Shashi Tharoor : ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಶಶಿ ತರೂರ್ ಗೆ ಸೋನಿಯಾ ಒಪ್ಪಿಗೆ

ನವದೆಹಲಿ : Shashi Tharoor : ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಶಶಿ ತರೂರ್ ಅವರಿಗೆ ಸೋನಿಯಾ ಗಾಂಧಿ ಒಪ್ಪಿಗೆ ಸೂಚಿಸಿದ್ದಾರೆ. ಆ ಮೂಲಕ ಶಶಿ ತರೂರ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ. ಶಶಿ ತರೂರ್ ಗೆ ಪ್ರತಿಸ್ಪರ್ಧಿಯಾಗಿ ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಸ್ಪರ್ಧಿಸಲಿದ್ದಾರೆ ಅಂತಾ ಮೂಲಗಳು ತಿಳಿಸಿವೆ.

ಅನಾರೋಗ್ಯದ ಕಾರಣದಿಂದ ಚಿಕಿತ್ಸೆಗೆ ವಿದೇಶಕ್ಕೆ ತೆರಳಿದ್ದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ದೆಹಲಿಗೆ ಮರಳಿದ್ದು, ಸೋಮವಾರ ಬೆಳಗ್ಗೆ ಸೋನಿಯಾ ಅವರನ್ನ ಶಶಿ ತರೂರ್ ಭೇಟಿ ಮಾಡಿದ್ರು. ಈ ವೇಳೆ ತಾವು ಚುನಾವಣೆಗೆ ಸ್ಪರ್ಧಿಸುತ್ತಿರುವ ವಿಚಾರವನ್ನ ಸೋನಿಯಾ ಗಾಂಧಿ ಬಳಿ ತಿಳಿಸಿದ್ರು. ಆಗ ಸೋನಿಯಾ ಗಾಂಧಿ, ‘ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಯಾರು ಬೇಕಾದರೂ ಸ್ವತಂತ್ರರು’ ಎಂದು ಶಶಿ ತರೂರ್ ಅವರಿಗೆ ತಿಳಿಸಿದ್ರು.

ಇನ್ನು ಶಶಿ ತರೂರ್ ಸೋನಿಯಾ ಗಾಂಧಿ ಭೇಟಿ ವೇಳೆಹಾಜರಿದ್ದ ಮತ್ತೊಬ್ಬ ನಾಯಕ ರಾಜ್ಯಸಭೆ ಸದಸ್ಯ ಜೈರಾಮ್ ರಮೇಶ್ ಸಹ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಎಲ್ಲರೂ ಸ್ವತಂತ್ರರಿದ್ದಾರೆ ಎಂದು ತರೂರ್ ಗೆ ತಿಳಿಸಿದ್ದಾರೆ ಅಂತಾ ಮೂಲಗಳು ತಿಳಿಸಿವೆ. ತಿರುವನಂತಪುರಂ ಲೋಕಸಭಾ ಕ್ಷೇತ್ರದ ಸಂಸದ ಶಶಿ ತರೂರ್ ಕಾಂಗ್ರೆಸ್ ಮುಖ್ಯಸ್ಥರ ಹುದ್ದೆಗೆ ತಮ್ಮ ಉಮೇದುವಾರಿಕೆಯನ್ನು ಘೋಷಿಸಿದಾಗ ಸಾಕಷ್ಟು ಸದ್ದು ಮಾಡಿದ್ರು. ಯಾಕಂದ್ರೆ ತರೂರ್ ಕಾಂಗ್ರೆಸ್ ನ ಬಂಡಾಯಗಾರ ನಾಯಕರ ಗುಂಪು ಜಿ-23 ಗೆ ಸೇರದೇ ಇದ್ರೂ, ಪಕ್ಷದೊಳಗೆ ಸುಧಾರಣೆ ತರುವ ಬಗ್ಗೆ ಧ್ವನಿ ಎತ್ತಿದ್ರು. ಮಲಯಾಳಂ ದೈನಿಕ ‘ಮಾತೃಭೂಮಿ’ಗೆ ಬರೆದ ಲೇಖನದಲ್ಲಿ, ತರೂರ್ ಅವರು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವುದು ಪಕ್ಷದ ಪುನರುಜ್ಜೀವನದ ಆರಂಭವಾಗಿದೆ ಎಂದು ಬರೆದ್ರು.

ಶಶಿ ತರೂರ್ ನಿರ್ಧಾರದಿಂದಾಗಿ ರಾಹುಲ್‌ ಗಾಂಧಿ ಅವರನ್ನು ಒಮ್ಮತದ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ನೇಮಿಸಲು ಬಯಸಿದ್ದ ಬಣಕ್ಕೆ ಹಿನ್ನಡೆಯಾಗಿದೆ. ಕುತೂಹಲಕಾರಿ ಸಂಗತಿ ಅಂದ್ರೆ, ಭಾರತ್‌ ಜೋಡೋ ಯಾತ್ರೆಯಲ್ಲಿ ನಿರತವಾಗಿರುವ ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಹೀಗಾಗಿ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗಾಂಧಿ ಕುಟುಂಬದ ಹೊರಗಿನ ಇಬ್ಬರು ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ಅಕ್ಟೋಬರ್ 17 ರಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19ರಂದು ಫಲಿತಾಂಶ ಬರಲಿದೆ. ಸೆಪ್ಟೆಂಬರ್ 24ರಿಂದ 30ನೇ ತಾರೀಖಿನವರೆಗೆ ನಾಮಪತ್ರ ಸಲ್ಲಿಕೆ ಮಾಡಬಹುದಾಗಿದೆ. ಅಲ್ಲಿಗೆ 2000ನೇ ವರ್ಷದ ಬಳಿಕ ಬರೋಬ್ಬರಿ 21 ವರ್ಷದ ನಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. 1998ರಿಂದ ಪಕ್ಷದ ಅಧ್ಯಕ್ಷೆಯಾಗಿರೋ ಸೋನಿಯಾ ಗಾಂಧಿ, ಅತಿ ಹೆಚ್ಚು ವರ್ಷ ಸೇವೆ ಸಲ್ಲಿಸಿದ ಕಾಂಗ್ರೆಸ್ ಪಕ್ಷದ ಅಧ್ಯೆಕ್ಷೆಯಾಗಿದ್ದಾರೆ. ಕಳೆದ ಲೋಕಸಭೆ ಚುನಾವಣೆ ವೇಳೆ ರಾಹುಲ್ ಗಾಂಧಿ ಅವ್ರನ್ನ ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಚುನಾವಣೆ ಸೋಲಿನ ಬಳಿಕ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು.

ರಾಹುಲ್ ಗಾಂಧಿ ಬಳಿಕ, ಸೋನಿಯಾ ಗಾಂಧಿಯೇ ಮತ್ತೆ ಅಧ್ಯೆಕ್ಷೆಯಾಗಿ ಮುಂದುವರೆದಿದ್ರು. ಹಂಗಾಮಿ ಅಧ್ಯಕ್ಷರಾಗಿ ಮತ್ತೆ ಪಕ್ಷದ ಆಡಳಿತವನ್ನು ವಹಿಸಿಕೊಂಡ ಸೋನಿಯಾ ಗಾಂಧಿ ಅವರು ಜಿ -23 ನಾಯಕರ ಬಹಿರಂಗ ಬಂಡಾಯದ ನಂತರ, 2020 ರಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದರು, ಆದರೆ CWC ಸದಸ್ಯರು ಸೋನಿಯಾ ಅವ್ರನ್ನೇ ಮುಂದುವರಿಯುವಂತೆ ಒತ್ತಾಯಿಸಿದ್ದರು. ಸತತ ಸೋಲಿನ ಬಳಿಕ ಪಕ್ಷದ ನಾಯಕತ್ವದ ವಿರುದ್ಧ ಕೆಲ ನಾಯಕರು ಸಿಡಿದೆದ್ದಿದ್ರ. ಪಕ್ಷದ ಸಾರಥ್ಯ ವಹಿಸಲು ಗಟ್ಟಿಯಾದ ನಾಯಕ ಬೇಕು ಅಂತಾ ಆಗ್ರಹಿಸಿದ್ರು. ಅಂತಹ ನಾಯಕರ ಗುಂಪನ್ನ ಜಿ-23 ನಾಯಕರು ಅಂತಾ ಕರೆಯಲಾಗ್ತಿತ್ತು.

ಇದನ್ನೂ ಓದಿ : Melukote MLA C.S. Puttaraju : ಸುಮಲತಾರ ಆಣೆ – ಪ್ರಮಾಣದ ಸವಾಲ್​ ಸ್ವೀಕರಿಸಿದ ಮೇಲುಕೋಟೆ ಶಾಸಕ ಸಿ.ಎಸ್​ ಪುಟ್ಟರಾಜು

ಇದನ್ನೂ ಓದಿ : Kumar Bangarappa :ಸೊರಬ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ: ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ವಿರುದ್ದ ಅಸಮಾಧಾನ

Shashi Tharoor to run for Congress president, gets Sonia Gandhi’s nod

Comments are closed.