 22 ಭಾಗಗಳು ಹಾಗೂ 8 ಅನುಸೂಚಿಗಳನ್ನು ಹೊಂದಿದ್ದು ಪ್ರಸಕ್ತ ಭಾರತ ಸಂವಿಧಾನ 444 ಅನುಚ್ಛೇದಗಳು, 24 ಭಾಗಗಳು ಹಾಗೂ 12 ಅನುಸೂಚಿಗಳನ್ನು ಒಳಗೊಂಡ ವಿಶ್ವದ ಬೃಹತ್ ಲಿಖಿತ ಸಂವಿಧಾನವಾಗಿದೆ.

ನಮ್ಮ ಸಂವಿಧಾನದ ಹೃದಯಭಾಗವೆಂದರೆ ಅದರ ಪೂರ್ವಪೀಠಿಕೆ ಅಥವಾ ಪ್ರಸ್ತಾವನೆ. ನಮ್ಮ ಸಂವಿಧಾನದ ಪ್ರಸ್ತಾವನೆ ಹೀಗಿದೆ. ಭಾರತದ ಪ್ರಜೆಗಳಾದ ನಾವು , ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಪ್ರಜಾಸತಾತ್ಮಕ ಗಣರಾಜ್ಯವಾಗಿ ರಚಿಸಲು ಮತ್ತು ಅದರ ಸಮಸ್ತ ಪೌರರಿಗೆ : ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ; ವಿಚಾರ, ಅಭಿವ್ಯಕ್ತಿ, ನಂಬಿಕೆ ಮತ್ತು ಆರಾಧನಾ ಸ್ವಾತಂತ್ರ್ಯ ; ಸ್ಥಾನಮಾನ ಮತ್ತು ಅವಕಾಶ ಸಮಾನತೆ ; ಹಾಗೂ ಇವುಗಳು ದೊರೆಯುವಂತೆ ಮಾಡಲು: ವ್ಯಕ್ತಿ ಗೌರವವನ್ನು , ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಸುನಿಶ್ಚಿತಗೊಳಿಸಿ ಅವರಲ್ಲಿ ಭ್ರಾತೃಭಾವನೆಯನ್ನು ವೃದ್ಧಿಗೊಳಿಸಲು ಶ್ರದ್ಧಾಪೂರ್ವಕ ಸಂಕಲ್ಪ ಮಾಡಿ.

ನಮ್ಮ ಸಂವಿಧಾನ ಸಭೆಯಲ್ಲಿ 1949 ರ ನವಂಬರ್ 26 ರ ಈ ದಿವಸದಂದು ದೃಡಸಂಕಲ್ಪ ಮಾಡಿ ಈ ಸಂವಿಧಾನವನ್ನು ಅಂಗೀಕರಿಸಿ, ನಮಗೆ ಅರ್ಪಿಸಿಕೊಂಡಿದ್ದೇವೆ.ನಮ್ಮ ಸಂವಿಧಾನವು ದೇಶದ ಮೂಲಭೂತ ಕಾನೂನು ಆಗಿದ್ದು ರಾಷ್ಟ್ರಪತಿ ಪ್ರಧಾನಮಂತ್ರಿ ಸಂಸತ್ ಸದಸ್ಯರು ನ್ಯಾಯಾದೀಶರು ಅಧಿಕಾರಿ ವರ್ಗ ಹಾಗೂ ಪ್ರಜೆಗಳೆಲ್ಲರೂ ಸಂವಿಧಾನದ ಪಾಲನೆ ಮಾಡುವುದು ಕಡ್ಡಾಯ ವಾಗಿರುತ್ತದೆ. ನ್ಯಾಯಾಲಯಗಳು ಸಂವಿಧಾನದ ರಕ್ಷಕರಾಗಿ ಕೆಲಸ ಮಾಡುತ್ತವೆ.

  • ನಮ್ಮ ಸಂವಿಧಾನದ ಪ್ರಮುಖ ಲಕ್ಷಣಗಳೆಂದರೆ
  • ಬೃಹತ್ ಲಿಖಿತ ಸಂವಿಧಾನ
  • ಗಣರಾಜ್ಯ
  • ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು
  • ಜ್ಯಾತ್ಯಾತೀತತೆ
  • ಸ್ವತಂತ್ರ ನ್ಯಾಯಾಂಗ
  • ವಯಸ್ಕ ಮತದಾನ ಪದ್ಧತಿ
  • ಚುನಾವಣಾ ಪದ್ಧತಿ
  • ರಾಜ್ಯನಿರ್ಧೇಶಕ ತತ್ವಗಳು
  • ಸಂವಿಧಾನ ತಿದ್ದುಪಡಿಗೆ ಅವಕಾಶ
  • ಸಾರ್ವಭೌಮತೆ
  • ಸಮಾಜವಾದ.

ಭಾರತ ಸಂವಿಧಾನವು ತನ್ನ ಪ್ರಜೆಗಳಿಗೆ ಈ ಕೆಳಗಿನ ಮೂಲಭೂತ ಹಕ್ಕುಗಳನ್ನು ನೀಡಿದೆ.
1. ಸಮಾನತೆಯ ಹಕ್ಕು
2. ಸ್ವಾತಂತ್ರ್ಯದ ಹಕ್ಕು
3. ಶೋಷಣೆಯ ವಿರುದ್ಧದ ಹಕ್ಕು
4. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು
5. ಸಾಂಸ್ಕ್ರೃತಿಕ ಮತ್ತು ಶೈಕ್ಷಣಿಕ ಹಕ್ಕು.
6. ಸಂವಿಧಾನಾತ್ಮಕ ಪರಿಹಾರಗಳ ಹಕ್ಕು

ಈ ಮೂಲಭೂತ ಹಕ್ಕುಗಳು ಭಾರತದ ನಾಗರಿಕರಿಗೆ ಸಂವಿಧಾನದಿಂದ ನೇರವಾಗಿ ನೀಡಲ್ಪಟ್ಟಿದ್ದು ಇವುಗಳನ್ನು ಸಂಸತ್ತಾಗಲಿ, ವಿಧಾನಸಭೆ ಕಾನೂನಿನ ಮೂಲಕವಾಗಿ ಅಧಿಕಾರಿ ವರ್ಗ, ಪೋಲಿಸರು ಸೇರಿದಂತೆ ಯಾವುದೇ ಸಾರ್ವಜನಿಕ ಸಂಸ್ಥೆಗಳು ಅವುಗಳನ್ನು ಮೊಟಕುಗೊಳಿಸುವುದು ಅಥವಾ ಉಲ್ಲಂಘಿಸುವುದು ನಿಷಿದ್ಧವಾಗಿದೆ.

ಮೂಲಭೂತ ಹಕ್ಕುಗಳ ಉಲ್ಲಂಘನೆಯಾದರೆ ಅನ್ಯಾಯಕ್ಕೆ ಒಳಗಾದ ವ್ಯಕ್ತಿ ನ್ಯಾಯಾಲಯದಲ್ಲಿ ಪ್ರಶ್ನಿಸಿ ನ್ಯಾಯ ಪಡೆಯಬಹುದು. ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.ಭಾರತದ ಸಂವಿಧಾನವು ತನ್ನ ಪ್ರಜೆಗಳಿಗೆ ಮೂಲಭೂತ ಹಕ್ಕುಗಳ ಜೊತೆಗೆ ಮೂಲಭೂತ ಕರ್ತವ್ಯಗಳನ್ನು ನೀಡಿದೆ. ಅವೆಂದರೆ

  • ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರ ಗೀತೆಯನ್ನು ಗೌರವಿಸುವುದು.
  • ಸ್ವಾತಂತ್ರ್ಯ ಚಳುವಳಿಯ ಉನ್ನತ ಆದರ್ಶಗಳನ್ನು ಪಾಲಿಸುವುದು.
  • ಭಾರತದ ಏಕತೆಯನ್ನು ಗೌರವಿಸುವುದು.
  • ಮಾತೃಭೂಮಿಯನ್ನು ರಕ್ಷಿಸುವುದು.
  • ಭಾರತೀಯರೆಲ್ಲಾ ಒಂದೇ ಎಂಬ ಭಾವನೆ ಬೆಳೆಸಿಕೊಳ್ಳುವುದು.
  • ನಮ್ಮ ಸಂಸ್ಕೃತಿಕ ಪರಂಪರೆ ಹಾಗೂ ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವುದು.
  • ಪ್ರಾಕೃತಿಕ ಪರಿಸರನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವುದು.
  • ವೈಜ್ಜಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ಬೆಳೆಸುವುದು.
  • ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಹಾಗೂ ಹಿಂಸೆಯನ್ನು ತ್ಯಜಿಸುವುದು.
  • ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಗಳಲ್ಲಿ ಪ್ರಾವಿಣ್ಯತೆ ಪಡೆದು ದೇಶದ ಪ್ರಗತಿಗೆ ಶ್ರಮಿಸುವುದು.
  • 6 ರಿಂದ 14 ವಯಸ್ಸಿನ ಮಕ್ಕಳಿಗೆ ಶಿಕ್ಷಣ ಪಡೆಯುವ ಹಕ್ಕು ಒದಗಿಸಲಾಗಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಹಣ ಪಡೆಯಲು NPCI ಕಡ್ಡಾಯ : ಸರಕಾರದಿಂದ ಜಾರಿಯಾಯ್ತು ಹೊಸ ರೂಲ್ಸ್‌

ಮೂಲಭೂತ ಕರ್ತವ್ಯಗಳನ್ನು ಪ್ರಜೆಗಳು ಸ್ವಯಂ ಸ್ಫೂರ್ತಿಯಿಂದ ನಿರ್ವಹಿಸಬೇಕು. ಇವುಗಳನ್ನು ನಿರ್ವಹಿಸದಿದ್ದರೆ ಸರ್ಕಾರವು ಅದನ್ನು ನ್ಯಾಯಾಲಯ ದಲ್ಲಿ ಪ್ರಶ್ನಿಸುವಂತಿಲ್ಲಾ. ಇವುಗಳನ್ನು ರಾಜ್ಯನಿರ್ಧೇಶಕ ತತ್ವಗಳು ಎನ್ನುವರು.ಇವುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾನೂನು ರಚಿಸುವಾಗ ನೀತಿಗಳನ್ನು ರಚಿಸಿ ಜಾರಿಗೆ ತರುವಾಗ ಇವುಗಳನ್ನು ಪಾಲಿಸಬೇಕಾಗುತ್ತದೆ. ಪ್ರಮುಖವಾದ ರಾಜ್ಯ ನಿರ್ಧೇಶಕ ತತ್ವಗಳೆಂದರೆ.

  • ಸಾಮಾಜಿಕ ನ್ಯಾಯ
  • ದುರ್ಬಲರಿಗೆ ಸಾಮಾಜಿಕ ನ್ಯಾಯ
  • ಮಹಿಳೆ ಮತ್ತು ಮಕ್ಕಳ ಕಲ್ಯಾಣ
  • ಕಾರ್ಮಿಕ ಕಲ್ಯಾಣ
  • ಅಸಹಾಯಕರಿಗೆ ನೆರವು
  • ಸರ್ವರಿಗೂ ಸಮಾನ ಕಾನೂನು
  • ಮದ್ಯಪಾನ ನಿಷೇಧ
  • ಕೃಷಿ ಮತ್ತು ಪಶುಸಂಗೋಪನೆಯ ಸಂಘಟನೆ.
  • ಪರಿಸರ
  • ಐತಿಹಾಸಿಕ ಸ್ಮಾರಕಗಳ ರಕ್ಷಣೆ
  • ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ.

ಈ ರಾಜ್ಯನಿರ್ಧೇಶಕ ತತ್ವಗಳ ಉಲ್ಲಂಘನೆ ಆದರೆ ಯಾವುದೇ ಕಾರಣಕ್ಕೂ ನಾಗರೀಕರು ನ್ಯಾಯಾಲಯಗಳಲ್ಲಿ ದೂರು ಸಲ್ಲಿಸಲು ಅವಕಾಶವಿಲ್ಲಾ. ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ನಮ್ಮ ಸಂವಿಧಾನವನ್ನು ತಿದ್ದುಪಡಿ ಮಾಡಬಹುದು.ನಿರಂತರವಾಗಿ ನಡೆಯುವ ಸಾಮಾಜಿಕ ಬದಲಾವಣೆ ಹಾಗೂ ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಂವಿಧಾನಕ್ಕೆ ತಿದ್ದುಪಡಿಯ ಅವಶ್ಯಕತೆ ಇದೆ. ಇನ್ನು ಭಾರತದ ಸಂವಿಧಾನವನ್ನು ತಿದ್ದುಪಡಿಗೆ ಅವಕಾಶವಿದ್ದು, ಈ ಮೂರು ವಿಧಾನಗಳ ಮೂಲಕ ಮಾಡಬಹುದಾಗಿದೆ.

  • ಸರಳ ಬಹುಮತದ ತಿದ್ದುಪಡಿ ವಿಧಾನ.
  • ವಿಶೇಷ ಬಹುಮತದ ತಿದ್ದುಪಡಿ ವಿಧಾನ
  • ವಿಶೇಷ ಬಹುಮತದೊಂದಿಗೆ ಕನಿಷ್ಠ ಅರ್ಧದಷ್ಟು ರಾಜ್ಯಗಳ ಒಪ್ಪಿಗೆ ಪಡೆದು ತಿದ್ದುಪಡಿ ಮಾಡಲು ಅವಕಾಶವಿದೆ.

ಇದನ್ನೂ ಓದಿ : NPS To OPS : ಹಳೇ ಪಿಂಚಣಿ ಯೋಜನೆ ಜಾರಿ : ಕರ್ನಾಟಕ ಸರಕಾರದಿಂದ ಅಧಿಕೃತ ಆದೇಶ

ಒಟ್ಟಾರೆ ಹೇಳುವುದಾದರೆ ಸಂವಿಧಾನ ಎಂಬುದು ಐಕ್ಯ ಗಣರಾಜ್ಯಗಳ ಒಕ್ಕೂಟವಾಗಿದೆ. ಯಾವ ರಾಜ್ಯಗಳಿಗೂ ಬೇರ್ಪಡುವ ಹಕ್ಕಿಲ್ಲಾ.ಸಂವಿಧಾನವು ಪ್ರಜೆಗಳಿಗೆ ಮೂಲಭೂತ ಹಕ್ಕುಗಳು ಮತ್ತು ಸೌಲಭ್ಯಗಳ ಜೊತೆ ಜೊತೆಗೆ ಭಾರತ ದೇಶದ ಏಕತೆ ಮತ್ತು ಅಭಿವೃದ್ಧಿಗೆ ಎಲ್ಲಾ ಪ್ರಜೆಗಳು ಪಾಲಿಸಲೇ ಬೇಕಾದ ಕರ್ತವ್ಯಗಳನ್ನು ನೀಡಿದೆ. ಪ್ರಜೆಗಳು ಸಂವಿಧಾನ ತಮಗೆ ನೀಡಿರುವ ಹಕ್ಕುಗಳನ್ನು ಅನುಭವಿಸಿ ಕರ್ತವ್ಯಗಳನ್ನು ಪಾಲಿಸಬೇಕು.

ದೇಶ ಅಂದಿನಿಂದ ಇಂದಿನವರೆಗೂ ನಡೆದು ಬಂದ ದಾರಿಯಲ್ಲಿ ಅನೇಕ ಅಹಿತಕರ ಘಟನೆಗಳು ಸಂಭವಿಸಿ ದೇಶ ದುರ್ಬಲಗೊಳ್ಳುತ್ತಿದೆ. ಭಾರತ ಜ್ಯಾತ್ಯಾತೀತ ರಾಷ್ಟ್ರವಾಗಿದ್ದು, ಶಾಂತಿ ನೆಮ್ಮದಿಯ ತಾಣ ಎನಿಸಿಕೊಂಡಿದೆ. ಮಸೀದಿ, ಚರ್ಚ್‌, ಬಸದಿ, ವಿಹಾರಗಳು ಕೋಮುವಾದವನ್ನು ಬಿತ್ತುತ್ತಿರುವುದು ವಿಷಾದದ ಸಂಗತಿ. ಭಾರತೀಯರಾದ ನಾವು ರಾಷ್ಟ್ರಪ್ರೇಮ, ಐಕ್ಯತೆ, ಸಹಭಾಳ್ವೆ, ಸಹೋದರತೆ ಬಾಳುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸೋಣಾ.

How much do you know the importance of Republic Day ? Read Hemant Chinnu writing

Comments are closed.