ಭಟ್ಕಳದಲ್ಲಿ ಪಾಕಿಸ್ತಾನದ ಮಹಿಳೆಯ ಬಂಧನ : ಮಹಿಳೆಯ ಬಳಿ ಆಧಾರ್, ರೇಷನ್, ಓಟರ್ ಐಡಿ ಪತ್ತೆ ..!!!

ಭಟ್ಕಳ : ಪಾಕಿಸ್ತಾನದ ಪೌರತ್ವ ಹೊಂದಿದ್ದರೂ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಮಹಿಳೆಯೋರ್ವಳನ್ನ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಪಾಕಿಸ್ತಾನದ ಮಹಿಳೆಯಾಗಿರುವ ಖತೀಜಾ ಮೆಹರಿನ್ ಎಂಬಾಕೆ ಭಟ್ಕಳ ನಿವಾಸಿ ಜಾವೀದ್ ಮೊಹಿದ್ದೀನ್ ರುಕ್ನುದ್ದೀನ್ ಎಂಬಾತನ್ನ ಮದುವೆಯಾಗಿ 7 ವರ್ಷಗಳ ಕಾಲ ಭಟ್ಕಳದಲ್ಲಿ ನೆಲೆಸಿದ್ದಳು. ಮಾತ್ರವಲ್ಲ ಸುಳ್ಳು ದಾಖಲೆ ನೀಡಿ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಪಾನ್ ಕಾರ್ಡ್ ಮಾತ್ರವಲ್ಲದೇ ಚುನವಣಾ ಗುರುತಿನ ಚೀಟಿಯನ್ನು ಪಡೆದುಕೊಂಡಿದ್ದಳು. ಈ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ರಾಜ್ಯ ತನಿಖಾ ಸಂಸ್ಥೆಗೆ ಮಾಹಿತಿಯನ್ನು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆಯನ್ನು ನಡೆಸಿ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್, ಸಹಾಯಕ ಎಸ್ಪಿ ಬದರಿನಾಥ್, ಭಟ್ಕಳ ಡಿವೈಎಸ್ ಪಿ ಬೆಳ್ಳಿಯಪ್ಪ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಭಟ್ಕಳ ನಿವಾಸಿಯಾಗಿರುವ ಜಾವೀದ್ ಎಂಬಾತನನ್ನು ಖತೀಜಾ ದುಬೈನಲ್ಲಿ ಮದುವೆಯಾಗಿದ್ದಳು. ಮಹಿಳೆ ನೇಪಾಳದ ಗಡಿಯಲ್ಲಿ ಕಳ್ಳ ಮಾರ್ಗದ ಮೂಲಕ ಭಾರತಕ್ಕೆ ಪ್ರವೇಶಿಸಿ 2015ರಿಂದಲೂ ಭಟ್ಕಳದಲ್ಲಿ ನೆಲೆಸಿದ್ದಳು ಎಂದು ತಿಳಿದುಬಂದಿದೆ. ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಹಿಳೆಯ ವಿರುದ್ದ ಇದೀಗ ವಿದೇಶಿ ಕಾಯ್ದೆ ಉಲ್ಲಂಘನೆ ಸೇರಿದಂತೆ ಹಲವು ಸೆಕ್ಷನ್ ನಡಿಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.