Sukanta Majumdar: ಚೊಚ್ಚಲ ಎಂಪಿ, ಬಾಟನಿ ಪ್ರೊಫೆಸರ್ ಹೆಗಲಿಗೆ ಪಶ್ಚಿಮಬಂಗಾಳ ಬಿಜೆಪಿ ಜವಾಬ್ದಾರಿ

ಕೋಲ್ಕತ್ತಾ: ಪಶ್ಚಿಮಬಂಗಾಳದ ಅಧಿಕಾರ ಗದ್ದುಗೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಪಶ್ಚಿಮಬಂಗಾಳದ ಬಿಜೆಪಿಗೆ ಭರ್ಜರಿ ಸರ್ಜರಿ ನಡೆಸಿದ್ದು, ಸೋಲಿನ ಕಾರಣಕ್ಕೆ ದಿಲೀಪ್ ಘೋಷ್ ರನ್ನು ರಾಜ್ಯ ಬಿಜೆಪಿಯಿಂದ ಹೊರಗಿಟ್ಟ ಹೈಕಮಾಂಡ್ ಸದ್ಯ ದೀದಿ ವಿರುದ್ಧ ಬಿಜೆಪಿ ಸೇನಾಧಿಪತಿಯಾಗಿ ಚೊಚ್ಚಲ ಎಂಪಿ 41 ವರ್ಷದ ಸುಖಾಂತಾ ಮಜಮುದಾರ್ ರನ್ನು ನೇಮಿಸಿದೆ.

ದೀದಿಯ ತೃಣಮೂಲ ಕಾಂಗ್ರೆಸ್ ನ್ನು ಅಧಿಕಾರದಿಂದ ಕೆಳಕ್ಕಿಳಿಸುವ ಕನಸಿನಲ್ಲಿರುವ ಬಿಜೆಪಿ ಪಶ್ಚಿಮಬಂಗಾಳದ ಬಿಜೆಪಿ ಪದಾಧಿಕಾರಿಗಳನ್ನು ಬದಲಾಯಿಸಿದೆ. ಬಲರಘಾಟ್ ನಿಂದ ಮೊದಲ ಬಾರಿಗೆ ಲೋಕಸಭಾ ಸದಸ್ಯರಾಗಿರುವ ಯುವನಾಯಕ ಸುಖಾಂತಾ ಮಜಮುದಾರ್ ಹೆಗಲಿಗೆ ಕಮಲ ಪಾಳಯದ ಹೊರೆ ಹೊರಿಸಿದೆ.

ಯೂನಿವರ್ಸಿಟಿ ಆಫ್ ನಾರ್ತ್ ಬೆಂಗಾಲನಲ್ಲಿ ಬಾಟನಿ ವಿಷಯದಲ್ಲಿ ಪಿಎಚ್ಡಿ ಪದವಿ ಪಡೆದಿರುವ ಸುಖಾಂತಾ ಮಜಮುದಾರ್ ಬಿಜೆಪಿಯ ಕಟ್ಟಾ ಕಾರ್ಯಕರ್ತರಾಗಿದ್ದು, ಅವರ ಆಯ್ಕೆಯಲ್ಲಿ ಆರ್.ಎಸ್.ಎಸ್ ನಾಯಕರ ಶಿಫಾರಸ್ಸಿದೆ ಎನ್ನಲಾಗುತ್ತಿದೆ.

ನನ್ನಂಥ ಕಾರ್ಯಕರ್ತನಿಗೆ ಪಕ್ಷ ಇಂಥ ಮಹತ್ತರವಾಗ ಜವಾಬ್ದಾರಿಯನ್ನು ನೀಡಿದೆ. ಇದು ಬಿಜೆಪಿಯಂತಹ ಪಾರ್ಟಿಯಲ್ಲಿ ಮಾತ್ರ ಸಾಧ್ಯವಿದೆ. ಹೈಕಮಾಂಡ್ ನನ್ನ ಮೇಲೆ ಇಟ್ಟಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಪಶ್ಚಿಮಬಂಗಾಳದ ಬಿಜೆಪಿಯ ನೂತನ ಸಾರಥಿ  ಸುಖಾಂತಾ ಮಜಮುದಾರ್ ಪ್ರತಿಕ್ರಿಯಿಸಿದ್ದಾರೆ.

ಮಾತ್ರವಲ್ಲ ರಾಜಕೀಯ ಪಕ್ಷ ಎಂಬುದು ನದಿಯಿದ್ದಂತೆ ಇದರಲ್ಲಿ ಒಳಹರಿವು ಮತ್ತು ಹೊರಹರಿವು ಸಾಮಾನ್ಯ. ತಮ್ಮ ಉದ್ದೇಶ ಈಡೇರದೇ ಇದ್ದಾಗ ಕಾರ್ಯಕರ್ತರು ಪಕ್ಷದಿಂದ ದೂರ ಸರಿಯಬಹುದು. ಆದರೆ ಬಿಜೆಪಿ ಎಂದಿಗೂ ತನ್ನ ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.

ಮುಂದಿನ ಚುನಾವಣೆಯಲ್ಲಿ ದೀದಿಯನ್ನು ಹಣಿಯಲು ಸ್ಥಳೀಯ ಪ್ರಭಾವಿ ವಿದ್ಯಾವಂತ ನಾಯಕನ ಹೆಗಲಿಗೆ ಪಕ್ಷದ ಜವಾಬ್ದಾರಿ ನೀಡಿರುವ ಬಿಜೆಪಿ ನೀರಿಕ್ಷೆಯನ್ನು ಸುಖಾಂತಾ ಎಷ್ಟರ ಮಟ್ಟಿಗೆ ಯಶಸ್ವಿಗೊಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.  

(sukanta majumdar first time mp is bengal bjp new chief)

Comments are closed.