Muslim Student Gold Medal In Sanskrit: ಸಂಸ್ಕೃತದಲ್ಲಿ 5 ಚಿನ್ನದ ಪದಕ ಬಾಚಿಕೊಂಡ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿ; ಭಾವೈಕ್ಯತೆಯ ಮಾದರಿ

ಗಜಾಲಾ ಎಂಬ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯೋರ್ವರು ಲಕ್ನೋ ವಿಶ್ವವಿದ್ಯಾನಿಲಯದಲ್ಲಿ (Lucknow University UP) ಸಂಸ್ಕೃತದಲ್ಲಿ 5 ಚಿನ್ನದ ಪದಕಗಳನ್ನು (Muslim Student Gold Medal In Sanskrit) ಪಡೆದುಕೊಂಡು ಸಾಧನೆ ಮೆರೆದಿದ್ದಾರೆ. ತಮ್ಮ ಮುಂದಿನ ಜೀವನದಲ್ಲಿ ಅವರು ಸಂಸ್ಕೃತ ಪ್ರಾಧ್ಯಾಪಕರಾಗುವ ಆಸೆ ವ್ಯಕ್ತಪಡಿಸಿದ್ದಾರೆ. ವಿಶ್ವವಿದ್ಯಾನಿಲಯದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗಜಾಲಾ ಅವರು (Gazala) ಸಂಸ್ಕೃತ ಶ್ಲೋಕಗಳು, ಗಾಯತ್ರಿ ಮಂತ್ರ ಮತ್ತು ಸರಸ್ವತಿ ವಂದನೆಗಳನ್ನು ಪಠಿಸಿದ್ದು ಅವರ ಸಾಧನೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಓರ್ವ ವ್ಯಕ್ತಿಯ ನೈಪುಣ್ಯತೆಗೂ ಅವರ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದಕ್ಕೆ ಗಜಾಲ ಅವರ ಸಾಧನೆಯೇ ಸಾಕ್ಷಿಯಾಗಿದೆ. ಎಲ್ಲರಿಗೂ ಸಮಾನ ಶಿಕ್ಷಣ ದೊರೆಯಬೇಕು. ಅಂದಹಾಗೆ ಗಜಾಲಾ ಅವರು ಕ್ಯಾನ್ಸರ್‌ಗೆ ಬಲಿಯಾದ ದಿನಗೂಲಿ ಮಾಡುವವರ ಮಗಳಾಗಿದ್ದು, ಅವರಿಗೆ ಇಬ್ಬರು ಕಿರಿಯ ಸಹೋದರರು ಮತ್ತು ಅಕ್ಕ ಸಹ ಇದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಗಜಾಲಾ ಅವರಿಗೆ ಅತ್ಯುತ್ತಮ ಸಂಸ್ಕೃತ ವಿದ್ವಾಂಸೆ ಎಂಬ ಪ್ರಶಸ್ತಿ   ಘೋಷಣೆಯಾಗಿತ್ತು. ಈ ಪ್ರಶಸ್ತಿಯನ್ನು ಫೆಬ್ರವರಿ 10 ರಂದು ಅಧ್ಯಾಪಕರ ಮಟ್ಟದ ಪದಕ ವಿತರಣಾ ಸಮಾರಂಭದಲ್ಲಿ ಲಕ್ನೋ ವಿಶ್ವವಿದ್ಯಾನಿಲಯದ ಡೀನ್ ಆಫ್ ಆರ್ಟ್ಸ್ ಪ್ರೊ. ಶಶಿ ಶುಕ್ಲಾ ಅವರು ಚಿನ್ನದ ಪದಕಗಳನ್ನು ವಿತರಿಸಿದರು.

ನಿಶಾತ್‌ಗಂಜ್‌ನ ಕಿರಿದಾದ ಲೇನ್‌ನಲ್ಲಿರುವ ಒಂದು ಸಣ್ಣ ಕೋಣೆಯ ಮನೆಯಲ್ಲಿ ಗಜಾಲಾ ಅವರು ವಾಸಿಸುತ್ತಾರೆ. 23 ವರ್ಷ ವಯಸ್ಸಿನವರಾದ ಅವರು ಪ್ರತಿದಿನ ಬೆಳಿಗ್ಗೆ 5 ಗಂಟೆಗೆದ್ದು ನಮಾಜ್ ಮಾಡಿ, ಆನಂತರ ತಮ್ಮ ಮನೆಕೆಲಸಗಳನ್ನು ಮಾಡಿ ಅಧ್ಯಯನದಲ್ಲಿ ತೊಡಗಿಕೊಳ್ಳುತ್ತಾರೆ ಎಂದು ವರದಿಯಾಗಿದೆ. ದಿನದಲ್ಲಿ ಒಟ್ಟು ಏಳು ಗಂಟೆಗಳ ಕಾಲ ಸಂಸ್ಕೃತವನ್ನು ಅಧ್ಯಯನ ಮಾಡುತ್ತಾರೆ ಎಮದು ವರದಿಯಾಗಿದೆ.

ಗಜಾಲಾ ಅವರು ಭವಿಷ್ಯದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಲು ಬಯಸುವುದಾಗಿ ತಿಳಿಸಿದ್ದಾರೆ. ಲಕ್ನೋ ವಿಶ್ವವಿದ್ಯಾನಿಲಯದಲ್ಲಿ ಎಂಎ (ಸಂಸ್ಕೃತ) ಅತ್ಯುತ್ತಮ ವಿದ್ಯಾರ್ಥಿಯಾಗಿದ್ದಕ್ಕಾಗಿ ಅವರು ಈಗ ಐದು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

“ಈ ಪದಕಗಳನ್ನು ಗೆದ್ದಿರುವುದು ನಾನು ಮಾತ್ರವಲ್ಲ, ನನ್ನ ಸಹೋದರರಾದ ಶಾದಾಬ್ ಮತ್ತು ನಯಾಬ್ ಅವರು ಶಾಲೆಯನ್ನು ತೊರೆದು ಕ್ರಮವಾಗಿ 13 ಮತ್ತು 10 ನೇ ವಯಸ್ಸಿನಲ್ಲಿ ಗ್ಯಾರೇಜ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಇದರಿಂದ ನಾನು ಸಂಸ್ಕೃತದಲ್ಲಿ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯವಾಯಿತು” ಎಂದು 5 ಚಿನ್ನದ ಪದಕಗಳನ್ನು ಗೆದ್ದಿರುವ ಗಜಾಲಾ ಅವರು ತಮ್ಮ ಕುಟುಂಬ ನೀಡಿದೆ ಎಂದು ಸ್ಮರಿಸಿಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 1

(Muslim Student Gold Medal In Sanskrit in UP Lucknow University)

Comments are closed.