ಭಾರತದಲ್ಲಿ ಹೊಸ ದಾಖಲೆ ಬರೆದ ಕೊರೊನಾ : 24 ಗಂಟೆಯಲ್ಲಿ 3.32 ಲಕ್ಷ ಸೋಂಕು, 2,263 ಸಾವು

ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಸೋಂಕು ಈ ಬಾರಿ ಹೊಸ ದಾಖಲೆ ಬರೆದಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 3.32 ಲಕ್ಷ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಬರೋಬ್ಬರಿ 2,263 ಮಂದಿ ಸಾವನ್ನಪ್ಪಿದ್ದಾರೆ.

ಕೊರೊನಾ ಎರಡನೇ ಅಲೆಯ ಆರ್ಭಟ ದಿನೇ ದಿನೇ ಹೆಚ್ಚುತ್ತಲೇ ಇದೆ. ದೇಶದಲ್ಲಿ ಕೊರೊನಾ ಸೋಂಕು ಗರಿಷ್ಠ ಮಟ್ಟಕ್ಕೇರುವ ಸೂಚನೆಯನ್ನು ನೀಡುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 3,32,730 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,62,63,695ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಒಂದೆಡೆ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ರೆ, ಇನ್ನೊಂದೆಡೆಯಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿಯೂ ಏರಿಕೆಯಾಗುತ್ತಿದೆ. ಕಳೆದೊಂದು ದಿನದ ಅವಧಿಯಲ್ಲಿ ಬರೋಬ್ಬರಿ 2,263 ಮಂದಿ ಸಾವನ್ನಪ್ಪಿದ್ದು, ದೇಶದಲ್ಲಿ ಇದುವರೆಗೆ ಹೆಮ್ಮಾರಿಯ ಆರ್ಭಟಕ್ಕೆ 1,86,920 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿದ್ದರೂ ಕೂಡ ಸಕ್ರೀಯ ಪ್ರಕರಣಗಳ ಸಂಖ್ಯೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದೆ.

ದೇಶದಲ್ಲಿ ಒಟ್ಟು 24,28,616 ಸಕ್ರೀಯ ಪ್ರಕರಣಗಳಿವೆ. ದೇಶದಲ್ಲಿ ಇದುವರೆಗೆ ಒಟ್ಟು 13,54,78,420 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

Comments are closed.