ಕೇರಳ ರಾಜ್ಯ ಕಡುಬಡತನದಿಂದ ಮುಕ್ತ : ಸಿಎಂ ಪಿಣರಾಯಿ ವಿಜಯನ್ ಘೋಷಣೆ
Kerala: ಕೇರಳ ರಾಜ್ಯವು ತನ್ನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದೆ. ತೀವ್ರ ಬಡತನವನ್ನು ನಿರ್ಮೂಲನೆ ಮಾಡಿದ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ವಿಧಾನಸಭೆಯಲ್ಲಿ ಇದನ್ನು ಘೋಷಿಸಿದ್ದಾರೆ.
‘ಇಂದು ಕೇರಳ ಹೊಸ ಇತಿಹಾಸವನ್ನು ನಿರ್ಮಿಸಿದೆ. ನಾವು ಕೇರಳವನ್ನು ಕಡುಬಡತನವಿಲ್ಲದ ಭಾರತದ ಮೊದಲ ರಾಜ್ಯವನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ.
ನಮ್ಮ ಸರ್ಕಾರದ ಐತಿಹಾಸಿಕ ಯೋಜನೆಗಳು, ಕಾನೂನು ಮತ್ತು ನೀತಿಗಳಿಂದಾಗಿ ಇದು ಸಾಧ್ಯವಾಗಿದೆ.
ನವ ಕೇರಳದ ಸೃಷ್ಟಿಯಲ್ಲಿ ನಾವು ಹೊಸ ಮೈಲಿಗಲ್ಲು ಸಾಧಿಸಿದ್ದೇವೆ’ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
2021ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಕೇರಳದಲ್ಲಿ ಕಡುಬಡತನ ನಿರ್ಮೂಲನೆ ನಮ್ಮ ಪ್ರಮುಖ ಘೋಷಣೆಗಳ ಪೈಕಿ ಒಂದಾಗಿತ್ತು.
ಹೀಗಾಗಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಾವು ನಮ್ಮ ಜನತೆಗೆ ನೀಡಿದ ಮಾತನ್ನು ಈಡೇರಿಸಿದ್ದೇವೆ ಎಂದು ಪಿಣರಾಯಿ ವಿಜಯನ್ ಹೇಳಿದರು.
ಇತ್ತ ಕಾಂಗ್ರೆಸ್ ನೇತೃತ್ವದ ಯುಡಿಎಫ್ ವಿರೋಧ ಪಕ್ಷವು ಪಿಣರಾಯಿ ವಿಜಯನ್ ಅವರ ಹೇಳಿಕೆಯು ಸುಳ್ಳು ಎಂದು ಹೇಳಿದೆ ಮತ್ತು ಅಧಿವೇಶನವನ್ನು ಬಹಿಷ್ಕರಿಸಿದೆ.
ಇದನ್ನೂ ಓದಿ: JEE ಮೇನ್ಸ್ 2026 ಸೆಷನ್ 1 ರ ನೋಂದಣಿ ಪ್ರಾರಂಭ: ಪಠ್ಯಕ್ರಮ, ಪರೀಕ್ಷೆಯ ಮಾದರಿ ತಿಳಿಯಿರಿ
ಕೇರಳ ಯಾವ ರೀತಿಯಲ್ಲಿ ಕಡುಬಡತನ ನಿರ್ಮೂಲನೆ ಮಾಡಿದೆ ?
ಭಾರತದ ಮೊದಲ 100 ಪ್ರತಿಶತ ಸಾಕ್ಷರತೆ ಸಾಧಿಸಿದ ಮೊದಲ ರಾಜ್ಯ. ಮೊದಲ ಡಿಜಿಟಲ್ ಸಾಕ್ಷರ ರಾಜ್ಯ ಮತ್ತು ಸಂಪೂರ್ಣ ವಿದ್ಯುದ್ದೀಕರಣಗೊಂಡ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೇರಳವು ಇದೀಗ ತೀವ್ರ ಬಡತನದಿಂದಲೂ ಹೊರ ಬಂದ ಭಾರತದ ಮೊದಲ ರಾಜ್ಯ ಎನಿಸಿದೆ.
1,000 ಕೋಟಿ ರೂ.ಗಳಿಗೂ ಹೆಚ್ಚಿನ ಹೂಡಿಕೆಯೊಂದಿಗೆ, ರಾಜ್ಯ ಸರ್ಕಾರವು 20,648 ಕುಟುಂಬಗಳಿಗೆ ದೈನಂದಿನ ಆಹಾರವನ್ನು ಖಾತ್ರಿಪಡಿಸಿತು.
ಅವರಲ್ಲಿ 2,210 ಕುಟುಂಬಗಳಿಗೆ ಬಿಸಿ ಊಟ, 85,721 ವ್ಯಕ್ತಿಗಳಿಗೆ ಅಗತ್ಯ ಚಿಕಿತ್ಸೆ ಮತ್ತು ಔಷಧಿ ಮತ್ತು ಸಾವಿರಾರು ಜನರಿಗೆ ವಸತಿ ಒದಗಿಸಲಾಯಿತು.
ಕೇರಳ ಸರ್ಕಾರವು ಜನತೆಗೆ 5400ಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿಕೊಟ್ಟಿದೆ. 5522 ಮನೆಗಳ ದುರಸ್ತಿ ಕಾರ್ಯ ಕೈಗೊಂಡಿದೆ ಹಾಗೂ 2713 ಭೂ ರಹಿತ ಕುಟುಂಬಗಳಿಗೆ ಭೂಮಿಯನ್ನು ಒದಗಿಸಲಾಗಿದೆ.
ಇದಲ್ಲದೆ, 21,263 ಜನರು ಮೊದಲ ಬಾರಿಗೆ ಪಡಿತರ ಚೀಟಿಗಳು, ಆಧಾರ್ ಮತ್ತು ಪಿಂಚಣಿಗಳಂತಹ ದಾಖಲೆಗಳನ್ನು ಪಡೆದಿದ್ದಾರೆ ಎಂದು ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ.



