Karnataka Hijab Ban : ಹಿಜಾಬ್‌ ಸಂಘರ್ಷ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಯ್ತು ಮೇಲ್ಮನವಿ ಅರ್ಜಿ

ಬೆಂಗಳೂರು : ರಾಜ್ಯದಾದ್ಯಂತ ತಿಂಗಳುಗಳ ಕಾಲ ವಿವಾದ ಸೃಷ್ಟಿಸಿದ್ದ ಹಿಜಾಬ್ ವಸ್ತ್ರಸಂಹಿತೆ ವಿವಾದಕ್ಕೆ (Karnataka Hijab Ban) ಕೊನೆಗೂ ತೆರೆ ಬಿದ್ದಿದ್ದು, ಹೈಕೋರ್ಟ್ ನ ತ್ರೀ ಸದಸ್ಯ ಪೀಠ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶವಿಲ್ಲ. ಸರ್ಕಾರ ರೂಪಿಸಿದ ವಸ್ತ್ರ ಸಂಹಿತೆಯೇ ಅಂತಿಮ ಎಂದಿದೆ. ಹೈಕೋರ್ಟ್ ತ್ರೀಸದಸ್ಯ ಪೀಠದ ತೀರ್ಪು ಅರ್ಜಿದಾರರಿಗೆ ಹಾಗೂ ಮುಸ್ಲಿಂ ಸಂಘಟನೆಗಳಿಗೆ ತೃಪ್ತಿ ತಂದಿಲ್ಲ. ಹೀಗಾಗಿ ತೀರ್ಪು ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ ಮೇಲ್ಮನವಿ ಸುಪ್ರೀಂ ಕೋರ್ಟ್ ಅಂಗಳ ತಲುಪಿದೆ.

ಹೈಕೋರ್ಟ್ ತ್ರೀಸದಸ್ಯ ಪೀಠ ನೀಡಿದ ಹಿಜಾಬ್ ಕಡ್ಡಾಯವಲ್ಲ ಎಂಬ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧವಾಗಿದ್ದ ಉಡುಪಿ ಮೂಲದ ಆರು ವಿದ್ಯಾರ್ಥಿನಿ ಯರ ತೀರ್ಪು ಪ್ರಕಟಗೊಂಡ ಕೆಲವೇ ಗಂಟೆಯಲ್ಲಿ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಅಂಗಳಕ್ಕೆ ಕಾಲಿರಿಸಿದ್ದಾರೆ. ಸುಪ್ರೀಂ ಕೋರ್ಟ್ ಗೆ ಹಿಜಾಬ್ ಧರಿಸಲು ಅವಕಾಶ ಕೋರಿ ಅರ್ಜಿ ಸಲ್ಲಿಕೆಯಾಗಿದ್ದು, ಉಡುಪಿಯ ಆರು ವಿದ್ಯಾರ್ಥಿನಿಯರ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ.ಹೈಕೋರ್ಟ್ ನಲ್ಲಿ ಹಿಜಾಬ್ ವಿದ್ಯಾರ್ಥಿನಿಯರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ದೇವದತ್ ಕಾಮತ್ ಸುಪ್ರೀಂ ಕೋರ್ಟ್ ನಲ್ಲೂ ಹಿಜಾಬ್ ಪರ ವಕಾಲತ್ತು ವಹಿಸಲಿದ್ದಾರೆ ಎನ್ನಲಾಗಿದೆ.

ಹೈಕೋರ್ಟ್ ಪ್ರಕಟಿಸಿದ ಹಿಜಾಬ್ ತೀರ್ಪನ್ನು ರಾಜ್ಯ ಸರ್ಕಾರ, ಸಿಎಂ ಬೊಮ್ಮಾಯಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಐತಿಹಾಸಿಕ ತೀರ್ಪು ಎಂದು ಬಣ್ಣಿಸಿದ್ದು, ಇನ್ನು ಎಲ್ಲ ವಿವಾದ ಗಳಿಗೆ ತೆರೆ ಎಳೆದು ಹೈಕೋರ್ಟ್ ಆದೇಶದಂತೆ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಕಾಲೇಜಿಗೆ ಹಾಜರಾಗಿ ಪರೀಕ್ಷೆ ಹಾಗೂ ಶಿಕ್ಷಣದ ಬಗ್ಗೆ ಗಮನ ಹರಿಸುವಂತೆ ಸರ್ಕಾರ ಹಾಗೂ ‌ಸಚಿವರು ಮನವಿ ‌ಮಾಡಿದ್ದಾರೆ. ಆದರೆ ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪಿಗೆ ಮುಸ್ಲಿಂ ಸಂಘಟನೆಗಳು, ಧಾರ್ಮಿಕ ಚಿಂತಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಹಿಜಾಬ್ ನ ಹೈಕೋರ್ಟ್ ತೀರ್ಪಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಸಮಧಾನ ಹಂಚಿಕೊಂಡಿರುವ ಕ್ಯಾಂಪಸ್‌ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಎಮ್. ಎಸ್. ಸಾಜಿದ್, ಕರ್ನಾಟಕ ಹೈಕೋರ್ಟ್ ಜನರ ಸಾಂವಿಧಾನಿಕವಾದ ಹಕ್ಕನ್ನು ತಿರಸ್ಕರಿಸಿದೆ.ಸಂವಿಧಾನ ಬಾಹಿರವಾದ ತೀರ್ಪುಗಳನ್ನು ನಾವೆಂದೂ ಒಪ್ಪಿಕೊಳ್ಳೋದಿಲ್ಲ. ಜನರ ಹಕ್ಕನ್ನು ಹತ್ತಿಕ್ಕುವುದರ ವಿರುದ್ಧ ನಮ್ಮ‌ಹೋರಾಟ ಇನ್ನೂ ಮುಂದುವರೆಯಲಿದೆ. ಈ ಹೋರಾಟಕ್ಕೆ ಸಮಾನ‌ಮನಸ್ಕರು ಕೈಜೋಡಿಸಬಹುದೆಂದು ಸಾಜಿದ್ ಕರೆ ನೀಡಿದ್ದಾರೆ.

ಇನ್ನೊಂದೆಡೆ ಕರ್ನಾಟಕ ವಕ್ಪ್ ಬೋರ್ಡ್ ಕೂಡ ಹೈಕೋರ್ಟ್ ತೀರ್ಪಿಗೆ ಅಸಮಧಾನ ವ್ಯಕ್ತಪಡಿಸಿದ್ದು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದೆ. ಕೇವಲ ವಿದ್ಯಾರ್ಥಿನಿಯರು ಮಾತ್ರವಲ್ಲದೇ ಉಡುಪಿ ಭಾಗದ ಮಸೀದಿಗಳ ಸಂಘವೂ ಈ ಆದೇಶದ ವಿರುದ್ದ ಸುಪ್ರಿಂ ಮೆಟ್ಟಿಲೇರಲು ಸಿದ್ದವಾಗಿದೆ ಎಂದು ಮುಸ್ಲಿಂ ನಾಯಕರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಉಡುಪಿಯಿಂದ ಹೈಕೋರ್ಟ್ ವರೆಗೆ: ಇಲ್ಲಿದೆ ಹಿಜಾಬ್ ವಿವಾದದ ವಿವರ

ಇದನ್ನೂ ಓದಿ : ಹೈಕೋರ್ಟ್‌ ಐತಿಹಾಸಿಕ ತೀರ್ಪು, ಶಾಲೆಗಳಲ್ಲಿ ಹಿಜಾಬ್‌ ನಿಷೇಧ : ಹಿಜಾಬ್‌ ಇಸ್ಲಾಂನ ಅತ್ಯಗತ್ಯ ಭಾಗ ಅಲ್ಲ

( Karnataka Hijab Ban Challenged In Supreme Court After High Court)

Comments are closed.