Crime News : ಟೆಂಪೋದೊಳಗೆ ಅತ್ಯಾಚಾರ : ಮಹಿಳೆ ಸಾವು, ಓರ್ವನ ಬಂಧನ

ಮುಂಬೈ : ಮಹಿಳೆಯೋರ್ವಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟೆಂಪೋದಲ್ಲಿ ಅತ್ಯಾಚಾರವೆಸಗಿ, ನಂತರ ಖಾಸಗಿ ಅಂಗಕ್ಕೆ ಕಬ್ಬಿಣ ಸಲಾಕೆಯಿಂದ ಹಿಂಸಿಸಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ರಾಜಸ್ತಾನ ಮೂಲದ ಆರೋಪಿ ಮೋಹನ್‌ ಚೌಹಾನ್‌ ಎಂಬಾತನನ್ನು ಬಂಧಿಸಿದ್ದಾರೆ.

ಮುಂಬೈನ ಸಾಕಿನಾಕ ಸಬ್‌ ಅರ್ಬನ್‌ ಪ್ರದೇಶ ಖೈರಾನಿ ರಸ್ತೆಯಲ್ಲಿ ಈ ಅಪರಾಧ ಕೃತ್ಯ ನಡೆದಿದೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ 35 ವರ್ಷ ಪ್ರಾಯದ ಮಹಿಳೆಯನ್ನು ಟೆಂಪೋಗೆ ಕರೆದೊಯ್ದ ಕಾಮುಕ ಅತ್ಯಾಚಾರವೆಸಗಿದ್ದಾನೆ. ನಂತರದಲ್ಲಿ ದೆಹಲಿಯ ನಿರ್ಭಯಾ ಪ್ರಕರಣದಂತೆ ಆಕೆಯ ಖಾಸಗಿ ಅಂಗಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ. ಮಹಿಳೆಯನ್ನು ರಕ್ಷಿಸಿ ರಾಜವಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಮಹಿಳೆ ಸುಮಾರು 33 ಗಂಟೆಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ್ದಾಳೆ. ಆದರೆ ಸಂತ್ರಸ್ತ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಕಾಮುಕ ಮೋಹನ್‌ ಚೌಹಾನ್‌ ಎಂಬಾತನನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ತನಿಖೆಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವುದು ದೃಢಪಟ್ಟಿದ್ದು, ವಾಹನದಲ್ಲಿಯೂ ರಕ್ತದ ಕಲೆಗಳು ಪತ್ತೆಯಾಗಿದೆ.

ಘಟನೆಯ ಬೆನ್ನಲ್ಲೇ ಮುಂಬೈ ಜನತೆ ಬೆಚ್ಚಿಬಿದ್ದಿದ್ದಾರೆ. ಇದೀಗ ಆರೋಪಿಯ ವಿರುದ್ದ ಕೊಲೆಯತ್ನ, ಅತ್ಯಾಚಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

Comments are closed.