ಕುವೈತ್​ನಲ್ಲಿ ಜಾರಿಯಾಯ್ತು ವಲಸಿಗರ ಕಾಯ್ದೆ : ಉದ್ಯೋಗ ನಷ್ಟದ ಭೀತಿಯಲ್ಲಿ 10 ಲಕ್ಷ ಭಾರತೀಯರು

0

ಕುವೈತ್ : ಕೊರೊನಾ ವೈರಸ್ ಸೋಂಕಿನಿಂದಾಗಿ ಭಾರತೀಯರು ವಿದೇಶಗಳಲ್ಲಿ ಲಾಕ್ ಡೌನ್ ಆಗಿದ್ದಾರೆ. ಈ ನಡುವಲ್ಲೇ ಕವೈತ್​ನ ರಾಷ್ಟ್ರೀಯ ಸಂಸತ್ತು ವಲಸಿಗರ ಕೋಟಾ ಮಸೂದೆಯನ್ನು ಅಂಗೀಕರಿಸಿದೆ. ಇದರಿಂದಾಗಿ ಕುವೈತ್ ನಲ್ಲಿ ಉದ್ಯೋಗದಲ್ಲಿದ್ದ ಸುಮಾರು 10 ಲಕ್ಷ ಮಂದಿ ಭಾರತೀಯರ ಭವಿಷ್ಯಕ್ಕೆ ಸಂಚಕಾರ ಬಂದಿದೆ.

ಕುವೈತ್ ನಲ್ಲಿ ಉದ್ಯೋಗ ಕ್ಷೇತ್ರದಲ್ಲಾಗಿರುವ ಅಸಮತೋಲನವನ್ನು ಭವಿಷ್ಯದಲ್ಲಿ ಸರಿಪಡಿಸುವ ಉದ್ದೇಶದಿಂದ ವಲಸಿಗರ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ವಲಸಿಗರ ಕಾಯ್ದೆಯ ಪ್ರಕಾರ ಕುವೈತ್ ನಲ್ಲಿ ಕೆಲಸ ಮಾಡುತ್ತಿರುವ ವಲಸಿಗರ ಪ್ರಮಾಣವನ್ನು ಶೇ.70ರಿಂದ ಶೇ.30ಕ್ಕೆ ಇಳಿಸಲು ಉದ್ದೇಶಿಸಲಾಗಿದೆ. ಕುವೈತ್​ ಪ್ರಧಾನಿ ಶೇಖ್​ ಸಬಾ ಅಲ್​ ಖೈದ್​ ಅಲ್​ ಸಬಾ ವಲಸಿಗರ ಕಾಯ್ದೆಗೆ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಸಂಸತ್​ನಲ್ಲಿ ಈ ಕಾಯ್ದೆಗೆ ಅನುಮೋದನೆ ದೊರೆತಿದೆ.

ವಲಸಿಗರ ಮಸೂದೆಯ ಪ್ರಕಾರ ಯಾವುದೇ ರಾಷ್ಟ್ರ, ತನ್ನ ರಾಷ್ಟ್ರದಲ್ಲಿರುವ ಒಟ್ಟು ಜನಸಂಖ್ಯೆಯ ಶೇ.15 ಭಾರತೀಯ ಉದ್ಯೋಗಿಗಳನ್ನು ಹೊಂದಲು ಅವಕಾಶವಿದೆ. ಹಾಗಾಗಿ ಶೇ.15ಕ್ಕಿಂತ ಹೆಚ್ಚಿರುವ ಭಾರತೀಯ ಉದ್ಯೋಗಿಗಳನ್ನು ಸ್ವದೇಶಕ್ಕೆ ರವಾನಿಸುವ ಕಾರ್ಯಸೂಚಿ ಮತ್ತು ಕಾರ್ಯತಂತ್ರವನ್ನು ರೂಪಿಸುವ ಜವಾಬ್ದಾರಿಯನ್ನು ಸಮಿತಿಯೊಂದಕ್ಕೆ ವಹಿಸಲಾಗಿದೆ.

ಕುವೈತ್ ನಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಭಾರತೀಯರೇ ನೆಲೆಸಿದ್ದಾರೆ. ಕುವೈತ್ ನಲ್ಲಿ ಒಟ್ಟು 4.8 ದಶಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಈ ಪೈಕಿ 3.4 ದಶಲಕ್ಷ ಮಂದಿ ವಲಸಿಗರೇ ಇದ್ದಾರೆ. ಇದೀಗ ವಲಸಿಗರ ಕಾಯ್ದೆ ಜಾರಿಗೆ ಬಂದ ನಂತರದಲ್ಲಿ ವಲಸಿಗರ ಸಂಖ್ಯೆ 1.45 ದಶಲಕ್ಷಕ್ಕೆ ಕುಸಿಯಲಿದೆ. ಹೀಗಾದ್ರೆ ಕುವೈತ್ ನಲ್ಲಿ ನೆಲೆಸಿರುವ ಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ ಎಂದು ಕುವೈತ್ ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಕೇವಲ ಕುವೈತ್ ಮಾತ್ರವಲ್ಲ ಹಲವು ಅರಬ್ ರಾಷ್ಟ್ರಗಳು ಕೂಡ ವಲಸಿಗರ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿವೆ. ಹೀಗಾದ್ರೆ ಯುನೈಟೆಡ್ ಅರಬ್ ಎಮಿರೆಟ್ಸ್ ನಲ್ಲಿ ನೆಲೆಸಿರುವ ಲಕ್ಷಾಂತರ ಮಂದಿ ಭಾರತೀಯರು ಸಂಕಷ್ಟದ ಸುಳಿಗೆ ಸಿಲುಕಲಿದ್ದಾರೆ.

ಯುಎಇಯಲ್ಲೂ ಕಾದಿದೆಯಾ ಶಾಕ್​: ಯುನೈಟೆಡ್​ ಅರಬ್​ ಎಮಿರೇಟ್ಸ್​ನಲ್ಲಿ ಭಾರತದಿಂದ ವಲಸೆ ಹೋಗಿರುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಲಸಿಗ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಕುರಿತು ಅಲ್ಲಿನ ಸರ್ಕಾರ ಚಿಂತನೆ ನಡೆಸಿದೆ. ಇದರಿಂದಾಗಿ ಅಲ್ಲಿಯೂ ಕೂಡ ಕುವೈತ್​ಗಿಂತಲೂ ಭಾರಿ ಶಾಕ್​ ಕಾದಿರುವುದಾಗಿ ಹೇಳಲಾಗುತ್ತಿದೆ.

Leave A Reply

Your email address will not be published.