ಪರಿಷತ್ ಚುನಾವಣೆಗೆ ಬಿಜೆಪಿ ಪಟ್ಟಿ ಫೈನಲ್: ಎಚ್. ವಿಶ್ವನಾಥ್ ಗೆ ಬಿಗ್ ಶಾಕ್ ! ಪ್ರತಾಪ್ ಸಿಂಹ ನಾಯಕ್ ಗೆ ಟಿಕೆಟ್

0

ಬೆಂಗಳೂರು : ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮ ಮಾಡಿದೆ. ಎಂಟಿಬಿ ನಾಗರಾಜ್ ಆರ್.ಶಂಕರ್, ಸುನಿಲ್ ವಯ್ಯಾಪುರೆ ಹಾಗೂ ಪ್ರತಾಪ ಸಿಂಹ ನಾಯಕ್ ಅವರಿಗೆ ಟಿಕೆಟ್ ನೀಡಿದ್ದು, ಬಿಜೆಪಿ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಎಚ್.ವಿಶ್ವನಾಥ್ ಗೆ ಬಿಜೆಪಿ ಭರ್ಜರಿ ಶಾಕ್ ಕೊಟ್ಟಿದೆ.

ವಿಧಾನ ಪರಿಷತ್ ನ 7 ಸ್ಥಾನಗಳಿಗೆ ಜೂನ್ 29ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ವಿಧಾನಸಭಾ ಬಲಾ ಬಲದ ಆಧಾರದ ಮೇಲೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 4, ಕಾಂಗ್ರೆಸ್ 2 ಹಾಗೂ ಜೆಡಿಎಸ್ 1 ಸ್ಥಾನಗಳನ್ನು ಗೆಲ್ಲಲು ಅವಕಾಶವಿದೆ. ಈ ಹಿನ್ನೆಲೆಯಲ್ಲೀಗ ಬಿಜೆಪಿ ಚುನಾವಣೆಗೆ ನಾಲ್ವರ ಹೆಸರನ್ನು ಫೈನಲ್ ಮಾಡಿದೆ.

ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಕಾಂಗ್ರೆಸ್ ವಿರುದ್ದ ಮುನಿಸಿಕೊಂಡು ಬಿಜೆಪಿ ಸೇರಿದ್ದ ಎಂಟಿಬಿ ನಾಗರಾಜ್, ಆರ್.ಶಂಕರ್, ಎಚ್.ವಿಶ್ವನಾಥ್ ಹಾಗೂ ಬಿಎಸ್ ವೈ ಪರಮಾಪ್ತ ಸುನಿಲ್ ವಯ್ಯಾಪುರೆ ಅವರಿಗೆ ಟಿಕೆಟ್ ಖಚಿತವೆಂದೇ ಹೇಳಲಾಗಿತ್ತು. ಆದರೆ ವಿಧಾನ ಪರಿಷತ್ ಗೆ ಆಯ್ಕೆಯಾಗಿ ಸಚಿವರಾಗುವ ಕನಸು ಕಂಡಿದ್ದ ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಎಂಟಿಬಿ ನಾಗರಾಜ್, ಆರ್. ಶಂಕರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.

ಉಳಿದಂತೆ ಬಿಜೆಪಿ ಪರಮಾಪ್ತ, ಮಾಜಿ ಶಾಸಕ ಸುನಿಲ್ ವಯ್ಯಾಪುರೆ ಅವರನ್ನು ವಿಧಾನ ಪರಿಷತ್ ಗೆ ಕಳಿಹಿಸೋದಕ್ಕೆ ಹೈಕಮಾಂಡ್ ಅಸ್ತು ಎಂದಿದೆ. ಆಪರೇಷನ್ ಕಮಲದ ವೇಳೆಯಲ್ಲಿ ನಡೆದ ಉಪಚುನಾವಣೆಯಲ್ಲಿ ತನ್ನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಸುನಿಲ್ ವಯ್ಯಾಪುರೆ ಅವರಿಗೆ ಬಿಎಸ್ ಯಡಿಯೂರಪ್ಪ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಇದೀಗ ಕೊಟ್ಟ ಮಾತಿನಂತೆಯೇ ಸಿಎಂ ನಡೆದುಕೊಂಡಿದ್ದಾರೆ.

ಇನ್ನು ಬಿಜೆಪಿಯ ಹಿರಿಯ ಮುಖಂಡ, ದಕ್ಷಿಣ ಕನ್ನಡ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾಗಿರುವ ಪ್ರತಾಪ್ ಸಿಂಹ ನಾಯಕ್ ಅವರಿಗೆ ಬಿಜೆಪಿ ಮಣೆ ಹಾಕಿದೆ. ಇನ್ನು ಕಾಂಗ್ರೆಸ್ 2 ಹಾಗೂ ಜೆಡಿಎಸ್ ಒಂದು ಸ್ಥಾನಕ್ಕಾಗಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಜೂನ್ 29ರಂದು ಚುನಾವಣೆ ನಡೆಯಲಿದ್ದು, ಅಂದು ಸಂಜೆಯೇ ಫಲಿತಾಂಶ ಪ್ರಕಟವಾಗಲಿದೆ.

Leave A Reply

Your email address will not be published.