Dilip Ghosh:ಸೋಲಿಗೆ ತಲೆದಂಡ: ಪಶ್ಚಿಮಬಂಗಾಳ ಬಿಜೆಪಿಯಿಂದ ಹೊರಬಿದ್ದ ದಿಲೀಪ್ ಘೋಷ್

ಪಶ್ಚಿಮಬಂಗಾಳದಲ್ಲಿ ಬಿಜೆಪಿಗೆ ಮತ್ತಷ್ಟು ಚೈತನ್ಯ ತುಂಬುವ ಉದ್ದೇಶದಿಂದ ಪಕ್ಷದ ಪದಾಧಿಕಾರಿಗಳನ್ನು ಬದಲಾಯಿಸಿ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ. ಪಶ್ಚಿಮಬಂಗಾಳದ  ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ದಿಲೀಪ್ ಘೋಷ್ ಅವರನ್ನು  ಪಶ್ಚಿಮಬಂಗಾಳದ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ವೈಯಕ್ತಿಕವಾಗಿ ಈ ಆದೇಶ ದಿಲೀಪ್ ಘೋಷ್ ಅವರ ಮುಜುಗರಕ್ಕೆ ಕಾರಣವಾಗಿದ್ದು, ದಿಲೀಪ್ ಘೋಷ್ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ಪಶ್ಚಿಮ ಬಂಗಾಳ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಪಶ್ಚಿಮಬಂಗಾಳದಲ್ಲಿ ಅಧಿಕಾರಕ್ಕೆ ತರುವ ಹೊಣೆಗಾರಿಕೆ ದಿಲೀಪ್ ಘೋಷ್ ಮೇಲಿತ್ತು. ಬಿಜೆಪಿಯ ಹಲವು ಘಟಾನುಘಟಿ ನಾಯಕರು ರೋಡ್ ಶೋ ನಡೆಸಿ ದೀದಿಯ ಮೇಲೆ ವಾಗ್ದಾಳಿ ನಡೆಸಿದರೂ ಬಿಜೆಪಿ ಗೆಲುವು ಸಾಧ್ಯವಾಗಲಿಲ್ಲ.

ಸ್ಪಷ್ಟ ಬಹುಮತದೊಂದಿಗೆ ದೀದಿ ಅಧಿಕಾರಕ್ಕೇರಿದ್ದರು. ಈ ಮಧ್ಯೆ ಬಿಜೆಪಿ 77 ಸ್ಥಾನಗಳನ್ನು ಪಡೆದರೂ ಹಲವು ಶಾಸಕರು ಟಿಎಂಸಿಯೊಂದಿಗೆ ಕೈಜೋಡಿಸಿದ್ದರಿಂದ ಶಾಸಕರ ಸಂಖ್ಯೆ 71 ಕ್ಕೆ ಇಳಿದಿತ್ತು. ಈ ಎಲ್ಲ ವೈಫಲ್ಯಗಳ ಹಿನ್ನೆಲೆಯಲ್ಲಿ ದಿಲೀಪ್ ಘೋಷ್ ಅವರನ್ನು ರಾಜ್ಯದಿಂದ ಹೊರಗಿಟ್ಟು ಬಲುರಘಾಟ್ ಲೋಕಸಭಾ ಕ್ಷೇತ್ರದ ಸಂಸದ ಸುಖಾಂತ್ ಮಜುಮದಾರ್ ಅವರನ್ನು ಪಶ್ಚಿಮಬಂಗಾಳ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಆದರೆ ವಿಧಾನಸಭೆ ಚುನಾವಣೆ ಸೋಲಿಗೂ ಹಾಗೂ ಘೋಷ್ ಬದಲಾವಣೆಗೂ ಸಂಬಂಧವಿಲ್ಲ. ಅವಧಿ ಮುಗಿದಿದ್ದರಿಂದ ಸಹಜವಾಗಿ ಬದಲಾಯಿಸಲಾಗಿದೆ ಎಂದು ಬಿಜೆಪಿ ನಾಯಕರು ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.

(Dilip gosh appointed has vice president of bjp)

Comments are closed.